ಬೆಂಜನಪದವಿನ ಸರಕಾರಿ ಪ್ರೌಢಶಾಲೆಯಲ್ಲಿ "ಸೈನ್ಸ್ ಆನ್ ವೀಲ್ಸ್" ಕಾರ್ಯಕ್ರಮಕ್ಕೆ ಚಾಲನೆ

ಬಂಟ್ವಾಳ, ಅ. 2: ಕಳೆದ ಕೆಲ ದಿನಗಳ ಹಿಂದೆ ಸಂಚಾರಿ ತಾರಾಲಯದ ಮೂಲಕ ತಾಲೂಕಿನ ವಿದ್ಯಾರ್ಥಿಗಳಲ್ಲಿ ಬಾಹ್ಯಕಾಶದ ಕೌತುಕಗಳನ್ನು ಶಾಲೆ ಆವರಣದಲ್ಲೇ ವೀಕ್ಷಿಸುವ ಅವಕಾಶ ಕಲ್ಪಿಸಿ ಕೊಟ್ಟಿದ್ದ ಬಂಟ್ವಾಳ ರೋಟರಿ ಕ್ಲಬ್ ಈ ಯಶಸ್ಸಿನ ಪ್ರೇರಣೆ ಪಡೆದು ತನ್ನ ಸುವರ್ಣ ವರ್ಷಾಚರಣೆಯ ಪ್ರಯುಕ್ತ ಶಾಲೆಯಲ್ಲಿಯೇ ಸರಳವಾಗಿ ವಿಜ್ಞಾನವನ್ನು ತಿಳಿದುಕೊಳ್ಳವ ಅವಕಾಶವನ್ನು ವಿದ್ಯಾರ್ಥಿಗಳಿಗೆ ಕಲ್ಪಿಸಿದ್ದು ರಾಜ್ಯೋತ್ಸವ ದಿನದಂದು ಈ ಕಾರ್ಯಕ್ರಮಕ್ಕೆ ಬೆಂಜನಪದವಿನ ಸರಕಾರಿ ಪ್ರೌಢಶಾಲೆಯಲ್ಲಿ ಚಾಲನೆ ನೀಡಲಾಯಿತು.
ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ ನೇತೃತ್ವದಲ್ಲಿ "ಸೈನ್ಸ್ ಆನ್ ವೀಲ್ಸ್" ಎನ್ನುವ ಕಾರ್ಯಕ್ರಮದಡಿ ವಿಜ್ಞಾನದ ಕುತೂಹಲ ಹಾಗೂ ವಿವಿಧ ವೈಜ್ಞಾನಿಕ ಆವಿಷ್ಕಾರಗಳ ಬಗ್ಗೆ ಸರಳವಾಗಿ, ಪ್ರಾಯೋಗಾತ್ಮಕವಾಗಿ ಅರಿವು ಮೂಡಿಸುವ ಹಾಗೂ ವಿಜ್ಞಾನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸುವ ಕಾರ್ಯಕ್ರಮ ಇದಾಗಿದೆ.
ರೋಟರಿ ವಲಯ 4ರ ಸಹಾಯಕ ಗವರ್ನರ್ ಪ್ರಕಾಶ್ ಕಾರಂತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಂಟ್ವಾಳ ರೋಟರಿ ಕ್ಲಬ್ 50ನೆ ವರ್ಷಾಚರಣೆಯ ಪ್ರಯುಕ್ತ ಹಲವಾರು ವಿನೂತನ ಹಾಗೂ ಸ್ಮರಣೀಯವಾದ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಯಾವುದೇ ಜೀವಿ ಅಥವಾ ವಸ್ತುವಿನ ಚಿಕಿತ್ಸಕವಾದ ಅಧ್ಯಯನ, ಅಥವಾ ಅವುಗಳ ಆಶೋತ್ತರಗಳಿಗೆ ಪರಿಹಾರ ಕಂಡು ಹಿಡಿಯುವುದೇ ವಿಜ್ಞಾನ. ವಿಜ್ಞಾನದ ವಿಕಾಸವೆಂದರೆ ಅದು ಮನುಕುಲದ ವಿಕಾಸವಾಗಿದೆ. ವಿಜ್ಞಾನದ ವಿಕಾಸದಿಂದ ಜಗತ್ತೆ ಒಂದು ಗ್ರಾಮವಾಗಿ ಪರಿವರ್ತನೆಯಾಗಿದೆ ಎಂದರು.
ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವ್ಯರ್ಥವಾಗಿ ಹೋಗುವ ವಸ್ತುಗಳಲ್ಲೂ ವಿಜ್ಞಾನವನ್ನೂ ವಿಕಾಸ ಗೊಳಿಸುವ ಕುರಿತಾಗಿ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಮಾಹಿತಿ ಪಡೆಯಲಿದ್ದು, ತಮ್ಮದೇ ಆಲೋಚನಾ ಶಕ್ತಿಯಿಂದ ಹೊಸ ಆವಿಷ್ಕಾರಗಳನ್ನು ಮಾಡಲು ಇದರಿಂದ ಸಾಧ್ಯವಿದೆ ಎಂದರು.
ಶಾಲಾಭಿವೃದ್ದಿ ಸಮಿತಿಯ ಕಾರ್ಯಧ್ಯಕ್ಷ ವಾಮನ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ರೋಟರಿ ಕ್ಲಬ್ ಕಾರ್ಯದರ್ಶಿ ಶಿವಾನಿ ಬಾಳಿಗ, ಆ್ಯನ್ಸ್ ಕ್ಲಬ್ ಅಧ್ಯಕ್ಷೆ ವಿದ್ಯಾ ಅಶ್ವನಿ ಕುಮಾರ್ ರೈ, 50ನೆ ವರ್ಷಾಚರಣೆ ಸಮಿತಿ ಸಂಚಾಲಕ ಡಾ. ರಮೇಶಾನಂದ ಸೋಮಾಯಜಿ, ನಿಕಟಪೂರ್ವ ಕಾರ್ಯದರ್ಶಿ ನಾಯಯಣ ಹೆಗ್ಡೆ, ಕಾಲೇಜಿನ ಪ್ರಾಂಶುಪಾಲ ಎ.ಟಿ. ಗಿರೀಶ್ಚಂದ್ರ, ಇಂಟರಾಕ್ಟ್ ಕ್ಲಬ್ ಸಂಚಾಲಕಿ ಹೇಮಾ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಶ್ರೀದೇವಿ ಸ್ವಾಗತಿಸಿ, ಪ್ರತಿಭಾ ಭಟ್ ವಂದಿಸಿ, ದೇವದಾಸ್ ಕೆ. ಕಾರ್ಯಕ್ರಮ ನಿರೂಪಿಸಿದರು.
30ಕ್ಕಿಂತಲೂ ಹೆಚ್ಚು ವಿಜ್ಞಾನದ ಕೌತುಕಗಳು: ಬಳಿಕ ಸೈನ್ಸ್ ಆನ್ ವೀಲ್‍ನ ಕ್ಯುರೇಟರ್‍ಗಳಾದ ಸತೀಶ್ ಹಾಗೂ ಲಕ್ಷ್ಮೀಪತಿ ಅವರು, ಬೆಳಕಿನ ಪ್ರತಿಫಲನ, ಬೆಳಕಿನ ವಕ್ರೀಭವನ, ಬಣ್ಣದ ನೆರಳು, ಶಬ್ದಗಳ ವಿವಿಧತೆ, ನೇರಾಳಾತೀತ ಬೆಳಕು, ವಿವಿಧ ಕನ್ನಡಿಗಳ ಪ್ರತಿಬಿಂಬ, ಅನಂತತೆಯ ಬಾವಿ, ವಿದ್ಯುತ್ ಶಕ್ತಿಯಿಂದ ಯಾಂತ್ರೀಕ ಶಕ್ತಿಯ ಉತ್ಪಾದಕತೆ, ಉಪಗ್ರಹ ಉಡ್ಡಾಯನದ ಮಾದರಿ, ಡ್ರೋನ್ ಹಾರಾಟ ಮೊದಲಾದ 30ಕ್ಕಿಂತಲೂ ಅಧಿಕ ಬಗೆಯ ವಿಜ್ಞಾನದ ಕೌತುಕಗಳನ್ನು ವಿದ್ಯಾರ್ಥಿಗಳಿಗೆ ಕಲಿಸಿಕೊಟ್ಟರು. ಕೆಲ ಪ್ರಯೋಗಗಳನ್ನು ವಿದ್ಯಾರ್ಥಿಗಳು ಮಾಡಿ ಸಂಭ್ರಮಪಟ್ಟರು. ಮುಂದಿನ ದಿನಗಳಲ್ಲಿ ತಾಲೂಕಿನ ವಿವಿಧ ಶಾಲೆಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ.







