ಉಪ ಚುನಾವಣೆ: ನಾಳೆ ಮತದಾನ

ಬೆಂಗಳೂರು, ನ. 2: ರಾಜ್ಯದ ಮೂರು ಲೋಕಸಭೆ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಾಳೆ(ನ.3) ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭಗೊಳ್ಳಲಿದ್ದು, ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ.
ಮುಂಬರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ವಿಶ್ಲೇಷಿಸಲಾಗುತ್ತಿರುವ ಈ ಉಪ ಚುನಾವಣೆ ಆಡಳಿತಾರೂಢ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಹಾಗೂ ವಿಪಕ್ಷ ಬಿಜೆಪಿ ಮಧ್ಯೆ ತೀವ್ರ ಪೈಪೋಟಿ ಸೃಷ್ಟಿಸಿದ್ದು, ಮತದಾರರ ಮನಗೆಲ್ಲಲು ಕಾರ್ಯತಂತ್ರ ರೂಪಿಸಿವೆ.
ವಿ.ಎಸ್.ಉಗ್ರಪ್ಪ-ಜೆ.ಶಾಂತಾ, ಮಧು ಬಂಗಾರಪ್ಪ-ಬಿ.ವೈ.ರಾಘವೇಂದ್ರ, ಎಲ್.ಆರ್.ಶಿವರಾಮೇಗೌಡ-ಡಾ.ಸಿದ್ದರಾಮಯ್ಯ, ಅನಿತಾ ಕುಮಾರಸ್ವಾಮಿ, ಆನಂದ್ ನ್ಯಾಮಗೌಡ-ಶ್ರೀಕಾಂತ್ ಕುಲಕರ್ಣಿ ಸಹಿತ ಘಟಾನುಘಟಿ ಅಭ್ಯರ್ಥಿಗಳ ಹಣೆಬರಹವನ್ನು ಮತದಾರ ನಾಳೆ(ನ.3) ಬರೆಯಲಿದ್ದಾನೆ.
ಬಳ್ಳಾರಿ, ಶಿವಮೊಗ್ಗ, ಮಂಡ್ಯ, ರಾಮನಗರ ಹಾಗೂ ಜಮಖಂಡಿ ಕ್ಷೇತ್ರದಲ್ಲಿ 57 ಸಖಿ(ಪಿಂಕ್) ಮತಗಟ್ಟೆ, 1,502 ಸೂಕ್ಷ್ಮ ಸೇರಿ ಒಟ್ಟಾರೆ 6,453 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಭದ್ರತೆಗೆ ಸ್ಥಳೀಯ ಪೊಲೀಸರ ಜತೆಗೆ 39 ಕೇಂದ್ರ ಮೀಸಲು ಪಡೆ ನಿಯೋಜನೆ ಮಾಡಲಾಗಿದೆ.
9822 ಬ್ಯಾಲೆಟ್ ಯೂನಿಟ್, 8,438 ಕಂಟ್ರೋಲ್ ಯೂನಿಟ್ ಹಾಗೂ 8,922 ವಿವಿ ಪ್ಯಾಟ್‌ಗಳನ್ನು ಬಳಕೆ ಮಾಡುತ್ತಿದ್ದು, 130 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಮಾಡುತ್ತಿದ್ದು, 1,312 ಮೈಕ್ರೋ ವೀಕ್ಷಕರನ್ನು ನೇಮಕ ಮಾಡಲಾಗಿದೆ ಎಂದು ಚುನಾವಣೆ ಆಯೋಗ ಹೇಳಿದೆ.
ಐದು ಕ್ಷೇತ್ರಗಳಲ್ಲಿ ಒಟ್ಟಾರೆ 27.21 ಲಕ್ಷಕ್ಕೂ ಅಧಿಕ ಪುರುಷ ಹಾಗೂ 27.30 ಲಕ್ಷಕ್ಕೂ ಅಧಿಕ ಮಹಿಳೆ ಸೇರಿದಂತೆ 54.54 ಲಕ್ಷಕ್ಕೂ ಅಧಿಕ ಮತದಾರರಿದ್ದು, ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಇದೇ ಮೊದಲಬಾರಿಗೆ ವಿಕಲಚೇತನ ಮತದಾರರಿಗೆ ವಾಹನ ವ್ಯವಸ್ಥೆ ಕಲ್ಪಿಸಲಾಗಿದೆ.
ಗೆಲುವಿಗೆ ಕಸರತ್ತು: ಮತದಾರರ ಮನ ಗೆಲ್ಲಲು ಅಭ್ಯರ್ಥಿಗಳು ಮತ್ತು ಪಕ್ಷದ ಸ್ಥಳೀಯ ಕಾರ್ಯಕರ್ತರು ಮನೆ-ಮನೆ ಪ್ರಚಾರ ನಡೆಸಿದ್ದಾರೆ. ಜತೆಗೆ ಕೊನೆಯ ಕ್ಷಣದ ಆಟವೇ ಅಭ್ಯರ್ಥಿಯ ರಾಜಕೀಯ ಭವಿಷ್ಯ ನಿರ್ಧರಿಸಲಿರುವ ಹಿನ್ನೆಲೆಯಲ್ಲಿ ಇನ್ನಿಲ್ಲದ ಕಸರತ್ತು ಕೂಡ ನಡೆಸಿದ್ದಾರೆ.
ರಾಜಕೀಯ ಪಕ್ಷಗಳು ಮತದಾರರಿಗೆ ಹಣ-ಮದ್ಯದ ಆಮಿಷವೊಡ್ಡುವ ಸಾಧ್ಯತೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು-ರಾಜಕೀಯ ಮುಖಂಡರ ಕಾರ್ಯ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಚು.ಆಯೋಗ ಮತದಾರರಿಗೆ ಹಣ ಹಂಚಲು ಯತ್ನಿಸಿದ ಹಲವರನ್ನು ವಶಕ್ಕೆ ಪಡೆದಿದೆ.
ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಸೃಷ್ಟಿಸಿರುವ ಸಿಎಂ ಕುಮಾರಸ್ವಾಮಿ ಪ್ರತಿನಿಧಿಸುತ್ತಿದ್ದ ರಾಮನಗರ ಉಪ ಚುನಾವಣಾ ಕಣದಿಂದ ಕೊನೆಯ ಕ್ಷಣದಲ್ಲಿ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಹಿಂದೆ ಸರಿದಿದ್ದು, ಚುನಾವಣೆ ಮುಂದೂಡಬೇಕು ಎಂದು ಬಿಜೆಪಿ ತಡರಾತ್ರಿ ಆಯೋಗಕ್ಕೆ ಮನವಿ ಮಾಡಿದೆ.
ಐದು ಕ್ಷೇತ್ರಗಳಲ್ಲಿ ಈಗಾಗಲೇ ಮದ್ಯ ಮಾರಾಟ ನಿಷೇಧಿಸಿದ್ದು, ಮತಗಟ್ಟೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ನ.6ರಂದು ಮತ ಎಣಿಕೆ ಕಾರ್ಯ ಆಯಾ ಕ್ಷೇತ್ರಗಳಲ್ಲಿ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟಗೊಳ್ಳಲಿದ್ದು ಎಲ್ಲರ ಚಿತ್ತ ನೆಟ್ಟಿದೆ.
ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿ
‘ಮೂರು ಲೋಕಸಭೆ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣಾ ಮತದಾರರಿಗೆ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿ ಹಾಕಲಾಗುವುದು’
-ಸಂಜೀವ್ ಕುಮಾರ್, ರಾಜ್ಯ ಮುಖ್ಯ ಚುನಾವಣಾಧಿಕಾರಿ







