ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಯೋಜನೆ: ಸಚಿವ ಡಿ.ಕೆ.ಶಿವಕುಮಾರ್

ಬಳ್ಳಾರಿ, ನ. 1: ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಸಚಿವ ಸಂಪುಟ ಅನುಮೋದನೆ ನೀಡಿರುವ ಎಲ್ಲ ಯೋಜನೆಗಳನ್ನು ಕ್ಷಿಪ್ರಗತಿ ಆರಂಭಿಸಲು ಯೋಜನೆ ರೂಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕೃತಿ ಸಂಪತ್ತು ಜನರಿಗೆ ನೀಡಿದ ದೊಡ್ಡ ಅವಕಾಶ. ಆದರೆ, ಅದು ಸರಿಯಾದ ರೀತಿಯಲ್ಲಿ ಬಳಕೆ ಆಗುತ್ತಿಲ್ಲ. ಜಿಲ್ಲಾ ಖನಿಜ ನಿಧಿ ಅಡಿಯಲ್ಲಿ ಲಭ್ಯವಿರುವ 13,383 ಕೋಟಿ ರೂ. ಮೊತ್ತದ ಯೋಜನೆಗೆ ಅನುಮೋದನೆ ದೊರೆತ ಕೂಡಲೇ ಅಭಿವೃದ್ಧಿ ಕಾರ್ಯಗಳು ಆರಂಭವಾಗಲಿವೆ ಎಂದರು.
ಹಲವು ಸರಕಾರಗಳು ಅಭಿವೃದ್ಧಿ ಮಾಡಿವೆ. ಈಗಿನ ಸನ್ನಿವೇಶದಲ್ಲಿ ಜಿಲ್ಲೆಯಲ್ಲಿ ಮೊದಲು ಉತ್ತಮ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ಸೌಕರ್ಯ ದೊರಕಬೇಕು ಎಂದ ಅವರು, ತುಂಗಭದ್ರಾ ಜಲಾಶಯದ ನೀರಿ ಎಲ್ಲರಿಗೂ ದೊರಕುತ್ತಿಲ್ಲ. ಕೆಲವು ತಾಲೂಕುಗಳು ನೀರು ಬಳಸದ ಸನ್ನಿವೇಶವಿಲ್ಲ. ಕುಡಿಯುವ ನೀರಿಗೂ ಅಭಾವವಿದೆ. ನಗರದಲ್ಲೂ ಸಮಸ್ಯೆ ಇದೆ ಎಂದು ಶಿವಕುಮಾರ್ ಹೇಳಿದರು.
ಗಣಿ ಚಟುವಟಿಕೆ ಹಿನ್ನೆಲೆಯಲ್ಲಿ ದೂಳಿನಿಂದ ಜಿಲ್ಲೆಯ ಜನರ ಆರೋಗ್ಯದ ಮೇಲೆ ಆಗಿರುವ ದುಷ್ಪರಿಣಾಮದ ಕುರಿತು ಅಧ್ಯಯನ ನಡೆಯಬೇಕಾಗಿದೆ. ಹಸಿರೀಕರಣವೂ ದೊಡ್ಡಮಟ್ಟದಲ್ಲಿ ಅಗತ್ಯವಿದೆ ಎಂದ ಅವರು, ಜೀನ್ಸ್ ಸಿದ್ಧ ಉಡುಪು ತಯಾರಿಕೆಯಲ್ಲಿ ತೊಡಗಿರುವ ಮಹಿಳೆಯರಿಗೆ ಕೌಶಲ್ಯ ಅಭಿವೃದ್ಧಿಗೆ ನೆರವು ನೀಡಲಾಗುವುದು ಎಂದರು.
ಏನೆಂದು ಕರೆಯಲಿ: ಶ್ರೀರಾಮುಲು ಅವರನ್ನು ಅಣ್ಣ ಎನ್ನದೆ ಏನೆಂದು ಕರೆಯಲಿ. ಅಣ್ಣ ಎಂದರೆ ತಪ್ಪದೇನು? ಅಣ್ಣ ಎಂದರೆ ಲೇವಡಿ ಎನ್ನುತ್ತೀರಿ, ಏಕ ವಚನದಲ್ಲಿ ಮಾತನಾಡಿದರೆ ತಪ್ಪು ಎನ್ನುತ್ತೀರಿ ಎಂದು ಪ್ರಶ್ನಿಸಿದ ಶಿವಕುಮಾರ್, ಶ್ರೀರಾಮುಲು ವೆೆುಯಲ್ಲಿ ಕಾಂಗ್ರೆಸ್ ರಕ್ತ ಹರಿಯುತ್ತಿದೆ ಎಂದರು.
‘ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಸಂಡೂರು ಶಾಸಕ ಇ.ತುಕಾರಾಂ ಅವರಿಗೆ ಸಚಿವ ಸ್ಥಾನ ಸಿಗಬೇಕು. ಅವರಿಗೆ ಸದ್ಯ ಸಚಿವ ಸ್ಥಾನ ನೀಡಲು ನಾನು ಮುಖ್ಯಮಂತ್ರಿಯಲ್ಲ. ಈ ಬಗ್ಗೆ ಸಿಎಂ ಕುಮಾರಸ್ವಾಮಿಯವರಿಗೆ ನಾನು ಶಿಫಾರಸ್ಸು ಮಾಡುವೇ.’
-ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ







