ರಾಮನಗರ ಬಿಜೆಪಿ ಅಭ್ಯರ್ಥಿಯಿಂದ ಪಕ್ಷಕ್ಕೆ ‘ದೀಪಾವಳಿ ಉಡುಗೊರೆ’: ಉಡುಪಿಯಲ್ಲಿ ಭೋಜೇಗೌಡ
ಉಡುಪಿ, ನ.1: ರಾಮನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಚುನಾವಣಾ ಕಣದಿಂದ ಹಿಂದೆ ಸರಿದಿರುವುದು ರಾಷ್ಟ್ರೀಯ ಪಕ್ಷಕ್ಕೆ ಮರ್ಮಾಘಾತ ನೀಡಿದ್ದು, ನ.6ರ (ಮತ ಎಣಿಕೆ ದಿನ) ದೀಪಾವಳಿ ಉಡುಗೊರೆಯನ್ನು ಇಂದೇ ನೀಡಿದ್ದಾರೆ. ಬಿಜೆಪಿ ಇದನ್ನು ಹೇಗೆ ಸ್ವೀಕರಿಸುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ ಎಂದು ಜೆಡಿಎಸ್‌ನ ಪ್ರಧಾನ ಕಾರ್ಯದರ್ಶಿ, ವಿಧಾನಪರಿಷತ್ ಸದಸ್ಯ ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಉಸ್ತುವಾರಿ ಎಸ್.ಎಲ್.ಬೋಜೇಗೌಡ ಹೇಳಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತಿದ್ದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ 104 ಸ್ಥಾನಗಳಿಸಿದ್ದ ಬಿಜೆಪಿ ಪಕ್ಷಕ್ಕಿದು ದೊಡ್ಡ ಆಘಾತದ ವಿಷಯ. ಇದು ‘ಪ್ರಜಾಪ್ರಭುತ್ವಕ್ಕೆ ಮಾರಕ’ ಎಂದು ಬಿಜೆಪಿ ನಾಯಕರು ನೀಡಿದ ಹೇಳಿಕೆಯನ್ನು ಲೇವಡಿ ಮಾಡಿದ ಬೋಜೇಗೌಡರು, ಚುನಾವಣೆಯಲ್ಲಿ ಗೆದ್ದ ಶಾಸಕರನ್ನು ಖರೀದಿಸಿ, ಸರಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವುದು ‘ಪ್ರಜಾಪ್ರಭುತ್ವ ವಿರೋಧಿ’ ಎಂದು ಅನ್ನಿಸಲಿಲ್ಲವೇ ಎಂದು ಪ್ರಶ್ನಿಸಿದರು.
ಕಳೆದ ನಾಲ್ಕು ತಿಂಗಳುಗಳಿಂದ ಚುನಾಯಿತ ಸಮ್ಮಿಶ್ರ ಸರಕಾರವನ್ನು ಅಸ್ಥಿರ ಗೊಳಿಸಲು ಪ್ರಯತ್ನಿಸುತ್ತಿರುವುದು ನಿಜವಾಗಿಯೂ ಪ್ರಜಾಪ್ರಭುತ್ವಕ್ಕೆ ಮಾರಕ. ಇಂದು ಬಿಜೆಪಿಯ ಸ್ಥಿತಿ ‘ಮಾಡಿದ್ದುಣ್ಣೋ ಮಾರಾಯ’ ಎಂಬಂತಾಗಿದೆ ಎಂದವರು ವ್ಯಂಗ್ಯವಾಡಿದರು.
ಶಿವಮೊಗ್ಗದಲ್ಲಿ ಸಮ್ಮಿಶ್ರ ಸರಕಾರದ ಮೈತ್ರಿ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಅವರನ್ನು ನಿಲ್ಲಿಸಿದ್ದಕ್ಕೆ ‘ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿದ್ದಾರೆ.’ ಎಂದು ಬಿಜೆಪಿಯ ಹಿರಿಯ ನಾಯಕರು ಹೇಳಿಕೆ ನೀಡಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬೋಜೆಗೌಡ, ಇದು ಎಷ್ಟು ಸರಿ? ಹಾಗಾದರೆ ಬಿಜೆಪಿಯವರು ರಾಮನಗರದಲ್ಲಿ ಕಂಡವರ ಮಕ್ಕಳನ್ನು ನಿಲ್ಲಿಸಿದ್ದೇ? ಎಂದು ಮರು ಪ್ರಶ್ನಿಸಿದರು. ಮಧು ಬಂಗಾರಪ್ಪ, ಜೆಡಿಎಸ್ ಯುವ ಘಟಕದ ಅಧ್ಯಕ್ಷರು, ಮಾಜಿ ಶಾಸಕರು ಹಾಗೂ ಕಳೆದ ಚುನಾವಣೆಯಲ್ಲಿ ನಿಂತು ಸೋತವರು. ಅವರು ಕಂಡವರ ಮಕ್ಕಳು ಹೇಗಾಗುತ್ತಾರೆ. ರಾಮನಗರದ ನಿಮ್ಮ ಅಭ್ಯರ್ಥಿ ನಿಜವಾಗಿ ಕಂಡವರ ಮಗು ಎಂದು ತಿರುಗೇಟು ನೀಡಿದರು.
ಶಿವಮೊಗ್ಗ ಲೋಕಸಭಾ ಉಪಚುನಾವಣೆಯನ್ನು ಜೆಡಿಎಸ್ ಮತ್ತು ಕಾಂಗ್ರೆಸ್ ಸಮರ್ಪಕವಾಗಿ ಎದುರಿಸಲಿದೆ. ಇಲ್ಲಿ ಮಧು ಬಂಗಾರಪ್ಪಗೆ ಗೆಲುವು ಶತಃಸಿದ್ಧ. ಕಳೆದ ನಾಲ್ಕು ತಿಂಗಳ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಅನೇಕ ಜನೋಪಯೋಗಿ ಕಾರ್ಯಕ್ರಮಗಳನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ. ಅದರ ಆಧಾರದ ಮೇಲೆ ಜನ ಮತ ನೀಡಿ ಗೆಲ್ಲಿಸುತ್ತಾರೆ ಎಂದರು.
ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ ಚುನಾವಣೆಯಲ್ಲಿ ಜಯಗಳಿಸಿದ ಬಳಿಕ ಶಿಕ್ಷಕರ ಅನೇಕ ಸಮಸ್ಯೆಗಳಿಗೆ ಒತ್ತು ನೀಡಿ ಕೆಲಸ ಮಾಡಿದ್ದೇನೆ. ವಿಶೇಷ ಭತ್ಯೆ, ವರ್ಗಾವಣೆ ನೀತಿಗೆ ಒತ್ತು ನೀಡಿದ್ದೇನೆ. ಎನ್‌ಪಿಎಸ್, ಕಾಲ್ಪನಿಕ ವೇತನ ವಿಷಯದ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದೇನೆ. ವರ್ಗಾವಣೆ ನೀತಿಯನ್ನು ಮುಂದಿನ ಚುನಾವಣೆಗೆ ಮೊದಲೇ ಸಮರ್ಪಕ ರೀತಿ ಅನುಷ್ಠಾನಗೊಳಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಕಾಪು, ಕಾರ್ಯಾಧ್ಯಕ್ಷ ವಾಸುದೇವ ರಾವ್, ನಾಯಕರಾದ ಜಯಕುಮಾರ್ ಪರ್ಕಳ, ಪ್ರದೀಪ್ ಜಿ., ಅಕ್ಷಿತ್ ಸುವರ್ಣ ಉಪಸ್ಥಿತರಿದ್ದರು.







