ಮಾಜಿ ಶಾಸಕ ರವೀಂದ್ರ ಆರೋಗ್ಯ ಸ್ಥಿತಿ ಗಂಭೀರ: ಆಸ್ಪತ್ರೆಗೆ ಭೇಟಿ ನೀಡಿದ ಸಿದ್ದರಾಮಯ್ಯ

ಬೆಂಗಳೂರು, ನ.2: ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿರುವ ಮಾಜಿ ಶಾಸಕ ಎಂ.ಪಿ. ರವೀಂದ್ರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿದೇಶಕ್ಕೆ ಸ್ಥಳಾಂತರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ವಿಕ್ರಂ ಆಸ್ಪತ್ರೆಯ ವೈದ್ಯ ಡಾ.ವಿಜಯ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಶುಕ್ರವಾರ ನಗರದ ವಿಕ್ರಂ ಆಸ್ಪತ್ರೆಯಲ್ಲಿ ರವೀಂದ್ರ ಅವರ ಆರೋಗ್ಯ ಪರಿಸ್ಥಿತಿ ಕುರಿತು ಮಾಹಿತಿ ನೀಡಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿಯೇ ಅವರಿಗೆ ಚಿಕಿತ್ಸೆ ಮುಂದುವರೆಸುವುದು ಉತ್ತಮ ಎಂದರು.
ಅ.29 ರಂದು ಬೆಳಗ್ಗೆ ರವೀಂದ್ರ ನಮ್ಮ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ನ್ಯುಮೋನಿಯಾ ಮತ್ತು ಮಧುಮೇಹ ಇತ್ತು. ರಕ್ತದ ಸೋಂಕು ಇರುವುದರಿಂದ ಅಗತ್ಯವಿರುವ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಆದರೂ ಅವರ ಸ್ಥಿತಿ ಗಂಭೀರವಾಗಿದೆ ಎಂದು ಅವರು ಹೇಳಿದರು.
ಡಯಾಲಿಸಿಸ್ ಹಾಗೂ ವೆಂಟಿಲೇಟರ್ ಮೇಲೆ ಅವರನ್ನು ಇರಿಸಲಾಗಿದೆ. ರವೀಂದ್ರ ಅವರ ಎರಡೂ ಕಿಡ್ನಿಗಳು ನಿಷ್ಕ್ರಿಯವಾಗಿವೆ. ನಿನ್ನೆಯಿಂದ ಅವರು ಚಿಕಿತ್ಸೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ವಿಜಯಕುಮಾರ್ ರೆಡ್ಡಿ ತಿಳಿಸಿದರು.
ಸಿಂಗಾಪುರ ಅಥವಾ ವಿದೇಶಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದುಕೊಂಡು ಹೋಗುವ ಅಗತ್ಯವಿಲ್ಲ. ಬೇರೆ ಕಡೆ ಅವರನ್ನು ಸ್ಥಳಾಂತರ ಮಾಡಿದರೂ ಯಾವುದೇ ರೀತಿಯ ಪ್ರಯೋಜನವಾಗುವುದಿಲ್ಲ. ನಮಲ್ಲಿ ನೀಡುತ್ತಿರುವ ಚಿಕಿತ್ಸೆಯನ್ನೆ ಬೇರೆ ಕಡೆಯೂ ನೀಡಲಾಗುತ್ತದೆ ಎಂದು ಅವರು ಸ್ಪಷ್ಟಣೆ ನೀಡಿದರು.
ರವೀಂದ್ರ ಅವರ ಭಾವ, ಹೃದ್ರೋಗ ತಜ್ಞ ಡಾ.ಮಹಾಂತೇಶ್ ಮಾತನಾಡಿ, ಅವರಿಗೆ ಶ್ವಾಸಕೋಶದ ಸೋಂಕು ಉಂಟಾಗಿದೆ. ಚುನಾವಣೆ ಸಂದರ್ಭದಲ್ಲಿ ಹೆಚ್ಚಾಗಿ ಓಡಾಡಿದ ಸಂದರ್ಭದಲ್ಲಿ ಈ ಸೋಂಕು ಬೇರೆ ವ್ಯಕ್ತಿಗಳಿಂದ ಹರಡಿರುವ ಸಾಧ್ಯತೆಯಿದೆ ಎಂದರು.
ಮಧುಮೇಹ ಇರುವ ಕಾರಣ ಅವರ ರೋಗ ನಿರೋಧಕ ಶಕ್ತಿ ಕಡಿಮೆಯಾಗಿದೆ. ಆರಂಭದಲ್ಲಿ ಯಾವ ಸಮಸ್ಯೆಯೂ ಇರಲಿಲ್ಲ. ಈ ಸಮಸ್ಯೆ ಗಂಭೀರವಾಗಿದೆ. ಕಳೆದ ಬಾರಿ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿಯೂ ಅವರಿಗೆ ಆರೋಗ್ಯ ಸಮಸ್ಯೆ ಉಂಟಾಗಿತ್ತು. ಎಲ್ಲ ವೈದ್ಯರೂ ಸಾಕಷ್ಟು ಚರ್ಚೆ ಮಾಡಿ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ, ಅವರು ಚಿಕಿತ್ಸೆಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಅವರು ಹೇಳಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ: ರವೀಂದ್ರ ಆರೋಗ್ಯ ಸ್ಥಿತಿ ಗಂಭೀರವಾಗಿರುವ ಮಾಹಿತಿ ಪಡೆದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಝಮೀರ್‌ಅಹ್ಮದ್‌ಖಾನ್, ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರು ಹಾಗೂ ಕುಟುಂಬ ವರ್ಗದವರಿಂದ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದರು.
ಮೂರು ತಿಂಗಳ ಹಿಂದೆಯೂ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು. ಅಲ್ಲದೆ, ಈ ಹಿಂದೆ ವಿದೇಶಕ್ಕೆ ಹೋಗಿ ಚಿಕಿತ್ಸೆಯನ್ನು ಪಡೆದು ಬಂದಿದ್ದರು. ಈಗ ಮತ್ತೆ ಅವರ ಆರೋಗ್ಯ ಬಿಗಡಾಯಿಸಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಯಾರನ್ನೂ ಗುರುತು ಹಿಡಿಯುವ ಸ್ಥಿತಿಯಲ್ಲಿ ಅವರಿಲ್ಲ ಎಂದು ಸಿದ್ದರಾಮಯ್ಯ ಮಾಧ್ಯಮದವರಿಗೆ ಮಾಹಿತಿ ನೀಡಿದರು.







