'ವಾರದೊಳಗೆ ಮರಳು ಸಮಸ್ಯೆ ಬಗೆಹರಿಸಲು ಆಗ್ರಹ'
ಮಂಗಳೂರು, ನ.2: ದ.ಕ., ಉಡುಪಿ ಜಿಲ್ಲೆಯಲ್ಲಿ ಮರಳು ಸಮಸ್ಯೆಯಿಂದಾಗಿ ಬಡಕಾರ್ಮಿಕರಿಗೆ ಕೆಲಸದ ಅಭಾವ ಉಂಟಾಗಿದೆ. ಈಗಾಗಲೇ ಹಲವು ಕುಟುಂಬಗಳು ಸಂಕಷ್ಟಕೆ ಗುರಿಯಾಗಿದೆ. ಜಿಲ್ಲಾಡಳಿತ ಈ ಬಗ್ಗೆ ಕುರಿತು ಶೀಘ್ರವಾಗಿ ಪರಿಹಾರ ಕಂಡುಕೊಳ್ಳಬೇಕು. ಒಂದು ವಾರದೊಳಗೆ ಸಮಸ್ಯೆ ಪರಿಹಾರವಾಗದಿದ್ದರೆ ಬೀದಿಗಿಳಿದು ಹೋರಾಟ ಮಾಡುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ ಎಂದು ತುಳುನಾಡ ಕಟ್ಟಡ ಮತ್ತು ಇತರೆ ಕಾರ್ಮಿಕರ ಸಂಘದ ಅಧ್ಯಕ್ಷ ಲೋಕೇಶ್ ಪೂಜಾರಿ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಅವರು ಸುಮಾರು ಮೂರು ವರ್ಷದಿಂದ ಮರಳಿನ ಸಮಸ್ಯೆ ಸೃಷ್ಟಿಯಾಗಿದೆ. ಜಿಲ್ಲಾಡಳಿತ ವಾಗಲಿ, ಜನಪ್ರತಿನಿಧಿಗಳಾಗಲಿ ಯಾರೂ ಕೂಡ ಸ್ವಂದನೆ ನೀಡುತ್ತಿಲ್ಲ. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳಿಗೆ ಮನವಿ ಮಾಡಲಾಗಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ದ.ಕ.ಜಿಲ್ಲೆಗೆ ಆಗಮಿಸಿದಾಗ ಅ.15ರೊಳಗೆ ಸಮಸ್ಯೆ ಪರಿಹಾರವಾಗಲಿದೆ ಎಂದು ಭರವಸೆ ನೀಡಿದ್ದರು. ಆದರೆ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
ಮರಳು ಸಮಸ್ಯೆಯಿಂದ ಜಿಲ್ಲೆಯ ಆರ್ಥಿಕ ಪರಿಸ್ಥಿತಿ ಕುಸಿದಿದೆ. ಕಾರ್ಮಿಕರಿಗೆ ಕೆಲಸವಿಲ್ಲದೆ ಸಾಲದಲ್ಲಿ ಮುಳುಗಿದ್ದಾರೆ. ಲಾರಿ ಚಾಲಕ, ಮಾಲಕರು ಕೂಡ ಕಂಗೆಟ್ಟು ಹೋಗಿದ್ದಾರೆ. ಗೂಡ್ಸ್ ಟೆಂಪೊ ಸಹಿತ ಹೋಟೆಲ್ ಉದ್ಯಮಕ್ಕೂ ಪರೋಕ್ಷ ರೀತಿಯಲ್ಲಿ ಹೊಡೆತ ಬಿದ್ದಿದೆ. ಈ ಕಾರಣದಿಂದ ಅದಷ್ಟು ಬೇಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ದೃಷ್ಟಿಯಿಂದ ಜಿಲ್ಲಾಡಳಿತ ಮುಂದಾಗಬೇಕು ಎಂದು ಲೋಕೇಶ್ ಪೂಜಾರಿ ನುಡಿದರು.
ಸುದ್ದಿಗೋಷ್ಠಿಯಲ್ಲಿ ಸಂತೋಷ್ ಪೂಜಾರಿ, ಅರುಣ್ ಭಂಡಾರಿ, ನಾಗೇಶ್ ದೇವಾಡಿಗ, ಸತೀಶ್ ಉಪಸ್ಥಿತರಿದ್ದರು.







