ಮೊಬೈಲ್ ಬ್ಯಾಂಕ್ ವಹಿವಾಟುಗಳನ್ನು ಸುರಕ್ಷಿತವಾಗಿ ನಡೆಸುವುದು ಹೇಗೆ?

ಪ್ರಧಾನಿ ನರೇಂದ್ರ ಮೋದಿಯವರು ನೋಟು ನಿಷೇಧ ಪ್ರಕಟಿಸಿ ಎರಡು ವರ್ಷಗಳು ಕಳೆಯುತ್ತಿವೆ. ಗ್ರಾಹಕರಲ್ಲಿ ಈಗಲೂ ನಗದು ವ್ಯವಹಾರ ಆದ್ಯತೆ ಪಡೆದುಕೊಂಡಿದ್ದರೂ ಕಳೆದ ಮೂರು ವರ್ಷಗಳಲ್ಲಿ ಒಂದು ವಿಧಾನ ಮಾತ್ರ ಹೆಚ್ಚು ಜನಪಿಯಗೊಳ್ಳುತ್ತಿದೆ. ಅದು ಮೊಬೈಲ್ ಬ್ಯಾಂಕಿಂಗ್.
ಡಿಜಿಟಲಿ ಸಕ್ರಿಯರಾಗಿರುವ ಗ್ರಾಹಕರಲ್ಲಿ ಮೊಬೈಲ್ ಬ್ಯಾಂಕಿಂಗ್ ಹೆಚ್ಚು ಜನಪ್ರಿಯಗೊಂಡಿದೆ. ಉಳಿತಾಯ ಖಾತೆಗಳಲ್ಲಿ ಮೊಬೈಲ್ ಬ್ಯಾಂಕಿಂಗ್ ಸೌಲಭ್ಯ ಪಡೆದುಕೊಳ್ಳುವಲ್ಲಿ ದಕ್ಷಿಣ ಭಾರತದ ರಾಜ್ಯಗಳು ಉತ್ತರದ ರಾಜ್ಯಗಳನ್ನು ಮೀರಿಸಿವೆ.
ಮೊಬೈಲ್ ಬ್ಯಾಂಕಿಂಗ್ ಮೂಲತಃ ಇಂಟರ್ನೆಟ್ ಬ್ಯಾಂಕಿಂಗ್‌ನ ಪ್ರತಿರೂಪವಾಗಿದೆ. ಹೀಗಾಗಿ ನೀವು ನೆಟ್ ಬ್ಯಾಂಕಿಂಗ್ ಮೂಲಕ ನಡೆಸುವ ಹೆಚ್ಚಿನ ವಹಿವಾಟುಗಳನ್ನು ಈಗ ಮೊಬೈಲ್ ಆ್ಯಪ್ ಮೂಲಕವೇ ನಡೆಸಬಹುದು. ಹಾಲಿ ಹೆಚ್ಚುಕಡಿಮೆ ಎಲ್ಲ ಬ್ಯಾಂಕುಗಳೂ ತಮ್ಮದೇ ಸ್ವಂತ ಮೊಬೈಲ್ ಬ್ಯಾಂಕಿಂಗ್ ಆ್ಯಪ್‌ಗಳನ್ನು ಹೊಂದಿವೆ.
ಬ್ಯಾಂಕಿಂಗ್‌ಗೆ ನಿರ್ದಿಷ್ಟವಾಗಿ ಹೇಳುವುದಾದರೆ ಬಿಲ್ ಪಾವತಿಗಳು,ಸಣ್ಣ ಮೊತ್ತದ ಹಣ ವರ್ಗಾವಣೆ,ಹೂಡಿಕೆ ಮತ್ತು ಖರೀದಿಗಳಂತಹ ಸಣ್ಣ ಪ್ರಮಾಣದ ವಹಿವಾಟುಗಳಿಗಾಗಿ ಮೊಬೈಲ್ ಮಾರ್ಗವು ಬಳಕೆಯಾಗುತ್ತಿದೆ. 4-5ವರ್ಷಗಳ ಹಿಂದೆ ಮೊಬೈಲ್ ಬ್ಯಾಂಕಿಂಗ್‌ನ್ನು ಅಪ್ಪಿಕೊಂಡವರು ಈಗ ದೊಡ್ಡ ಮೊತ್ತದ ಡಿಜಿಟಲ್ ವಹಿವಾಟುಗಳನ್ನು ನಡೆಸುತ್ತಿದ್ದಾರೆ. ಇತ್ತೀಚಿಗೆ ಇದನ್ನು ಅಳವಡಿಸಿಕೊಂಡವರು ಆರಂಭದಲ್ಲಿ ಸಣ್ಣ ವಹಿವಾಟುಗಳನ್ನು ಮಾತ್ರ ನಡೆಸುತ್ತಿದ್ದಾರೆ. ಇಂತಹವರು ಕ್ರಮೇಣ ದೊಡ್ಡ ವಹಿವಾಟುಗಳನ್ನು ನಡೆಸುತ್ತಾರೆ ಎನ್ನುತ್ತಾರೆ ಬ್ಯಾಂಕಿಂಗ್ ತಜ್ಞರು.
ಖಾತೆಯಲ್ಲಿನ ಶಿಲ್ಕು,ನಿರಖು ಠೇವಣಿಗಳು ಮತ್ತು ಆವರ್ತ ಠೇವಣಿಗಳಲ್ಲಿನ ಹೂಡಿಕೆಗಳ ಸಾರಾಂಶ,ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಪಿನ್ ಬದಲಾವಣೆ ಇತ್ಯಾದಿ ಪ್ರಾಥಮಿಕ ವಹಿವಾಟುಗಳನ್ನು ನೀವು ಮೊಬೈಲ್‌ನಲ್ಲಿ ನಡೆಸಬಹುದು. ಹಣದ ವರ್ಗಾವಣೆ,ಕಾರ್ಡ್ ಬಿಲ್‌ಗಳ ಪಾವತಿ,ವಿದ್ಯುತ್ ಇತ್ಯಾದಿ ಬಿಲ್‌ಗಳ ಪಾವತಿ ಮುಂತಾದವುಗಳನ್ನೂ ಮೊಬೈಲ್ ಮೂಲಕ ಮಾಡಬಹುದು. ನೀವು ವಿದೇಶ ಪ್ರಯಾಣದ ಯೋಜನೆಯನ್ನು ಹೊಂದಿದ್ದರೆ ಮೊಬೈಲ್ ಬ್ಯಾಂಕಿಂಗ್ ಆ್ಯಪ್ ಬಳಸಿ ವಿದೇಶಿ ಕರೆನ್ಸಿ ಮತ್ತು ಟ್ರಾವೆಲ್ ಕಾರ್ಡ್‌ಗಳಿಗೆ ಬೇಡಿಕೆ ಸಲ್ಲಿಸಬಹುದು.
ಐಸಿಐಸಿಐ ಬ್ಯಾಂಕಿನ ಐಮೊಬೈಲ್‌ನಂತಹ ಆ್ಯಪ್‌ಗಳು ವಿಮೆ ಉತ್ಪನ್ನಗಳನ್ನು ಖರೀದಿಸಲು ಮತ್ತು ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ ಹೂಡಿಕೆಗಳನ್ನು ಆರಂಭಿಸಲು ಅನುವು ಮಾಡುತ್ತವೆ.
ಆನ್‌ಲೈನ್ ಪಿಪಿಎಫ್,ದಿಢೀರ್ ಕ್ರೆಡಿಟ್ ಕಾರ್ಡ್,ವೈಯಕ್ತಿಕ ಸಾಲ,ಮುಂಗಡ ತೆರಿಗೆ ಪಾವತಿ ಇತ್ಯಾದಿ ಸೌಲಭ್ಯಗಳನ್ನು ಹೆಚ್ಚಿನ ಬ್ಯಾಂಕ್ ಆ್ಯಪ್‌ಗಳು ನೀಡುತ್ತಿರುವುದು ಮೊಬೈಲ್ ಬ್ಯಾಂಕಿಂಗ್ ಬಳಕೆಯನ್ನು ಹೆಚ್ಚಿಸಿದೆ. ಅಲ್ಲದೆ ಗ್ರಾಹಕರು ಕಿರು ವಹಿವಾಟುಗಳಿಗಾಗಿ ಐಎಂಪಿಎಸ್,ಯುಪಿಐ,ಕ್ಯೂಆರ್ ಆಧಾರಿತ ಪಾವತಿ ವಿಧಾನಗಳನ್ನೂ ಬಳಸಿಕೊಳ್ಳುತ್ತಿದ್ದಾರೆ.
ಜನರು ಅನುಕೂಲಕರವಾಗಿರುವ ಮೊಬೈಲ್ ವಿಧಾನವನ್ನು ತಮ್ಮ ಹಣಕಾಸು ವಹಿವಾಟುಗಳಿಗೆ ಬಳಸಿಕೊಳ್ಳುವುದು ಹೆಚ್ಚುತ್ತಿದೆ. ಆದರೆ ಮೊಬೈಲ್ ಬ್ಯಾಂಕಿಂಗ್ ಆ್ಯಪ್‌ಗಳನ್ನು ಬಳಸುವಾಗ ಮುನ್ನೆಚ್ಚರಿಕೆಗಳನ್ನು ವಹಿಸುವುದು ಅತ್ಯಗತ್ಯವಾಗಿದೆ.
ಸುರಕ್ಷಿತ ಮೊಬೈಲ್ ಬ್ಯಾಂಕಿಂಗ್
ನೀವು ಸುರಕ್ಷಿತರಾಗಿರಲು ಸೂಕ್ತವಾದ ಆ್ಯಪ್‌ನ್ನೇ ಡೌನ್‌ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ಗೂಗಲ್ ಫ್ಲೇ ಸ್ಟೋರ್‌ನಲ್ಲಿಯ ನಕಲಿ ಬ್ಯಾಂಕಿಂಗ್ ಆ್ಯಪ್‌ಗಳಿಂದಾಗಿ ಸುಮಾರು 1,60,000 ಜನರ ದತ್ತಾಂಶಗಳು ಸೋರಿಕೆಯಾಗಿವೆ ಎಂದು ಜಾಗತಿಕ ಮಾಹಿತಿ ತಂತ್ರಜ್ಞಾನ ಸುರಕ್ಷತೆ ಕಂಪನಿ ಸೋಫೊಸ್ ಲ್ಯಾಬ್ಸ್ ಇತ್ತೀಚಿಗೆ ವರದಿ ಮಾಡಿದೆ. ಈ ವಂಚಕ ಆ್ಯಪ್‌ಗಳು ಮುಖ್ಯವಾಗಿ ಎಸ್‌ಬಿಐ,ಐಸಿಐಸಿಐ,ಐಒಬಿ,ಎಕ್ಸಿಸ್,ಬಿಒಬಿ ಮತ್ತು ಸಿಟಿಬ್ಯಾಂಕ್ ಈ ಏಳು ಬ್ಯಾಂಕ್‌ಗಳ ಗ್ರಾಹಕರನ್ನು ಗುರಿಯಾಗಿಸಿಕೊಂಡಿವೆ.
ಹೀಗಾಗಿ ಗ್ರಾಹಕರು ಗೂಗಲ್ ಪ್ಲೇ ಸ್ಟೋರ್‌ನಿಂದ ಅಧಿಕೃತ ಆ್ಯಪ್‌ಗಳನ್ನುಮಾತ್ರ ಡೌನ್‌ಲೋಡ್ ಮಾಡಿಕೊಳ್ಳಬೇಕು. ಯಾವುದೇ ಥರ್ಡ್‌ಪಾರ್ಟಿ ವೆಬ್‌ಸೈಟ್‌ಗಳಿಂದ ಡೌನ್‌ಲೋಡ್ ಮಾಡಿಕೊಳ್ಳಬಾರದು ಮತ್ತು ಅಂತಹ ವೆಬ್‌ಸೈಟ್‌ಗಳು/ಆ್ಯಪ್‌ಗಳಲ್ಲಿ ತಮ್ಮ ಯಾವುದೇ ರಹಸ್ಯ ಮಾಹಿತಿಗಳನ್ನು ಹಂಚಿಕೊಳ್ಳಬಾರದು. ಬ್ಯಾಂಕಿನ ವೆಬ್‌ಸೈಟ್ ಅಥವಾ ನಿಮ್ಮ ಮೊಬೈಲ್ ಬ್ರೌಸರ್ ಮೂಲಕ ಆ್ಯಪ್ ಸ್ಟೋರ್‌ಗೆ ಹೋಗುವುದು ಸೂಕ್ತ ಆ್ಯಪ್ ಡೌನ್ ಮಾಡಿಕೊಳ್ಳಲು ಮಾರ್ಗಗಳಲ್ಲೊಂದಾಗಿದೆ.
ಇದಲ್ಲದೆ,ನೀವು ಯಾವುದೇ ವಂಚನೆಗೆ ಬಲಿಯಾಗದಂತೆ ರಕ್ಷಿಸಿಕೊಳ್ಳಲು ನೀವು ಕೈಗೊಳ್ಳಬೇಕಾದ ಕೆಲವು ಕ್ರಮಗಳಿವೆ. ಎಂಪಿನ್,ಒಟಿಪಿಯಂತಹ ಯಾವುದೇ ಸೂಕ್ಷ್ಮ ಮಾಹಿತಿಗಳನ್ನು ಹಂಚಿಕೊಳ್ಳದಿರುವುದು,ನಿಮ್ಮ ಮೊಬೈಲ್‌ನ್ನು ಪಾಸವರ್ಡ್‌ನಿಂದ ಸುರಕ್ಷಿತಗೊಳಿಸುವುದು ಮತ್ತು ಹ್ಯಾಂಡ್ ಸೆಟ್‌ಗಳನ್ನು ಬದಲಿಸುವಾಗ ಹಳೆಯ ಫೋನ್‌ನಲ್ಲಿಯ ಎಲ್ಲ ಮಾಹಿತಿಗಳನ್ನು ಅಳಿಸಿಹಾಕುವುದು ಇವು ಇಂತಹ ಕೆಲವು ಸುರಕ್ಷತಾ ಕ್ರಮಗಳಾಗಿವೆ.
ಮೊಬೈಲ್ ಬ್ಯಾಂಕಿಂಗ್ ಆ್ಯಪ್‌ಗಳು ಮಾತ್ರವಲ್ಲ,ಇ-ವ್ಯಾಲೆಟ್‌ಗಳ ಬಳಕೆಯೂ ಹೆಚ್ಚುತ್ತಿದೆ. ಪೇಟಿಎಂ,ಮೊಬಿಕ್ವಿಕ್,ಫ್ರೀಚೇಂಜ್ ಇತ್ಯಾದಿಗಳು ಇಂತಹ ಕೆಲವು ಮೊಬೈಲ್ ವ್ಯಾಲೆಟ್‌ಗಳಾಗಿವೆ. ಇಂತಹ ಆ್ಯಪ್‌ಗಳನ್ನು ಬಳಸುವಾಗಲೂ ಜಾಗರೂಕತೆ ಇರಬೇಕು. ನಿಮ್ಮ ಒಟಿಪಿಯನ್ನು ಫೋನ್ ಕರೆ, ಎಸ್‌ಎಂಎಸ್, ವಾಟ್ಸ್‌ಆ್ಯಪ್,ಇಮೇಲ್ ಆಥವಾ ಇನ್ಯಾವುದೇ ವೇದಿಕೆಯ ಮೂಲಕ ಹಂಚಿಕೊಳ್ಳಬಾರದು ಎನ್ನುತಾರೆ ಪರಿಣಿತರು.







