ವೈವಿಧ್ಯತೆಯಲ್ಲಿ ಏಕತೆಗೆ ಬೆಳಗಾವಿ ಜಿಲ್ಲೆ ಸಾಕ್ಷಿ: ಸಚಿವ ರಮೇಶ್ ಜಾರಕಿಹೊಳಿ
ಕುಂದಾ ನಗರಿಯಲ್ಲಿ ಸಂಭ್ರಮದ ರಾಜ್ಯೋತ್ಸವ

ಬೆಳಗಾವಿ, ನ.1: ‘ಸರ್ವ ಜನಾಂಗದ ಶಾಂತಿಯ ತೋಟ, ರಸಿಕರ ಕಂಗಳ ಸೆಳೆಯುವ ನೋಟ, ಹಿಂದು, ಕ್ರೈಸ್ತ, ಮುಸಲ್ಮಾನ, ಪಾರಸಿಕ ಜೈನರುದ್ಯಾನ’ ಎಂದು ರಾಷ್ಟ್ರಕವಿ ಕುವೆಂಪು ರಚಿಸಿರುವ ನಾಡಗೀತೆಯ ಈ ಸಾಲುಗಳು ಬೆಳಗಾವಿ ಜಿಲ್ಲೆಗೆ ಅಕ್ಷರಶಃ ಅನ್ವಯಿಸುತ್ತವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಬಣ್ಣಿಸಿದ್ದಾರೆ.
ಗುರುವಾರ ಜಿಲ್ಲಾಡಳಿತದ ವತಿಯಿಂದ ನಗರದ ಸಿಪಿಎಡ್ ಮೈದಾನದಲ್ಲಿ ಆಯೋಜಿಸಿದ್ದ 63ನೇ ಕನ್ನಡ ರಾಜ್ಯೋತ್ಸವ ಸಮಾರಂಭಕ್ಕೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ನಮ್ಮ ದೇಶದ ಸಂಸ್ಕೃತಿಯು ಬೆಳಗಾವಿಯಲ್ಲಿ ನೆಲೆಸಿರುವ ವಿವಿಧ ಧರ್ಮೀಯರು ಮತ್ತು ಹಲವು ಭಾಷಿಕರ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ. ಕನ್ನಡ ನಾಡು ವಿವಿಧ ಧರ್ಮ ಮತ್ತು ಸಂಸ್ಕೃತಿಗಳ ಸಂಗಮವಾಗಿದೆ ಎಂದು ಅವರು ಹೇಳಿದರು.
ಕನ್ನಡ ಭಾಷೆಗೆ ಸುಮಾರು ಒಂದು ಸಾವಿರದ ಐನೂರು ವರ್ಷಗಳಷ್ಟು ಸುದೀರ್ಘ ಇತಿಹಾಸದೆ. ಆದಿಕವಿ ಪಂಪನಿಂದ-ರಾಷ್ಟ್ರಕವಿ ಕುವೆಂಪುವರೆಗೂ ಮಹಾನ್ ಕವಿಗಳು ಕನ್ನಡ ಭಾಷೆಯಲ್ಲಿ ನೂರಾರು ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ಇಡೀ ವಿಶ್ವ ಸಾಹಿತ್ಯಕ್ಕೆ ಕನ್ನಡ ಸಾಹಿತ್ಯದ ಕೊಡುಗೆ ಅಪಾರವಾಗಿದೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.
ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರೊಡನೆ ಹೋರಾಟಕ್ಕೆ ನಾಂದಿ ಹಾಡಿದ ಕಿತ್ತೂರಿನ ರಾಣಿ ಚೆನ್ನಮ್ಮ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಮ್ಮ ನಾಡಿನವರು ಎಂಬುದು ಹೆಮ್ಮೆಯ ವಿಷಯ. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಅಧ್ಯಕ್ಷತೆ ವಹಿಸಿದ್ದ ಏಕೈಕ ಭಾರತೀಯ ಕಾಂಗ್ರೆಸ್ ಅಧಿವೇಶನವು 1924ರಲ್ಲಿ ನಮ್ಮ ಬೆಳಗಾವಿಯ ಪುಣ್ಯಭೂಮಿಯಲ್ಲಿಯೇ ಜರುಗಿದ್ದು ಎಂದು ಅವರು ಹೇಳಿದರು.
ಅದೇ ರೀತಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್, ಚಿಕ್ಕೋಡಿ ನ್ಯಾಯಾಲಯದ ಪ್ರಕರಣವೊಂದರಲ್ಲಿ ವಕಾಲತ್ತು ವಹಿಸಿದ್ದು ಈ ನೆಲದ ಇನ್ನೊಂದು ವಿಶೇಷ. ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಬೆಳಗಾವಿ ಜಿಲ್ಲೆಯಿಂದ ಹಲವಾರು ಮಹನೀಯರು ಕ್ರಿಯಾಶೀಲರಾಗಿ ಹೋರಾಡಿದ್ದು, ಡೆಪ್ಯುಟಿ ಚೆನ್ನಬಸಪ್ಪ, ಬೈಲಹೊಂಗಲದ ಗಂಗಾಧರ ತುರಮುರಿ, ಹುದಲಿಯ ಸ್ವಾತಂತ್ರ್ಯಯೋಧ ಗಂಗಾಧರರಾವ್ ದೇಶಪಾಂಡೆ ಸೇರಿದಂತೆ ಹಲವು ಮಹನೀಯರ ಕೊಡುಗೆ ಅವಿಸ್ಮರಣೀಯವಾಗಿದೆ ಎಂದು ಅವರು ಹೇಳಿದರು. ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳೊಂದಿಗೆ ಗಡಿಯನ್ನು ಹಂಚಿಕೊಂಡಿರುವ ನಮ್ಮ ಬೆಳಗಾವಿಯ ಸಂಸ್ಕೃತಿಯು ವೈಶಿಷ್ಟ್ಯಪೂರ್ಣವಾಗಿದೆ. ಕನ್ನಡ-ಹಿಂದಿ-ಮರಾಠಿ ಸೇರಿದಂತೆ ಬಹು ಭಾಷಾ ಸಾಮರಸ್ಯವನ್ನು ಇಲ್ಲಿ ಕಾಣಬಹುದಾಗಿದೆ. ರಾಜ್ಯ ರಚನೆಯಾಗಿ ಕಳೆದ 62 ವರ್ಷಗಳಲ್ಲಿ ರಾಜ್ಯದ ಮುಂದಿದ್ದ ಸವಾಲುಗಳನ್ನು ಕನ್ನಡ ನಾಡು ಸಮರ್ಥವಾಗಿ ಎದುರಿಸಿ, ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು. ನಮ್ಮ ಸರಕಾರವು ನಾಡನುಡಿ ರಕ್ಷಣೆ, ನೆಲ ಜಲ ಅಭಿವೃದ್ಧಿ ಸೇರಿದಂತೆ ಕನ್ನಡನಾಡಿನ ಸಮಸ್ತ ಜನರ ಹಿತದೃಷ್ಟಿಯಿಂದ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಸಮೃದ್ಧ ಹಾಗೂ ಬಲಿಷ್ಠ ಕರ್ನಾಟಕ ನಿರ್ಮಾಣ ನಮ್ಮೆಲ್ಲರ ಜವಾಬ್ದಾರಿ ಹಾಗೂ ಆದ್ಯ ಕರ್ತವ್ಯವಾಗಿರಬೇಕು. ಅದಕ್ಕಾಗಿ ನಾವೆಲ್ಲರೂ ಮನಃಪೂರ್ವಕವಾಗಿ ಶ್ರಮಿಸಬೇಕು ಎಂದು ಅವರು ಕರೆ ನೀಡಿದರು.
ಸಮಾರಂಭದಲ್ಲಿ ಸಂಸದರಾದ ಪ್ರಕಾಶ್ ಹುಕ್ಕೇರಿ, ಸುರೇಶ್ ಅಂಗಡಿ, ರಾಜ್ಯಸಭೆ ಸದಸ್ಯ ಪ್ರಭಾಕರ ಕೋರೆ, ಶಾಸಕರಾದ ಅನಿಲ್ ಬೆನಕೆ, ಅಭಯ್ ಪಾಟೀಲ, ಮಹಾಪೌರ ಬಸಪ್ಪಚಿಕ್ಕಲದಿನ್ನಿ, ಜಿಪಂ ಅಧ್ಯಕ್ಷೆ ಆಶಾ ಐಹೊಳೆ, ಉಪಾಧ್ಯಕ್ಷ ಅರುಣ ಕಟಾಂಬಳೆ, ಪ್ರಾದೇಶಿಕ ಆಯುಕ್ತ ಪಿ.ಎ.ಮೇಘಣ್ಣವರ, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಪೊಲೀಸ್ ಆಯುಕ್ತ ಡಾ.ಡಿ.ಸಿ.ರಾಜಪ್ಪಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







