ನ. 4: ನಮ್ಮ ಕುಡ್ಲದಿಂದ ಗೂಡುದೀಪ ಸ್ಪರ್ಧೆ
ಮಂಗಳೂರು, ನ.2: ನಮ್ಮ ಕುಡ್ಲ ವಾಹಿನಿ ನಡೆಸುವ ಗೂಡುದೀಪ ಸ್ಪರ್ಧೆಯು ನ.4ರಂದು ಸಂಜೆ 4ಕ್ಕೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯಲಿದೆ ಎಂದು ನಮ್ಮ ಕುಡ್ಲದ ನಿರ್ದೇಶಕ ಹರೀಶ್ ಬಿ. ಕರ್ಕೇರಾ ಹೇಳಿದರು.
ನಗರದ ಪ್ರೆಸ್ ಕ್ಲಬ್‌ನಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಾಂಪ್ರದಾಯಿಕ, ಆಧುನಿಕ ಮತ್ತು ವಿಶೇಷ ಮಾದರಿ ಹೀಗೆ ಮೂರು ವಿಭಾಗಗಳಲ್ಲಿ ಗೂಡುದೀಪ ಸ್ಪರ್ಧೆ ನಡೆಯಲಿದೆ. ಪ್ರತಿಯೊಂದು ವಿಭಾಗದಲ್ಲೂ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆಯುವ ಗೂಡುದೀಪಗಳಿಗೆ ಚಿನ್ನದ ಪದಕ ಹಾಗೂ ತೃತೀಯ ಸ್ಥಾನ ಪಡೆಯುವ ಗೂಡುದೀಪಗಳಿಗೆ ಬೆಳ್ಳಿಯ ಪದಕ ಬಹುಮಾನವಾಗಿ ನೀಡಲಾಗುತ್ತದೆ ಎಂದರು.
ಅತೀ ಹೆಚ್ಚು ಗೂಡುದೀಪ ತರುವ ಸಂಸ್ಥೆಗಳಿಗೆ ವಿಶೇಷ ಬಹುಮಾನವನ್ನು ನೀಡಲಾಗುತ್ತದೆ. ಅಲ್ಲದೆ ತೀರ್ಪುಗಾರರ ಮೆಚ್ಚುಗೆ ಪಡೆದ ಆಯ್ದ ಗೂಡುದೀಪಗಳಿಗೆ ಪ್ರೋತ್ಸಾಹಕ ಬಹುಮಾನಗಳನ್ನು ನೀಡಲಾಗುತ್ತದೆ. ಭಾಗವಹಿಸಿದ ಎಲ್ಲ ಸ್ಪರ್ಧಾಳುಗಳಿಗೂ ಸ್ಮರಣಿಕೆ, ಸಿಹಿ ತಿಂಡಿಯ ಪೊಟ್ಟಣ ಹಾಗೂ ಕ್ಷೇತ್ರದ ಪ್ರಸಾದವನ್ನು ವಿತರಿಸಲಾಗುತ್ತದೆ ಎಂದರು.
ಈ ಬಾರಿ ಕಂಕನಾಡಿ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ ಅಧ್ಯಕ್ಷ ಕೆ.ಚಿತ್ತರಂಜನ್‌ಗೆ ‘ನಮ್ಮ ತುಳುವೆರ್ ಪ್ರಶಸ್ತಿ’, ದಿಯಾ ಸಿಸ್ಟಂ ಸಂಸ್ಥೆಯಲ್ಲಿ ಶೇ.80 ಕ್ಕಿಂತಲೂ ಹೆಚ್ಚು ಉದ್ಯೋಗವನ್ನು ಸ್ಥಳೀಯರಿಗೆ ಒದಗಿಸಿ ಕೊಟ್ಟ ಡಾ.ವಿ.ರವಿಚಂದ್ರನ್‌ಗೆ ‘ನಮ್ಮ ಕುಡ್ಲ ಪ್ರಶಸ್ತಿ’, ಯೋಧ ಎಂ.ಗಿರಿಯಪ್ಪಗೆ ‘ನಮ್ಮ ಕುಡ್ಲ ಸಾಧನಾ ಪ್ರಶಸ್ತಿ’ ಹಾಗೂ ಮಣ್ಣಗುಡ್ಡೆ ಶಾಲೆಯನ್ನು ದತ್ತು ಸ್ವೀಕರಿಸಿ ಸಮಾಜಮುಖಿ ಕಾರ್ಯಗಳಲ್ಲೂ ತೊಡಗಿಸಿಕೊಂಡಿರುವ ಬರ್ಕೆ ಫ್ರೆಂಡ್ಸ್ ಮಣ್ಣಗುಡ್ಡೆಗೆ ‘ಬಿ.ಪಿ. ಕರ್ಕೇರಾ ಪ್ರಶಸ್ತಿ’ ನೀಡಿ ಗೌರವಿಸಲಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಭಾಸ್ಕರ ರೈ ಕುಕ್ಕುವಳ್ಳಿ, ಎಂ.ಎಸ್. ಕೋಟ್ಯಾನ್, ದಯಾನಂದ ಕಟೀಲು, ಲೀಲಾಕ್ಷ ಬಿ. ಕರ್ಕೇರಾ ಉಪಸ್ಥಿತರಿದ್ದರು.







