ಮಂಗಳೂರಿಗೆ ಹಗಲು ಲಕ್ಸುರಿ ಬಸ್‌ಗಳ ಪ್ರವೇಶಕ್ಕೆ ನಿರ್ಬಂಧ: ಕಮಿಷನರ್ ಸುರೇಶ್
* ಪೊಲೀಸ್ ಫೋನ್ ಇನ್ ಕಾರ್ಯಕ್ರಮ

ಮಂಗಳೂರು, ನ.2: ನಗರದ ವಿವಿಧೆಡೆ ಲಕ್ಸುರಿ ಬಸ್‌ಗಳು ಗಂಟೆಗಟ್ಟಲೇ ನಿಲ್ಲುವುದರಿಂದ ಪಾದಚಾರಿಗಳಿಗೆ, ಸಾರ್ವಜನಿಕರಿಗೆ ಹಾಗೂ ಇತರ ವಾಹನಗಳಿಗೆ ಸಮಸ್ಯೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಲಕ್ಸುರಿ ಬಸ್‌ಗಳು ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ನಗರಕ್ಕೆ ಪ್ರವೇಶಿಸುವಂತಿಲ್ಲ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಸೂಚನೆ ನೀಡಿದ್ದಾರೆ.
ನಗರದ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಶುಕ್ರವಾರ ನಡೆದ ಪೊಲೀಸ್ ಫೋನ್‌ಇನ್ ಕಾರ್ಯಕ್ರಮದಲ್ಲಿ ದೂರುಗಳನ್ನು ಸಾರ್ವಜನಿಕ ದೂರುಗಳಿಗೆ ಸ್ಪಂದಿಸಿ ಅವರು ಮಾತನಾಡಿದರು.
ಮಿಲಾಗ್ರಿಸ್ ಬಳಿ ಮುಂಬೈ ಮತ್ತಿತರ ಲಕ್ಸುರಿ ಬಸ್‌ಗಳನ್ನು ಗಂಟೆಗಟ್ಟಲೇ ನಿಲ್ಲಿಸಿರುತ್ತವೆ. ಇದರಿಂದ ಇತರ ಸಿಟಿ/ಸರ್ವೀಸ್ ಬಸ್‌ಗಳ ನಿಲುಗಡೆಗೆ ಸ್ಥಳಾವಕಾಶ ಸಿಗದೆ ರಸ್ತೆಯಲ್ಲಿಯೇ ನಿಲ್ಲಿಸಬೇಕಾದ ಅನಿವಾರ್ಯತೆ ಎದುರಾಗುತ್ತಿದೆ. ಇದರಿಂದ ಪಾದಚಾರಿ, ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಅವರು ಈ ಕ್ರಮಕ್ಕೆ ಸೂಚಿಸಿದರು. ಲಕ್ಸುರಿ ಬಸ್‌ಗಳು ಹಗಲು ವೇಳೆ ನಗರಕ್ಕೆ ಪ್ರವೇಶಿಸುವುದನ್ನು ತಡೆದರೆ ಸಮಸ್ಯೆ ಇಂತಹ ಸಮಸ್ಯೆ ಉದ್ಭವವಾಗುವುದಿಲ್ಲ. ಈ ಬಗ್ಗೆ ಸಂಚಾರ ಪೊಲೀಸ್ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದರು.
ಇದಕ್ಕೆ ಪೂರಕವಾಗಿ ಮಾತನಾಡಿದ ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್, 1993ರಲ್ಲೇ ನಿಯಮವೊಂದನ್ನು ರೂಪಿಸಿ ನಗರ ಪ್ರವೇಶಕ್ಕೆ ಲಕ್ಸುರಿ ಬಸ್‌ಗಳು ನಿಷೇಧಿಸಲಾಗಿತ್ತು. ಆದರೆ ನಿಷೇಧದ ನಿಯಮ ಸಮರ್ಪಕವಾಗಿ ಅನುಷ್ಠಾನಗೊಳ್ಳಲಿಲ್ಲ. ಸದ್ಯ ಲಕ್ಸುರಿ ಬಸ್‌ಗಳನ್ನು ಹಗಲು ವೇಳೆ ನಗರ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.
ಎನ್‌ಎಂಪಿಟಿ ಬಸ್ ನಿಲ್ದಾಣ ಬಳಿ ಕೆಲವರು ರಸ್ತೆಯುದ್ದಕ್ಕೂ ಗೂಡ್ಸ್ ವಾಹನಗಳನ್ನು ಪಾರ್ಕಿಂಗ್ ಮಾಡಿದರೆ, ಇನ್ನು ಕೆಲವರು ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲ್ಲಿಸಿರುತ್ತಾರೆ. ಕೇಳಿದರೆ ಡಿಸೇಲ್ ಹಾಕಿಸುತ್ತಿರುವ ಬಗ್ಗೆ ಸಮಜಾಯಿಷಿ ನೀಡುತ್ತಾರೆ. ಇದರಿಂದ ರಸ್ತೆ ಸಂಪೂರ್ಣ ಬ್ಲಾಕ್ ಆಗಿ ಉಳಿದ ವಾಹನ ಸವಾರರಿಗೆ ಸಮಸ್ಯೆ ಉಂಟಾಗುತ್ತಿದೆ ಎಂದು ಸುರತ್ಕಲ್‌ನ ಸ್ಥಳೀಯರೊಬ್ಬರು ಕರೆ ಮಾಡಿ ದೂರಿದರು.
ಇದಕ್ಕೆ ಸ್ಪಂದಿಸಿದ ಪೊಲೀಸ್ ಆಯುಕ್ತರು, ರಸ್ತೆಯುದ್ದಕ್ಕೂ ನಿಲ್ಲಿಸಿ ವಾಹನ ಸವಾರರಿಗೆ, ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುವ ವಾಹನಗಳ ವಿರುದ್ಧ ಇಂದಿನಿಂದಲೇ ಸೂಕ್ತ ಕ್ರಮ ಕೈಗೊಳ್ಳಬೇಕು. ಅಂತಹ ವಾಹನಗಳನ್ನು ವಶಕ್ಕೆ ಪಡೆಯಲೂ ಸೂಚನೆ ನೀಡಿದರು.
ಹಂಪನಕಟ್ಟೆಯ ಸಿಟಿ ಮಾರ್ಕೆಟ್ ಬಳಿ ಜನತಾ ಜ್ಯೂಸ್ ಜಂಕ್ಷನ್ ಮುಂಭಾಗದಲ್ಲಿ ‘ನೋ ಪಾರ್ಕಿಂಗ್’ ಬೋರ್ಡ್ ಹಾಕಿ ತಮ್ಮ ವಾಹನಗಳನ್ನು ಹೊರತುಪಡಿಸಿದ ಬೇರೆ ವಾಹನಗಳನ್ನು ಪಾರ್ಕಿಂಗ್ ಮಾಡಲು ಅವಕಾಶ ನೀಡುತ್ತಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಹಂಪನಕಟ್ಟೆಯಿಂದ ಪ್ರಮೋದ್‌ಕುಮಾರ್ ಎಂಬವರು ದೂರು ನೀಡಿದರು.
ಇದಕ್ಕೆ ಉತ್ತರಿಸಿದ ಪೊಲೀಸ್ ಕಮಿಷನರ್, ಮಳಿಗೆಗಳ ಮುಂಭಾಗ ಅಕ್ರಮವಾಗಿ ‘ನೋ ಪಾರ್ಕಿಂಗ್’ ಬೋರ್ಡ್‌ಗಳನ್ನು ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಜ್ಯೂಸ್ ಜಂಕ್ಷನ್ ಮುಂಭಾಗದ ಬೋರ್ಡ್‌ನ್ನು ಕಿತ್ತು ತರಲು ಸಂಚಾರ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದರು.
ಮೀನು ಸಾಗಾಟದ ವಾಹನಗಳಿಂದ ಮೀನಿನ ತ್ಯಾಜ್ಯ ರಸ್ತೆಯಲ್ಲೇ ಬೀಳುತ್ತಿದ್ದು, ತ್ಯಾಜ್ಯದ ವಾಸನೆ ಸಹಿಸಲಸಾಧ್ಯ. ಮೀನು ಸಾಗಾಟ ವಾಹನಗಳ ಉಪಟಳ ನಿಯಂತ್ರಿಸಿ ಕ್ರಮ ಕೈಗೊಳ್ಳಲು ಉರ್ವ ಮಾರ್ಕೆಟ್, ಮಣ್ಣಗುಡ್ಡೆ, ಮುಲ್ಕಿ, ಮುಳಿಹಿತ್ಲು ಪ್ರದೇಶಗಳಿಂದ ಕರೆ ಮಾಡಿದ ಹಲವರು ದೂರು ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತರು, ಈ ಬಗ್ಗೆ ಮಹಾ ನಗರ ಪಾಲಿಕೆಗೆ ಲಿಖಿತ ದೂರು ನೀಡಬೇಕು. ಇಲಾಖೆಯಿಂದ ಈಗಾಗಲೇ ಇಂತಹ ವಾಹನಗಳನ್ನು ವಶಕ್ಕೆ ಪಡೆಯಲಾಗುತ್ತಿದೆ. ಇಲಾಖೆಯಿಂದ ಮನಪಾಗೆ ಪತ್ರ ಬರೆಯಲಾಗುವುದು ಎಂದರು.
ಇದು 93ನೇ ಪೊಲೀಸ್ ಫೋನ್ ಇನ್ ಕಾರ್ಯಕ್ರಮವಾಗಿದ್ದು, ಒಟ್ಟು 20 ಕರೆಗಳು ಬಂದವು.
ಕಾರ್ಯಕ್ರಮದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹನುಮಂತರಾಯ, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಉಮಾ ಪ್ರಶಾಂತ್, ಸಂಚಾರ ವಿಭಾಗದ ಎಸಿಪಿ ಮಂಜುನಾಥ ಶೆಟ್ಟಿ, ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಳ್ಳಾಲ್, ದ.ಕ. ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ, ಇನ್‌ಸ್ಪೆಕ್ಟರ್‌ಗಳಾದ ಅಮಾನುಲ್ಲಾ ಎ., ಎಚ್.ಶಿವಪ್ರಕಾಶ್, ಪಿಎಸ್ಸೈ ಕಮಲಾ, ಪಿ.ಯೋಗೇಶ್ವರ್, ಹೆಡ್‌ಕಾನ್‌ಸ್ಟೇಬಲ್ ಪುರುಷೋತ್ತಮ ಉಪಸ್ಥಿತರಿದ್ದರು.
ಇತರ ಪ್ರಮುಖ ದೂರುಗಳು:
* ನಗರದ ಬಸ್‌ಗಳಲ್ಲಿ ಅಂಗವಿಕಲರಿಗೆ ಸೀಟುಗಳು ಮೀಸಲಿದ್ದರೂ ಸೀಟಿನ ಮೇಲೆ ‘ಅಂಗವಿಕಲರಿಗಾಗಿ’ ಎನ್ನುವ ನಾಮಫಲಕ ಹಾಕಿಲ್ಲ.
* ತಾರೆತೋಟ ಪ್ರದೇಶಕ್ಕೆ ಬಸ್‌ಗಳು ಬಾರದಿರುವ ಬಗ್ಗೆ ದೂರು.
* ಕಾವೂರು ಭಾಗದಲ್ಲಿ ತಡರಾತ್ರಿವರೆಗೂ ಬಾರ್‌ಗಳು ತೆರೆಯುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಲು ದೂರು.
* ಸಿಟಿ ಬಸ್‌ಗಳಲ್ಲಿ ಟಿಕೆಟ್ ನೀಡುವ ಮಶಿನ್ ಇದ್ದರೂ ಟಿಕೆಟ್ ನೀಡದೇ ಇರುವುದು.
* ಉಳ್ಳಾಲದಲ್ಲಿ ಒಂದೇ ಬೈಕ್‌ನಲ್ಲಿ ಮೂವರು ಸವಾರಿ ಮಾಡುತ್ತಿರುವ ಬಗ್ಗೆ.
* ತೊಕ್ಕೊಟ್ಟು, ಕಾಪಿಕಾಡ್ ಭಾಗದಲ್ಲಿ ಸರಣಿ ಕಳ್ಳತನ ಪ್ರಕರಣಗಳು ನಡೆಯುತ್ತಿರುವ ಬಗ್ಗೆ.
* ಮೂಡುಬಿದಿರೆಯಲ್ಲಿ ಬೀದಿನಾಯಿಗಳ ಉಪಟಳ ನಿಯಂತ್ರಿಸಲು ದೂರು.
* ಬಿಜೈ ಚರ್ಚ್ ಕರಂಗಲ್ಪಾಡಿ ರಸ್ತೆಯಲ್ಲಿ ಹಂಪ್ಸ್‌ಗಳಿಗೆ ಹಾಕಿರುವ ಬಿಳಿ ಬಣ್ಣ ಮಾಸಿರುವ ಬಗ್ಗೆ.
* ಕುಂಪಲ ಗ್ರಾಮಕ್ಕೆ ಮಧ್ಯಾಹ್ನ ಹಾಗೂ ರಾತ್ರಿ ಸಮಯದಲ್ಲಿ ಬಸ್ ಸಂಚಾರ ಇಲ್ಲದಿರುವುದು.







