ಮೀಟೂ ಪ್ರಕರಣಗಳನ್ನು ತಡೆಯಲು ಸದ್ಯದ ಕಾನೂನು ಕಠಿಣವಾಗಿಲ್ಲ: ಮಹಿಳಾ ಆಯೋಗದ ಮುಖ್ಯಸ್ಥೆ

ಹೊಸದಿಲ್ಲಿ,ನ.1: ಮಹಿಳೆಯರು ಉದ್ಯೋಗದ ಸ್ಥಳಗಳಲ್ಲಿ ತಮ್ಮ ಮೇಲಾದ ಲೈಂಗಿಕ ದೌರ್ಜನ್ಯಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸಿದ ನಂತರ ಹಲವು ರಾಜಕೀಯ ಮತ್ತು ಪತ್ರಕರ್ತರು ಹಾಗೂ ಸೆಲೆಬ್ರಿಟಿಗಳು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವ ಒತ್ತಡಕ್ಕೆ ಒಳಗಾದರೂ ಸದ್ಯದ ಕಾನೂನು ಈ ಮೀಟೂ ಪ್ರಕರಣಗಳನ್ನು ತಡೆಯುವಷ್ಟು ಕಠಿಣವಾಗಿಲ್ಲ ಎಂದು ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲೂ)ದ ಮುಖ್ಯಸ್ಥೆ ರೇಖಾ ಶರ್ಮಾ ತಿಳಿಸಿದ್ದಾರೆ.
ಸದ್ಯವಿರುವ ಉದ್ಯೋಗಸ್ಥಳಗಳಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ ಕಾಯ್ದೆ ಸರಿಯಿಲ್ಲ. ಕಾನೂನು ಬದಲಾಗದ ಹೊರತು ನಾವು ಹೆಚ್ಚೇನೂ ಮಾಡಲು ಸಾಧ್ಯವಿಲ್ಲ ಎಂದು ಶರ್ಮಾ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಉದ್ಯೋಗದ ಸ್ಥಳಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ (ತಡೆ,ನಿಷೇಧ ಮತ್ತು ಪರಿಹಾರ) ಕಾಯ್ದೆಯನ್ನು 2013ರಲ್ಲಿ ಜಾರಿಗೆ ತರಲಾಯಿತು. ಈ ಕಾನೂನಿನನ್ವಯ, ಎಲ್ಲ ಉದ್ಯೋಗದಾತರು ತಮ್ಮ ಉದ್ಯೋಗಸ್ಥಳಗಳಲ್ಲಿ ಆಂತರಿಕ ದೂರು ಸಮಿತಿ (ಐಸಿಸಿ)ಯನ್ನು ರಚಿಸಬೇಕು. ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಮಹಿಳೆಯರು ತಮ್ಮ ಮೇಲಾದ ಲೈಂಗಿಕ ಕಿರುಕುಳದ ಬಗ್ಗೆ ಪೋಸ್ಟ್‌ಗಳನ್ನು ಹಾಕಿದ ಹಿನ್ನೆಲೆಯಲ್ಲಿ ಈ ಎಲ್ಲ ಮೀಟೂ ಪ್ರಕರಣಗಳ ತನಿಖೆ ನಡೆಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಮೇನಕಾ ಗಾಂಧಿ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಸೂಚಿಸಿದ್ದರು. ಸಂತ್ರಸ್ತರು ನೇರವಾಗಿ ಸಚಿವಾಲಯವನ್ನು ಸಂಪರ್ಕಿಸಲು ಎನ್‌ಸಿಡಬ್ಲ್ಯೂ ಪ್ರತ್ಯೇಕ ಇಮೇಲ್ ಐಡಿ ರಚಿಸಿತ್ತು. ಈ ಐಡಿ ಮೂಲಕ 14 ಮಹಿಳೆಯರು ದೂರುಗಳನ್ನು ದಾಖಲಿಸಿದ್ದರು.





