ರಾಜ್ಯದ ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಕ್ಷೀರ ಭಾಗ್ಯ ಯೋಜನೆಯಡಿ ಉಚಿತ ಹಾಲು ವಿತರಣೆ

ಮಂಗಳೂರು, ನ. 7: ರಾಜ್ಯದ 155 ಸರಕಾರದ ಅನುದಾನಿತ ವಿಶೇಷ ಚೇತನ ಮಕ್ಕಳ ಶಾಲೆಗಳ 10,657 ಮಕ್ಕಳಿಗೆ ಮಧ್ಯಾಹ್ನದ ಹಾಲು ವಿತರಿಸುವ ಯೋಜನೆಯನ್ನು ಸರಕಾರ ಹಮ್ಮಿಕೊಂಡಿದೆ. ಇದರ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲೆಯ 7 ಸಂಸ್ಥೆಗಳ 502 ವಿಶೇಷ ಮಕ್ಕಳಿಗೆ ಈ ಯೋಜನೆಯ ಸೌಲಭ್ಯದೊರೆಯಲಿದೆ ಎಂದು ರಾಜ್ಯ ವಸತಿ, ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್‌ನಲ್ಲಿಂದು ವಿಶೇಷ ಮಕ್ಕಳ ಮಧ್ಯಾಹ್ನದ ಹಾಲು ವಿತರಿಸುವ ಯೋಜನೆಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಈಗಾಗಲೇ ಶಿಶು ಕೇಂದ್ರಿ ತ ಸಹಾಯಧನ ಯೋಜನೆಯ ಮೂಲಕ ಮಕ್ಕಳಿಗೆ ಬಿಸಿಯೂಟ ನೀಡಲಾಗುತ್ತಿದ್ದು,ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರದಿಂದ ಹಾಲು ಒದಗಿಸಲು ಕೋರಿಕೆಯನ್ನು ನೀಡಿದ್ದು ಈ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಕಂಡು ಬರುವ ರಕ್ತ ಹೀನತೆ,ಅಪೌಷ್ಠಿಕತೆ ನಿವಾರಿಸಲು ಮತ್ತು ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ವಾರದಲ್ಲಿ 5 ದಿನ ಪ್ರತಿ ಮಕ್ಕಳಿಗೆ 150 ಎಂ.ಎಲ್ ಹಾಲು ವಿತರಿಸುವ ಯೋಜನೆಗೆ ಸರಕಾರ ಅನುಮತಿ ನೀಡಿದೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಮರಳು ನಿರ್ವಹಣೆ, ಬೆಲೆ ನಿಗದಿಗೆ ಸಮಿತಿ:- ಜಿಲ್ಲೆಯಲ್ಲಿ ಕರಾವಳಿ ನಿಯಂತ್ರಣ ವ್ಯಾಪ್ತಿಗೆ ಒಳಪಡದ ಪ್ರದೇಶದಲ್ಲಿ ಮರಳು ಸಂಗ್ರಹ ಮತ್ತು ಬೆಲೆ ನಿಗದಿಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಲು ಸೂಚಿಸಲಾಗಿದೆ.ನಿಗದಿ ಪಡಿಸಿದ ಬೆಲೆಗಿಂತ ಹೆಚ್ಚು ಸಂಗ್ರಹಿಸಿದರೆ,ಅಥವಾ ಕೃತಕ ಮರಳಿನ ಅಭಾವ ಸೃಷ್ಟಿಸಿದರೆ ಅವರ ವಿರುದ್ಧ ದೂರು ನೀಡಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂಟ್ರೋಲ್ ರೂಂ ಒಂದನ್ನು ತೆರೆಯಲು ಸೂಚನೆ ನೀಡಲಾಗಿದೆ. ಮುಂದಿನ ಒಂದು ವಾರದೊಳಗೆ 21 ಕಡೆಗಳಲ್ಲಿ ಮರಳು ಮೇಲೆತ್ತಲು ಟೆಂಡರ್ ಕರೆಯಲು ಸೂಚಿಸಲಾಗಿದೆ. ತುಂಬೆ ಡ್ಯಾಂನಲ್ಲಿ ತುಂಬಿರುವ ಹೋಳೆತ್ತಲು ಮತ್ತು ಸಂಗ್ರಹವಾಗುವ ಮರಳನ್ನು ಸರಕಾರದ ವತಿಯಿಂದ ನಡೆಯುವ ಕಾಮಗಾರಿಗಳಿಗೆ ಬಳಸಲು ಸೂಚಿಸಲಾಗಿದೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ನ.12ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕಂದಾಯ ಅದಾಲತ್‌ನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಂಗಳೂರು ತಾ.ಪಂ.ಅಧ್ಯಕ್ಷ ಮುಹಮ್ಮದ್ ಮೋನು,ಸಾನಿಧ್ಯ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ವಸಂತ ಶೆಟ್ಟಿ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಸುಂದರ ಪೂಜಾರಿ,ಇತರ ಕಾಂಗ್ರೆಸ್ ಮುಖಂಡರಾದ ಈಶ್ವರ ಉಳ್ಳಾಲ್,ಎನ್.ಎಸ್.ಕರೀಂ,ಸದಾಶಿವ ಉಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು.







