ಪಿ.ಚಿದಂಬರಂ ಕುಟುಂಬದ ವಿರುದ್ಧ ಕಾನೂನು ಕ್ರಮ ಆದೇಶ ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್

ಹೊಸದಿಲ್ಲಿ, ನ.2: ಕಪ್ಪುಹಣ ಪ್ರಕರಣದಡಿ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಅವರ ಕುಟುಂಬದ ಸದಸ್ಯರ ವಿರುದ್ಧ ಕಾನೂನು ಕ್ರಮ ಜರಗಿಸಲು ಅವಕಾಶ ನೀಡಿದ್ದ ಆದೇಶವನ್ನು ಮದ್ರಾಸ್ ಹೈಕೋರ್ಟ್ ಶುಕ್ರವಾರ ರದ್ದುಪಡಿಸಿದೆ.
ಚಿದಂಬರಂ ಪತ್ನಿ ನಳಿನಿ, ಪುತ್ರ ಕಾರ್ತಿ ಹಾಗೂ ಸೊಸೆ ಶ್ರೀನಿಧಿ ವಿರುದ್ಧ ಕಪ್ಪುಹಣ ಕಾಯ್ದೆಯಡಿ ಪ್ರಕರಣ ದಾಖಲಿಸಲು ಆದಾಯ ತೆರಿಗೆ ಇಲಾಖೆ ಅನುಮತಿ ನೀಡಿತ್ತು. ಬ್ರಿಟನ್‌ನ ಮೆಟ್ರೋ ಬ್ಯಾಂಕ್‌ನಲ್ಲಿರುವ ತನ್ನ ಖಾತೆಯ ವಿವರವನ್ನು ಕಾರ್ತಿ ಚಿದಂಬರಂ ಒದಗಿಸಿಲ್ಲ ಹಾಗೂ ಅಮೆರಿಕದ ನ್ಯಾನೊ ಹೋಲ್ಡಿಂಗ್ಸ್‌ನಲ್ಲಿ ಮಾಡಿರುವ ಹೂಡಿಕೆಯ ಬಗ್ಗೆಯೂ ಮಾಹಿತಿ ನೀಡಿಲ್ಲ. ಅಲ್ಲದೆ ತಾನು ಸಹ ಮಾಲಕನಾಗಿರುವ ಚೆಸ್ ಗ್ಲೋಬಲ್ ಅಡ್ವೈಸರಿಯಲ್ಲಿ ಹೂಡಿಕೆ ಮಾಡಿರುವ ವಿವರವನ್ನೂ ಒದಗಿಸಿಲ್ಲ. ಇದು ಕಪ್ಪು ಹಣ ಕಾಯ್ದೆಯಡಿ ಅಪರಾಧವಾಗಿದೆ . ಅಲ್ಲದೆ ನಳಿನಿ, ಕಾರ್ತಿ ಹಾಗೂ ಶ್ರೀನಿಧಿಯ ಜಂಟಿ ಹೆಸರಿನಲ್ಲಿ ಬ್ರಿಟನ್‌ನ ಕ್ಯಾಂಬ್ರಿಡ್ಜ್‌ನಲ್ಲಿ 5.37 ಕೋಟಿ ರೂ. ಮೊತ್ತದ ಆಸ್ತಿಗಳಿವೆ ಹಾಗೂ ಅಮೆರಿಕದಲ್ಲಿ 3.28 ಕೋಟಿ ರೂ. ಮೊತ್ತದ ಆಸ್ತಿಗಳಿದ್ದು ಇದನ್ನು ಮುಚ್ಚಿಡಲಾಗಿದೆ ಎಂದು ಇಲಾಖೆ ತಿಳಿಸಿತ್ತು.
ಅಲ್ಲದೆ ಕಪ್ಪು ಹಣ ಮತ್ತು ತೆರಿಗೆ ವಿಧಿಸುವ ಕಾಯ್ದೆಯ ಸೆಕ್ಷನ್ 50ರಡಿ ಕಾನೂನುಕ್ರಮ ಆರಂಭಿಸಿತ್ತು. ಈ ವರ್ಷದ ಜೂನ್‌ನಲ್ಲಿ ಪ್ರಕರಣದ ವಿಚಾರಣೆ ನಡೆದ ಸಂದರ್ಭ ವಾದ ಮಂಡಿಸಿದ ಚಿದಂಬರಂ ಕುಟುಂಬದವರ ಪರ ವಕೀಲರು, ಅರ್ಜಿದಾರರು ಆದಾಯತೆರಿಗೆ ರಿಟರ್ನ್ಸ್ ದಾಖಲೆ ಸಲ್ಲಿಸಿದಾಗ ಸಂಬಂಧಿತ ಎಲ್ಲಾ ಮಾಹಿತಿಗಳನ್ನು ಘೋಷಿಸಿದ್ದರು. 2016ರ ಅಕ್ಟೋಬರ್‌ನಲ್ಲಿ 2016-17ಕ್ಕೆ ಸಂಬಂಧಿಸಿದ ಆದಾಯತೆರಿಗೆ ದಾಖಲೆ ಸಲ್ಲಿಸಿದ್ದು ತೆರಿಗೆ ಇಲಾಖೆಯ ನೋಟಿಸ್ ಬಳಿಕ 2017ರ ಸೆಪ್ಟೆಂಬರ್‌ನಲ್ಲಿ ಪರಿಷ್ಕೃತ ರಿಟರ್ನ್ಸ್ ಸಲ್ಲಿಸಿದ್ದರು ಎಂದು ಹೈಕೋರ್ಟ್‌ಗೆ ತಿಳಿಸಿದ್ದರು.







