'ಭಾವೈಕ್ಯತೆ, ನಾಡಪ್ರೇಮದೊಂದಿಗೆ ನಾಡಿನ ಅಭಿವೃದ್ಧಿಗೆ ಶ್ರಮಿಸೋಣ'
63ನೇ ಕನ್ನಡ ರಾಜ್ಯೋತ್ಸವದಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕ

ಉಡುಪಿ, ನ.1: ನಾಡಿನ ಪ್ರತಿಯೊಬ್ಬ ಪ್ರಜೆಯೂ ಭಾವೈಕ್ಯತೆ ಹಾಗೂ ನಾಡಪ್ರೇಮವನ್ನು ಹೊಂದಿ ಈ ನಾಡಿನ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸೋಣ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಕರ್ನಾಟಕದ 63ನೇ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಜಿಲ್ಲೆಯ ಜನತೆಗೆ ಕರೆ ನೀಡಿದ್ದಾರೆ.
ಚುನಾವಣಾ ನೀತಿಸಂಹಿತೆ ಹಿನ್ನೆಲೆಯಲ್ಲಿ (ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸೇರಿದ ಬೈಂದೂರು ವಿಧಾನಸಭಾ ವ್ಯಾಪ್ತಿಯಲ್ಲಿ) ಸಚಿವರು ಹಾಗೂ ಜನಪ್ರತಿನಿಧಿಗಳ ಗೈರುಹಾಜರಿಯಲ್ಲಿ ಜಿಲ್ಲಾಡಳಿತದ ವತಿಯಿಂದ ನಗರದ ಬೀಡಿನಗುಡ್ಡೆಯಲ್ಲಿರುವ ಮಹಾತ್ಮಗಾಂಧಿ ಬಯಲು ರಂಗಮಂದಿರದಲ್ಲಿ ನಡೆದ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ, ಗೌರವ ರಕ್ಷೆ ಸ್ವೀಕರಿಸಿ, ಪಥಸಂಚಲನವನ್ನು ವೀಕ್ಷಿಸಿ ಜನರಿಗೆ ನೀಡಿದ ಕನ್ನಡ ರಾಜ್ಯೋತ್ಸವ ಸಂದೇಶದಲ್ಲಿ ಅವರು ಮಾತನಾಡುತಿದ್ದರು.
ಉಡುಪಿ ಜಿಲ್ಲೆ ಅತ್ಯುನ್ನತ ಶೈಕ್ಷಣಿಕ ಕೇಂದ್ರವಾಗಿದ್ದು, ಬ್ಯಾಂಕಿಂಗ್ ಉದ್ಯಮದ ಮೂಲ ನೆಲೆಯೂ ಆಗಿದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾದ ಪ್ರಾಕೃತಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ನೆಲೆಗಳು ಇಲ್ಲಿವೆ. ಜಿಲ್ಲೆಯಲ್ಲಿ ಕನ್ನಡ, ತುಳು, ಕೊಂಕಣಿ ಹಾಗೂ ಇತರ ಹಲವು ಭಾಷೆಗಳು, ಎಲ್ಲಾ ಜಾತಿ, ಧರ್ಮಗಳ ಜನರು ಪರಸ್ಪರ ಸೌಹಾರ್ದತೆಯಿಂದ ಬದುಕುತಿದ್ದಾರೆ. ಶಾಂತಿಪ್ರಿಯರಾದ ಇಲ್ಲಿನ ಜನ, ಸಹಬಾಳ್ವೆಗೆ ಹೆಸರಾದವರು ಎಂದರು.
ಉಡುಪಿ ಜಿಲ್ಲೆ ಸಾಹಿತ್ಯ ಕ್ಷೇತ್ರಕ್ಕೂ ಮಹತ್ವದ ಕೊಡುಗೆಯನ್ನು ನೀಡಿದೆ. ಕನ್ನಡದ ಇಬ್ಬರು ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿಗಳು ಜಿಲ್ಲೆಯವರು ಎಂಬುದು ಅಭಿಮಾನ, ಹೆಮ್ಮೆಯ ಸಂಗತಿ. ಕಂಪ್ಯೂಟರ್‌ನಲ್ಲಿ ಕನ್ನಡ ಲಿಪಿಯನ್ನು ಅಳವಡಿಸಿದ ನಾಡೋಜ ಕೆ.ಪಿ.ರಾವ್ ಮಣಿಪಾಲದಲ್ಲಿದ್ದಾರೆ ಎಂಬುದು ನಮಗೆ ಅಭಿಮಾನದ ಸಂಗತಿ.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಇಲ್ಲ: ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ವಿವಿಧ ಪ್ರಶಸ್ತಿಗಳ ವಿತರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಇಂದು ನಡೆಯಲಿಲ್ಲ.
ಪಥಸಂಚಲನದಲ್ಲಿ ಒಟ್ಟು 11 ತಂಡಗಳು ಭಾಗವಹಿಸಿದ್ದು, ಅತ್ಯುತ್ತಮ ಪಂಥಸಂಚಲನಕ್ಕಾಗಿ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕಳತ್ತೂರು ಸಂತೆಕಟ್ಟೆಯ ಸ.ಹಿ.ಪ್ರಾ.ಶಾಲೆ, ಉಡುಪಿ ವಳಕಾಡು ಸ.ಹಿ.ಪ್ರಾ.ಶಾಲೆ ಹಾಗೂ ಕುಂಜಿಬೆಟ್ಟು ಟಿ.ಎ.ಪೈ ಆಂಗ್ಲ ಮಾಧ್ಯಮ ಶಾಲಾ ತಂಡಗಳು ಪ್ರಥಮ ಮೂರು ಬಹುಮಾನಗಳನ್ನು ಗೆದ್ದುಕೊಂಡವು.
ಅದೇ ರೀತಿ ಪ್ರೌಢ ಶಾಲಾ ವಿಭಾಗದಲ್ಲಿ ಉಡುಪಿ ಸೈಂಟ್ ಸಿಸಿಲೀಸ್ ಪ್ರೌಢ ಶಾಲೆ, ಕಡಿಯಾಳಿ ಯು.ಕಮಲಾಬಾಯಿ ಪ್ರೌಢ ಶಾಲೆ ಹಾಗೂ ವಳಕಾಡು ಸರಕಾರಿ ಪ್ರೌಢ ಶಾಲೆಯ ತಂಡಗಳು ಅನುಕ್ರಮವಾಗಿ ಪ್ರಥಮ ಮೂರು ಸ್ಥಾನಗಳನ್ನು ಪಡೆದವು.
ಕೊನೆಯಲ್ಲಿ ಮುಕುಂದಕೃಪ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಉಡುಪಿ, ಇಂದ್ರಾಳಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಇಂದ್ರಾಳಿ, ಶಾಂತಿನಿಕೇತನ ಹಿರಿಯ ಪ್ರಾಥಮಿಕ ಶಾಲೆ ಅಲೆವೂರು ಹಾಗೂ ಶ್ರೀನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆ ಮಲ್ಪೆ ಇಲ್ಲಿನ ವಿದ್ಯಾರ್ಥಿಗಳು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು.







