ರಾಜ್ಯಮಟ್ಟದ ಕ್ವಿಝ್ ಸ್ಪರ್ಧೆಗೆ ಅರ್ಜಿ ಆಹ್ವಾನ
ಬೆಂಗಳೂರು, ನ. 2: ಜ್ಞಾನ ಸುರಭಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಪ್ರಸಕ್ತ ವರ್ಷದ ಶೈಕ್ಷಣಿಕ ಸಾಲಿನಲ್ಲಿ ನಾಡಿನ ಎಲ್ಲ ಶಾಲೆಗಳ ವಿದ್ಯಾರ್ಥಿಗಳಿಂದ ರಾಜ್ಯಮಟ್ಟದ ರಸಪ್ರಸ್ನೆ ಸ್ಪರ್ಧೆಗೆ ಅರ್ಜಿ ಆಹ್ವಾನಿಸಲಾಗಿದೆ.
ಶುಕ್ರವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‌ನ ಅಧ್ಯಕ್ಷ ಸಿ.ಎಂ.ರೇಣುಕಾ ಮಾತನಾಡಿ, ಅರ್ಜಿಯನ್ನು ನ.12ರೊಳಗೆ ಆನ್‌ಲೈನ್ ಮೂಲಕ ಸಲ್ಲಿಸಬಹುದಾಗಿದ್ದು, ಸ್ಪರ್ಧೆಯು 3ನೆ ತರಗತಿಯಿಂದ 5ನೆ ತರಗತಿವರೆಗೆ ಜೂನಿಯರ್ ಹಂತ ಹಾಗೂ 6ನೆ ತರಗತಿಯಿಂದ 8ನೆ ತರಗತಿಯವರೆಗೆ ಸೀನಿಯರ್ ಹಂತವಾಗಿ ನಡೆಯಲಿದೆ ಎಂದು ಹೇಳಿದರು.
ಮೊದಲಿಗೆ ತಾಲೂಕು ಹಂತದಲ್ಲಿ ನಂತರ ಜಿಲ್ಲಾ ಹಂತದಲ್ಲಿ ಹಾಗೂ ಕೊನೆಯದಾಗಿ ರಾಜ್ಯ ಮಟ್ಟದಲ್ಲಿ ನಡೆಯಲಿದೆ. ರಾಜ್ಯ ಮಟ್ಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ 1ಲಕ್ಷ ನಗದು ಬಹುಮಾನವನ್ನು ನೀಡಲಾಗುವುದು ಹಾಗೂ ಸ್ಪರ್ಧೆಯ ಪ್ರವೇಶ ಉಚಿತವಾಗಿದ್ದು, ಯಾವುದೇ ಹಂತದಲ್ಲಿ ಶುಲ್ಕವನ್ನು ಸಂಗ್ರಹಿಸುತ್ತಿಲ್ಲ. ಅರ್ಜಿ ಶುಲ್ಕ 25 ರೂ.ಗಳನ್ನು ಮಾತ್ರ ಪಡೆಯಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ jnanasurabhis@gmail.com ಹಾಗೂ ಮೊಬೈಲ್ ಸಂಖ್ಯೆ 91645 85807 ಅನ್ನು ಸಂಪರ್ಕಿಸಲು ತಿಳಿಸಿದ್ದಾರೆ.







