ದಿಲ್ಲಿ-ಎನ್‌ಸಿಆರ್‌ನಲ್ಲಿ ವಾಯುಮಾಲಿನ್ಯ ಕುರಿತು ದೂರು ದಾಖಲಿಸಲು ಸಾಮಾಜಿಕ ಮಾಧ್ಯಮ ಖಾತೆ ಆರಂಭ

ಹೊಸದಿಲ್ಲಿ,ನ.1: ದಿಲ್ಲಿ-ಎನ್‌ಸಿಆರ್‌ನಲ್ಲಿ ವಾಯುಮಾಲಿನ್ಯ ಕುರಿತು ನಾಗರಿಕರು ತಮ್ಮ ದೂರುಗಳನ್ನು ದಾಖಲಿಸಲು ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ತಾನು ಖಾತೆಗಳನ್ನು ತೆರೆದಿರುವುದಾಗಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ(ಸಿಪಿಸಿಬಿ)ಯು ಗುರುವಾರ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿತು.
ಈ ಬಗ್ಗೆ ಜನರಿಗೆ ಗೊತ್ತಾಗಲು ಸಾಕಷ್ಟು ಪ್ರಚಾರ ನೀಡುವಂತೆ ಸಿಪಿಸಿಬಿಗೆ ಆದೇಶಿಸಿದ ನ್ಯಾ.ಎಂ.ಬಿ.ಲೋಕೂರ್ ನೇತೃತ್ವದ ಪೀಠವು,ದಿಲ್ಲಿ-ಎನ್‌ಸಿಆರ್ ಪ್ರದೇಶದಲ್ಲಿ 15ವರ್ಷ ಹಳೆಯ ಪೆಟ್ರೋಲ್ ಮತ್ತು 10 ವರ್ಷ ಹಳೆಯ ಡೀಸೆಲ್ ವಾಹನಗಳ ಸಂಚಾರವನ್ನು ನಿಷೇಧಿಸಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ(ಎನ್‌ಜಿಟಿ)ವು ಮೂರೂವರೆ ವರ್ಷಗಳ ಹಿಂದೆಯೇ ಆದೇಶ ಹೊರಡಿಸಿದ್ದರೂ ಅದು ಈವರೆಗೂ ಜಾರಿಗೊಳ್ಳದಿರುವುದಕ್ಕೆ ಅಸಂತೋಷವನ್ನು ವ್ಯಕ್ತಪಡಿಸಿತು.
ಎನ್‌ಜಿಟಿ ಆದೇಶದ ವಿರುದ್ಧ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಸರ್ವೋಚ್ಚ ನ್ಯಾಯಾಲಯವು ಮೇ,2015ರಲ್ಲಿ ವಜಾಗೊಳಿಸಿದ್ದನ್ನು ಪೀಠವು ಬೆಟ್ಟುಮಾಡಿತು.
ದಿಲ್ಲಿಯಲ್ಲಿ ಒಟ್ಟು 40ಲಕ್ಷ ಹಳೆಯ ವಾಹನಗಳ ನೋಂದಣಿಗಳನ್ನು ಅಧಿಕಾರಿಗಳು ರದ್ದುಗೊಳಿಸಿದ್ದಾರೆ ಎಂದು ದಿಲ್ಲಿ ಸರಕಾರದ ಪರ ವಕೀಲರು ವಿಚಾರಣೆ ಸಂದರ್ಭದಲ್ಲಿ ತಿಳಿಸಿದರು.
ಪೀಠವು ದಿಲ್ಲಿ-ಎನ್‌ಸಿಆರ್‌ನಲ್ಲಿ ವಾಯುಮಾಲಿನ್ಯಕ್ಕೆ ಸಂಬಂಧಿಸಿದ ವಿಷಯದಲ್ಲಿ ವಿಚಾರಣೆಯನ್ನು ನಡೆಸುತ್ತಿದೆ.





