ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ರಿಗೆ ಹಣದ ಆಮಿಷ: ಆರ್.ಅಶೋಕ್ ಆರೋಪ

ಮಂಡ್ಯ, ನ.1: ಹಣದ ಆಮಿಷಕ್ಕೊಳಗಾಗಿ ರಾಮನಗರ ವಿಧಾನಸಭಾ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಆರೋಪಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ದುರ್ದೈವದ ಸಂಗತಿ. ಈ ತರಹದ ರಾಜಕಾರಣ ಸರಿಯಲ್ಲ. ಸತ್ತರು ಜೆಡಿಎಸ್‍ಗೆ ಬೆಂಬಲ ಕೊಡೊಲ್ಲವೆಂದು ಸಿ.ಎಂ.ಲಿಂಗಪ್ಪ ಹೇಳಿದ್ದರು. ಇವತ್ತು ಅವರ ಮಗ ಕಣದಿಂದ ಹಿಂದೆ ಸರಿದಿದ್ದಾರೆ. ಈ ನಾಟಕ ಸರಿಯಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಚುನಾವಣಾ ಪ್ರಚಾರ ವೇಳೆ ಸಿಎಂ ಕುಮಾರಸ್ವಾಮಿ ಸಾಯುವ ಮಾತುಗಳನ್ನಾಡುವುದು ಸರಿಯಲ್ಲ. ದಯವಿಟ್ಟು ಅವರು ಸಾಯುವ ಮಾತುಗಳನ್ನು ಬಿಟ್ಟು ರಾಜ್ಯ ಅಭಿವೃದ್ಧಿ ಹಾಗೂ ಜನರ ಸಮಸ್ಯೆಗಳ ಬಗ್ಗೆ ಚಿಂತಿಸಬೇಕು ಎಂದು ಅವರು ವ್ಯಂಗ್ಯವಾಡಿದರು.
ದೇಶದಲ್ಲಿ 64 ಕೋಟಿ ಅಲ್ಪಸಂಖ್ಯಾತರಿದ್ದರೆಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೇಳಿರುವುದು ಏಕೆ? ಇಂತಹ ಓಲೈಕೆ ರಾಜಕಾರಣ ಬಿಡಬೇಕು. ಈ ತರಹದ ಹೇಳಿಕೆಗಳು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ ಎಂದು ಅವರು ಟೀಕಿಸಿದರು.
ಮಂಡ್ಯ ಲೋಕಸಭಾ ಉಪ ಚುನಾವಣೆಯಲ್ಲಿ ಪ್ರಚಾರ ವೇಳೆ ಬಿಜೆಪಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರಲ್ಲಿ ಗೊಂದಲವಿದೆ. ಹಾಗಾಗಿ ಬಿಜೆಪಿ ಗೆಲುವು ಸಾಧ್ಯವಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಶಾಸಕ ಅಶ್ವಥ್‍ನಾರಾಯಣ, ಚುನಾವಣಾ ಉಸ್ತುವಾರಿ ಇ.ಅಶ್ವಥ್‍ನಾರಾಯಣ್, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ನಾಗಣ್ಣಗೌಡ, ಎಚ್.ಆರ್.ಅರವಿಂದ್, ಇತರ ಮುಖಂಡರು ಉಪಸ್ಥಿತರಿದ್ದರು.







