ಬಿಜೆಪಿ ಮಹಾತ್ಮಾ ಗಾಂಧಿಯ ಬೃಹತ್ ಪ್ರತಿಮೆ ಯಾಕೆ ನಿರ್ಮಿಸಿಲ್ಲ: ಶಶಿ ತರೂರ್

ತಿರುವನಂತಪುರಂ,ನ.1: ಬಿಜೆಪಿ ಮಹಾತ್ಮಾ ಗಾಂಧಿಯ ಶಿಷ್ಯ ಸರ್ದಾರ್ ವಲ್ಲಭ ಬಾಯ್ ಪಟೇಲರ 182 ಮೀಟರ್ ಎತ್ತರದ ಪ್ರತಿಮೆಯನ್ನು ನಿರ್ಮಿಸಿರುವಾಗ ಗಾಂಧೀಜಿಯ ಪ್ರತಿಮೆಯನ್ನು ಯಾಕೆ ನಿರ್ಮಿಸಿಲ್ಲ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಪ್ರಶ್ನಿಸಿದ್ದಾರೆ. ತಿರುವನಂತರಪುರಂನಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ತರೂರ್, ದೇಶದಲ್ಲೆಲ್ಲೂ ಗಾಂಧೀಜಿಯ ಅಷ್ಟೊಂದು ದೊಡ್ಡ ಪ್ರತಿಮೆಯಿಲ್ಲ ಎಂದು ತಿಳಿಸಿದ್ದಾರೆ. ಗಾಂಧೀಜಿಯ ದೊಡ್ಡ ಪ್ರತಿಮೆಯಿರುವುದು ಸಂಸತ್‌ನಲ್ಲಿ. ಅದರೆ ಅವರ ಶಿಷ್ಯನ ಪ್ರತಿಮೆ 182 ಮೀ. ಎತ್ತರವಿದೆ. ಮಹಾತ್ಮಾ ಗಾಂಧಿಯ ಅಷ್ಟೊಂದು ದೊಡ್ಡ ಪ್ರತಿವೆುಯಿಲ್ಲದಿರುವಾಗ ಅವರ ಶಿಷ್ಯನಿಗೆ ಅಷ್ಟೊಂದು ದೊಡ್ಡ ಪ್ರತಿಮೆ ನಿರ್ಮಿಸಿರುವುದು ಯಾಕೆ ಎಂದು ತರೂರ್ ಪ್ರಶ್ನಿಸಿದ್ದಾರೆ.
ಓರ್ವ ಸರಳ ಸಜ್ಜನ ಮತ್ತು ಗಾಂಧೀಜಿಯ ನೈಜ ಅನುಯಾಯಿ ಹಾಗೂ ಸದಾ ಬಡ ರೈತರ ಜೊತೆ ಬೆರೆಯುತ್ತಿದ್ದ ಪಟೇಲರ ಅಷ್ಟೊಂದು ದೊಡ್ಡ ಪ್ರತಿಮೆಯನ್ನು ನಿರ್ಮಿಸಿರುವುದು ಸರಿಯೇ ಎಂದು ನಾನು ಪ್ರಶ್ನಿಸುತ್ತೇನೆ ಎಂದು ತರೂರ್ ತಿಳಿಸಿದ್ದಾರೆ. ನನ್ನ ಪ್ರಶ್ನೆಗಳಿಗೆ ಬಿಜೆಪಿ ನಾಯಕರಲ್ಲಿ ಉತ್ತರವಿಲ್ಲ. ಯಾಕೆಂದರೆ ಅವರಿಗೆ ಗಾಂಧೀಜಿಯ ತತ್ವಗಳ ಮೇಲೆ ನಂಬಿಕೆಯಿಲ್ಲ. ಅವರು ಪಟೇಲರಂಥ ಸ್ವಾತಂತ್ರ ಹೋರಾಟಗಾರರು ಮತ್ತು ರಾಷ್ಟ್ರ ನಾಯಕರ ದಂತಕತೆಗಳನ್ನು ಅಪಹರಣ ಮಾಡಲು ಪ್ರಯತ್ನಿಸುತ್ತಿದ್ದಾರೆ. ಯಾಕೆಂದರೆ ಬಿಜೆಪಿಗೆ ಸಂಭ್ರಮಿಸಲು ಅದರದ್ದೇ ಆದ ಐತಿಹಾಸಿಕ ನಾಯಕರಿಲ್ಲ ಎಂದು ತರೂರ್ ಕುಟುಕಿದ್ದಾರೆ.







