ಎಳೆಯರಲ್ಲಿ, ಯುವ ಜನರಲ್ಲಿ ಓದುವ ಹವ್ಯಾಸಕ್ಕೆ ಪ್ರೋತ್ಸಾಹಿಸಬೇಕು: ಕೆ.ಟಿ.ಗಟ್ಟಿ

ಮಂಗಳೂರು, ನ.1: ಓದುವ ಹವ್ಯಾಸ ಕಡಿಮೆಯಾಗುತ್ತಿರುವುದು ಸಾಹಿತ್ಯದ ಬೆಳವಣಿಗೆಯ ದೃಷ್ಟಿಯಿಂದ ಆಶಾದಾಯಕವಲ್ಲ ಎಂದು ಎಳೆಯರಲ್ಲಿ ಮತ್ತು ಯುವ ಜನರಲ್ಲಿ ಓದುವ ಹವ್ಯಾಸ ಕುಂಠಿತವಾಗದಂತೆ ನೋಡಿಕೊಳ್ಳಬೇಕಾಗಿದೆ ಎಂದು ಹಿರಿಯ ಸಾಹಿತಿ ಕೆ.ಟಿ.ಗಟ್ಟಿ ತಿಳಿಸಿದ್ದಾರೆ.
ಸಾಹಿತ್ಯ ರಂಗ ಬೆಳೆಯಬೇಕಾದರೆ ಹೊಸ ಕೃತಿಗಳು ರಚನೆಯಾಗಬೇಕಾದರೆ ಹೆಚ್ಚು ಹೆಚ್ಚು ಓದಬೇಕಾಗಿದೆ. ಕನ್ನಡದಲ್ಲಿ ವ್ಯಕ್ತಿತ್ವವನ್ನು ಅರಳಿಸುವ ಕೃತಿಗಳು ಬರಹಗಾರನ ಸಾಮಾಜಿಕ ಪ್ರಜ್ಞೆಯಿಂದ ಬಂದಿದೆ. ಸಮಾಜದಲ್ಲಿ ಅವಿಭಕ್ತ ಕುಟುಂಬಗಳು ಮರೆಯಾಗಿ ವಿಭಕ್ತ ಕುಟುಂಬಗಳ ಸಂಖ್ಯೆ ಹೆಚ್ಚುತ್ತಿರು ವಂತೆ ಮಾನವೀಯ ಸಂಬಂಧ ಶಿಥಿಲಗೊಳ್ಳುತ್ತಿರುವುದು ಕಂಡು ಬರುತ್ತಿದೆ. ನಾವೆಲ್ಲರು ಚೆನ್ನಾಗಿ ಬದುಕಬೇಕು, ನೆಮ್ಮದಿಯಿಂದ ಸಾಯಬೇಕು ಎಂದು ಅಪೇಕ್ಷೆ ಪಡುತ್ತೇವೆ. ಆದರೆ ಇತ್ತೀಚಿನ ಬೆಳೆದ ತಂತ್ರಜ್ಞಾನ ಹಿಂದೆ ಬಿದ್ದಿರುವ ಎಳೆಯರು ಮೊಬೈಲ್, ಇಂಟರ್‌ನೆಟ್ ಗಳಿಗೆ ಅಂಟಿಕೊಂಡಿರುವುದು ಕಳವಳವನ್ನುಂಟು ಮಾಡುತ್ತದೆ. ಹಿರಿಯರು ಮತ್ತು ಕಿರಿಯರ ನಡುವಿನ ಸಂಭಾಷಣೆಗೆ ಅವಕಾಶವಿಲ್ಲದಂತಾಗಿದೆ. ಇದರಿಂದ ಹಿರಿಯ ಜ್ಞಾನ ಕಿರಿಯರಿಗೆ ಲಭಿಸದಂತಾಗಿದೆ. ಇದು ಒಂದುರೀತಿ ಮಕ್ಕಳನ್ನು ಹಾಳು ಮಾಡುವಂತೆ ತೋರುತ್ತದೆ. ನಮಗೆ ಹೆಚ್ಚು ನೆಮ್ಮದಿಯಿಂದ ಸಾಯಲು ಸಾಧ್ಯವಾಗುವು ದಿಲ್ಲವೇನೋ ಎಂಬ ಸಂದೇಹ ಕಾಡುತ್ತಿದೆ. ಇಂತಹ ಸನ್ನಿವೇಶದಲ್ಲಿ ಅಮ್ಮ ಅಪ್ಪಂದಿರು ಮಕ್ಕಳಿಗೆ ಬದುಕಿನ ಬಗೆಗಿನ ಪ್ರೀತಿಯನ್ನು ತಿಳಿಸಿಕೊಡ ಬೇಕಾಗಿದೆ. ನಮ್ಮ ಸುತ್ತ ಮುತ್ತಲ ಪ್ರಕೃತಿಯನ್ನು ಮರವನ್ನು ಪ್ರೀತಿಸಲು ಕಲಿಸಬೇಕಾಗಿದೆ ಎಂದು ಕೆ.ಟಿ.ಗಟ್ಟಿ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರರು ಮಾತನಾಡುತ್ತಾ, ಕನ್ನಡದ ಪ್ರಮುಖ ಕವಿಗಳು ತಮ್ಮ ಕಾವ್ಯ, ಕೃತಿಗಳ ಮೂಲಕ ನಾಡಿನ ಮತ್ತು ನುಡಿಯ ಬಗ್ಗೆ ಸಾಕಷ್ಟು ಕೃತಿಗಳನ್ನು ರಚಿಸಿ ಕೊಡುಗೆಯಾಗಿ ನೀಡಿದ್ದಾರೆ. ಕವಿ ಪಂಜೆ ಮಂಗೇಶರಾಯರ ಬ್ರಿಟೀಷ್ ಸಾಮ್ರಾಜ್ಯದ ವಿರುದ್ಧ ನಾಗರ ಹಾವೆ ಹಾವೊಳು ಹೂವೆ ಎನ್ನುವ ಹಾಡಿನಲ್ಲಿ ಬಂಡಾಯದ ಧ್ವನಿಯನ್ನು ದೇಶದಲ್ಲಿ ಬ್ರಿಟೀಷರ ವಿರುದ್ಧ ಹೋರಾಟ ನಡೆಯುವ ಮೊದಲೆ ಪ್ರಕಟಿಸಿದ್ದಾರೆ ಎಂದು ತಿಳಿಸಿದರು.
ಕನ್ನಡ ರಾಜೋತ್ಸವದ ಸಂದರ್ಭದಲ್ಲಿ ನಾಡಿನ ಹಾಗೂ ಪರವೂರ ಕನ್ನಡ ಸಾಹಿತ್ಯದ ಬಾಲ ಪ್ರತಿಭೆಗಳನ್ನು ಗೌರವಿಸುವ ಕೆಲಸ ಮಾಡಲಾಗುತ್ತಿದೆ. ಇದರಿಂದ ಕನ್ನಡ ಭಾಷೆಯ ಬಗ್ಗೆ ಹೊರನಾಡ ಕನ್ನಡಿಗರು ಅಭಿ ಮಾನ ಪಡುವಂತಾಗುತ್ತದೆ ಎಂದು ತಿಳಿಸಿದರು. ಸಮಾರಂಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ವೈ ಶಿವರಾಮಯ್ಯ, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಇ .ರಾಜೇಶ್, ಉಪಸ್ಥಿತರಿದ್ದರು.
ದಯಾನಂದ ಕಟೇಲ್, ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಕವಿಗೋಷ್ಠಿಯ:- ಬಿ.ಎನ್.ಪುಷ್ಪರಾಜ್ ಅಧ್ಯಕ್ಷತೆಯಲ್ಲಿ ರಾಜೋತ್ಸವದ ಕವಿಗೊಷ್ಠಿ ನಡೆಯಿತು. ಕವಿಗೋಷ್ಠಿಯಲ್ಲಿ ಮಮ್ತಾಝ್ ಬೇಗಂ ಸುಖಿ ಕುಟುಂಬ , ನೀರಜ ಓಕುಡ ಅಜ್ಜರ ಕಾಡು ಎನ್ನೊಡತಿ, ವಿಶ್ವ ನಾಥ ನೇರಳಕಟ್ಟೆ ಯುದ್ಧ -ಬುದ್ಧ,ಹರಿಣಾಕ್ಷಿ ಉಪ್ಪಿನಂಗಡಿ ಜಲಕನ್ಯೆ,ಜಯರಾಮ ಡೆಂಬಳ ಕರಗುತಿದೆ ಭಾಷೆ, ಸುಮಂಗಲಾ ಗಿರಿಧರ್ ಕರುನಾಡ ಒಡಲ ಆಕ್ರಂದನ ಕವನ ವಾಚನ ಮಾಡಿದರು. ಇದೆ ಸಂದರ್ಭದಲ್ಲಿ ಪೊಲೀಸ್ ಬ್ಯಾಂಡ್ ಕಾರ್ಯಕ್ರಮ, ಹೊರನಾಡ ಪ್ರತಿಭೆಗಳಿಗೆ ಸನ್ಮಾನ ಕನ್ನಡ ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಡೆಯಿತು.







