ಡಿ. 9: ಮಾಂಡ್ ಸೋಭಾಣ್‌ನಿಂದ ಹಿಸ್ನಾ ಜಾಗತಿಕ ಕೊಂಕಣಿ ಚಲನಚಿತ್ರ ಪ್ರಶಸ್ತಿ ಪ್ರದಾನ
ಮಂಗಳೂರು, ನ.2: ಮಾಂಡ್ ಸೊಭಾಣ್ ವತಿಯಿಂದ ಹಿಸ್ನಾ ಜಾಗತಿಕ ಕೊಂಕಣಿ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಡಿ.9ರಂದು ಸಂಜೆ 6ಕ್ಕೆ ಶಕ್ತಿನಗರದ ಕಲಾಂಗಣದಲ್ಲಿ ನಡೆಯಲಿದೆ. 8 ವಿಭಾಗಗಳಲ್ಲಿ ಪ್ರತಿ ವಿಭಾಗದಿಂದ ಅಂತಿಮ ಸುತ್ತಿಗೆ ತಲಾ ಮೂವರನ್ನು ಆಯ್ಕೆ ಮಾಡಲಾಗಿದೆ. ಸಮಾರಂಭದಲ್ಲಿ ಅಂತಿಮ ಆಯ್ಕೆಯನ್ನು ಪ್ರಕಟಿಸಲಾಗುತ್ತದೆ ಎಂದು ಮಾಂಡ್ ಸೊಭಾಣ್‌ನ ಗುರಿಕಾರ ಎರಿಕ್ ಒಝೇರಿಯೊ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಅವರು ಬೆಳೆಯುತ್ತಿರುವ ಕೊಂಕಣಿ ಸಿನಿಮಾ ಕ್ಷೇತ್ರವನ್ನು ಪ್ರೋತ್ಸಾಹಿಸಲು ಹಾಗೂ ಸಿನಿಮಾ ಕಲಾವಿದರನ್ನು ಗೌರವಿಸಲು ಕೊಂಕಣಿಯ ಪ್ರಮುಖ ಸಾಂಸ್ಕೃತಿಕ ಸಂಘಟನೆ ‘ಮಾಂಡ್ ಸೊಭಾಣ್’ ಪ್ರಥಮ ಬಾರಿಗೆ ಕೊಂಕಣಿ ಚಲನಚಿತ್ರ ಪುರಸ್ಕಾರವನ್ನು ಆಯೋಜಿಸಿದೆ. ಈ ಪ್ರಶಸ್ತಿಯ ಜತೆಯಲ್ಲಿ 25,000 ರೂ. ನಗದು ಬಹುಮಾನಗಳನ್ನು ನೀಡಲಾಗುತ್ತದೆ.
ತೀರ್ಪುಗಾರರಾದ ಡಾ. ರಿಚಾರ್ಡ್ ಕ್ಯಾಸ್ತೆಲಿನೊ ಮಂಗಳೂರು, ಜಿತೇಂದ್ರ ಶಿಕೇರ್‌ಕರ್ ಗೋವಾ, ರಾಜೇಶ್ ರ್ನಾಂಡಿಸ್ ಹೊನ್ನಾವರ, ಡಾ ರಾಜಯ್ ಪವಾರ್ ಗೋವಾ, ಜೊನ್ ಎಂ. ಪೆರ್ಮನ್ನೂರು, ಬಿ. ಚರಣ್ ಕುಮಾರ್ ಮಂಗಳೂರು, ಡೊಲ್ವಿನ್ ಎಂ.ಕೊಳಲಗಿರಿ ಅವರು ಬಂದ ಚಲನಚಿತ್ರಗಳನ್ನು ವೀಕ್ಷಿಸಿ, ಎಂಟು ವಿಭಾಗಗಳಲ್ಲಿ ತಲಾ ಮೂವರನ್ನು ಅಂತಿಮಗೊಳಿಸಿದ್ದಾರೆ.ಕಿರುಚಿತ್ರ ವಿಭಾಗಲ್ಲಿ ಕೇವಲ 2 ಮಾತ್ರ ಬಂದಿತ್ತು. ಹಾಗಾಗಿ ಒಂದಕ್ಕೆ ಸಮಾಧಾನಕರ ಬಹುಮಾನ ನೀಡಲಾಗುತ್ತದೆ ಎಂದರು.
ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಗೋವಾದ ಗಾನಕೋಗಿಲೆ ಲೋರ್ನಾ ಸಂಗೀತ ಕಾರ್ಯಕ್ರಮ ನೀಡಲಿದ್ದು, ಬಾಲಿವುಡ್ ತಾರೆಯೊಬ್ಬರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಜೆ ಪಿಂಟೊ, ಸಂಘಟಕ ಸ್ಟ್ಯಾನಿ ಆಲ್ವಾರಿಸ್ ಖಜಾಂಚಿ ಅರುಣ್‌ರಾಜ್ ರೊಡ್ರಿಗಸ್, ಪಿಆರ್‌ಒ ವಿಕ್ಟರ್ ಮತಾಯಸ್ ಉಪಸ್ಥಿತರಿದ್ದರು.







