ಅಂಗವಿಕಲರೂ ಹಜ್ ಯಾತ್ರೆ ಕೈಗೊಳ್ಳಬಹುದು: ಹೈಕೋರ್ಟ್ ಗೆ ತಿಳಿಸಿದ ಕೇಂದ್ರ ಸರಕಾರ

ಹೊಸದಿಲ್ಲಿ, ನ.2: ಅಂಗವಿಕಲರೂ ಹಜ್ ಯಾತ್ರೆ ಕೈಗೊಳ್ಳಲು ಅನುವಾಗುವಂತೆ ತನ್ನ ಹಜ್ ನೀತಿಗೆ ತಿದ್ದುಪಡಿ ತಂದಿರುವುದಾಗಿ ಕೇಂದ್ರ ಸರಕಾರ ಗುರುವಾರ ದಿಲ್ಲಿ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ರಾಜೇಂದ್ರ ಮೆನನ್ ಹಾಗೂ ನ್ಯಾಯಮೂರ್ತಿ ಐಎಸ್ ಮೆಹ್ತಾ ಅವರನ್ನೊಳಗೊಂಡ ಪೀಠದ ಮುಂದೆ ಹೇಳಿದೆ. ಕ್ಯಾನ್ಸರ್, ಟಿಬಿ ಮತ್ತಿತರ ಗಂಭೀರ ಕಾಯಿಲೆ ಹೊಂದಿರುವವರಿಗೆ ಮಾತ್ರ ಹಜ್ ಯಾತ್ರೆ ಕೈಗೊಳ್ಳಲು ಅನುಮತಿಯಿಲ್ಲ ಎಂದು ಕೇಂದ್ರ ತಿಳಿಸಿದೆ.
ಭಿನ್ನ ಸಾಮರ್ಥ್ಯದ ಜನರು ಹಜ್ ಯಾತ್ರೆಗೆ ಸಾಮಾನ್ಯ ವಿಭಾಗದಲ್ಲಿ ಅರ್ಜಿ ಸಲ್ಲಿಸಲು ಅನುಮತಿಸುವ ಸರ್ವಾನುಮತದ ನಿರ್ಣಯವನ್ನು ಭಾರತದ ಹಜ್ ಸಮಿತಿ ಕೈಗೊಂಡಿದೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಪರ ವಕೀಲ ಅಜಯ್ ದಿಗ್‍ಪೌಲ್ ನ್ಯಾಯಾಲಯಕ್ಕೆ ತಿಳಿಸಿದರು. ಹಜ್ ಯಾತ್ರೆ ಕೈಗೊಳ್ಳುವ ಅಂಗವಿಕಲರು ಸಾಧ್ಯವಾದರೆ ತಾವೊಬ್ಬರೇ ಅಥವಾ ಅಗತ್ಯ ಬಿದ್ದರೆ ಅವರ ಸಂಪೂರ್ಣ ಜವಾಬ್ದಾರಿ ಹೊರಬಲ್ಲ ಸಂಬಂಧಿಯಾಗಿರುವ ಸಹಾಯಕರೊಂದಿಗೆ ತೆರಳಬಹುದು ಎಂದು ವಕೀಲರು ತಿಳಿಸಿದರು.
ಹಜ್ ಸಮಿತಿ 2018-2022ರ ಅವಧಿಗೆ ಹಜ್ ನೀತಿಯಲ್ಲಿ ಮಾಡಿರುವ ಬದಲಾವಣೆಗಳ ಬಗ್ಗೆ ಮಾಹಿತಿ ನೀಡುವ ಅಫಿದಾವಿತ್ ಅನ್ನೂ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿದರು.
“ಅಂಗ ಊನಗೊಂಡಿರುವುದನ್ನು ದೈಹಿಕ ಆರೋಗ್ಯ ಸಮಸ್ಯೆಯೆಂದು ಪರಿಗಣಿಸಲಾಗುವುದಿಲ್ಲ, ಆದರೆ ಕ್ಯಾನ್ಸರ್, ತೀವ್ರ ಹೃದಯ ಸಂಬಂಧಿ ತೊಂದರೆಗಳು, ಶ್ವಾಸಕೋಶ ಸಂಬಂಧಿ ಸಮಸ್ಯೆಗಳು, ಲಿವರ್ ಅಥವಾ ಕಿಡ್ನಿ ಕಾಯಿಲೆಗಳು, ಟಿಬಿ ಹಾಗೂ ಮುಪ್ಪಿನ ದೌರ್ಬಲ್ಯವುಳ್ಳವರು ಮಾತ್ರ ಹಜ್ ಯಾತ್ರೆಗೆ ಅರ್ಜಿ ಸಲ್ಲಿಸುವಂತಿಲ್ಲ'' ಎಂದು ತಿದ್ದುಪಡಿಗೊಂಡ ನೀತಿ ತಿಳಿಸುತ್ತದೆ.
ಅಂಗವಿಕಲರಿಗೆ ಹಜ್ ಯಾತ್ರೆ ಕೈಗೊಳ್ಳುವುದಕ್ಕೆ ನಿರ್ಬಂಧ ಹೇರಿರುವ ಈ ಹಿಂದಿನ ನೀತಿಯನ್ನು ರದ್ದುಗೊಳಿಸುವಂತೆ ವಕೀಲರಾದ ಗೌರವ್ ಕುಮಾರ್ ಬನ್ಸಾಲ್ ಎಂಬವರು ದಾಖಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆಗೆ ಪ್ರತಿಯಾಗಿ ಕೇಂದ್ರ ಈ ಅಫಿದಾವಿತ್ ಸಲ್ಲಿಸಿದೆ.
ಈ ಪ್ರಕರಣವನ್ನು ವಿಲೇವಾರಿಗೊಳಿಸಿದ ನ್ಯಾಯಾಲಯ ಅದೇ ಸಮಯ ಅಪೀಲುದಾರರಿಗೆ ತಿದ್ದುಪಡಿಗೊಂಡ ನೀತಿಯ ಬಗ್ಗೆ ಅಸಮಾಧಾನವಿದ್ದಲ್ಲಿ ಅವರು ಅದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಬಹುದು ಎಂದು ಹೇಳಿದೆ.







