ಕಿರು, ಸಣ್ಣ ಹಾಗು ಮಧ್ಯಮ ಉದ್ಯಮಗಳಿಗೆ 59 ನಿಮಿಷಗಳಲ್ಲಿ 1 ಕೋಟಿ ರೂ.ವರೆಗೆ ಸಾಲ
ಪ್ರಧಾನಿ ಮೋದಿ ಘೋಷಣೆ

ಹೊಸದಿಲ್ಲಿ, ನ.2: ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ ದೀಪಾವಳಿ ಕೊಡುಗೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, 59 ನಿಮಿಷದಲ್ಲಿ 1 ಕೋಟಿ ರೂ.ವರೆಗಿನ ಸಾಲ ಮಂಜೂರುಗೊಳಿಸುವ ಯೋಜನೆಯನ್ನು ಘೋಷಿಸಿದ್ದಾರೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಸಂಸ್ಥೆಗಳ(ಎಂಎಸ್‌ಎಂಇ) ಬೆಂಬಲ ಯೋಜನೆಗೆ ಚಾಲನೆ ನೀಡಿದ ಮೋದಿ, ಈ ಕ್ಷೇತ್ರಕ್ಕೆ ನೆರವಾಗಲು ಕೇಂದ್ರ ಸರಕಾರ 12 ಕಾರ್ಯನೀತಿಗಳನ್ನು ರೂಪಿಸಿದೆ . ಜಿಎಸ್‌ಟಿಯಲ್ಲಿ ನೋಂದಾಯಿಸಲ್ಪಟ್ಟಿರುವ ಎಂಎಸ್‌ಎಂಇಗಳು 1 ಕೋಟಿ ರೂ.ವರೆಗಿನ ಹೆಚ್ಚಳದ ಸಾಲ(ಇಂಕ್ರಿಮೆಂಟಲ್ ಲೋನ್)ದ ಮೇಲೆ ಶೇ.2ರಷ್ಟು ರಿಯಾಯಿತಿ ಪಡೆಯಲಿವೆ . ಈ ಕ್ಷೇತ್ರಕ್ಕೆ ನೀಡಿರುವ ದೀಪಾವಳಿ ಕೊಡುಗೆ ಇದಾಗಿದ್ದು ಇದರಿಂದ ಈ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಹೆಚ್ಚಲಿದೆ . ಈ ಯೋಜನೆಯನ್ನು ಜನರೆಡೆಗೆ ತಲುಪಿಸಲು 100 ದಿನ 100 ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಮೋದಿ ತಿಳಿಸಿದರು.
ಭಾರತವು ವ್ಯಾಪಾರಕ್ಕೆ ಸುಲಭಸಾಧ್ಯ ದೇಶದ ಪಟ್ಟಿಯಲ್ಲಿ 77ನೇ ಸ್ಥಾನಕ್ಕೆ ಭಡ್ತಿ ಪಡೆದಿರುವುದನ್ನು ಉಲ್ಲೇಖಿಸಿದ ಪ್ರಧಾನಿ, ಜನರು ಕಲ್ಪಿಸದ ರೀತಿಯ ಸಾಧನೆಯನ್ನು ಭಾರತ ಮಾಡಿದೆ. ದೇಶವು ಅಗ್ರ 50 ರಾಷ್ಟ್ರಗಳ ಸಾಲಿನಲ್ಲಿ ಸ್ಥಾನ ಅಲಂಕರಿಸುವ ದಿನ ದೂರವಿಲ್ಲ ಎಂದರು. ಕಳೆದ ಆಗಸ್ಟ್‌ನಲ್ಲಿ ಸಭೆಯೊಂದರಲ್ಲಿ ಮಾತನಾಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮುಂದಿನ ಚುನಾವಣೆಯಲ್ಲಿ ವಿಪಕ್ಷಗಳು ಅಧಿಕಾರಕ್ಕೆ ಬಂದರೆ ದೇಶದ ಆರ್ಥಿಕ ನೀತಿಯ ಕೇಂದ್ರ ಬಿಂದು ಎಂಎಸ್‌ಎಂಇ ಕ್ಷೇತ್ರವಾಗಲಿದೆ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಈಗ ಪ್ರಧಾನಿಯ ದೀಪಾವಳಿ ಕೊಡುಗೆಯ ಘೋಷಣೆ ಹೊರಬಿದ್ದಿದೆ ಎಂದು ವಿಶ್ಲೇಷಿಸಲಾಗಿದೆ.







