ಖಶೋಗಿ ದೇಹವನ್ನು ತುಂಡು ಮಾಡಿ ಆ್ಯಸಿಡ್‌ನಲ್ಲಿ ಕರಗಿಸಿದರು: ಎರ್ದೊಗಾನ್ ಸಲಹೆಗಾರ

ಅಂಕಾರ, ನ. 2: ಒಂದು ತಿಂಗಳ ಹಿಂದೆ ಇಸ್ತಾಂಬುಲ್‌ನಲ್ಲಿರುವ ಸೌದಿ ಅರೇಬಿಯದ ಕೌನ್ಸುಲೇಟ್ ಕಚೇರಿಯಲ್ಲಿ ಸೌದಿ ಪತ್ರಕರ್ತ ಜಮಾಲ್ ಖಶೋಗಿಯನ್ನು ಹತ್ಯೆ ಮಾಡಿದ ಬಳಿಕ ಅವರ ದೇಹವನ್ನು ಚೂರು ಚೂರಾಗಿ ಕತ್ತರಿಸಿ ಆ್ಯಸಿಡ್‌ನಲ್ಲಿ ಕರಗಿಸಲಾಗಿದೆ ಎಂದು ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್‌ರ ಸಲಹೆಗಾರರೊಬ್ಬರು ಶುಕ್ರವಾರ ಹೇಳಿದ್ದಾರೆ.
ಇದೇ ವಿಷಯವನ್ನು ಟರ್ಕಿ ಅಧಿಕಾರಿಯೊಬ್ಬರು ‘ವಾಶಿಂಗ್ಟನ್ ಪೋಸ್ಟ್’ಗೆ ಹೇಳಿದ್ದರು. ಖಶೋಗಿ ದೇಹವನ್ನು ಆ್ಯಸಿಡ್‌ನಲ್ಲಿ ಕರಗಿಸಲಾಗಿದೆ ಎಂಬ ವಾದದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂಬುದಾಗಿ ಅವರು ಹೇಳಿದ್ದರು.
‘‘ಅವರ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದು ಮಾತ್ರವಲ್ಲ, ಅದನ್ನು ಕರಗಿಸಿ ವಿಲೇವಾರಿ ಮಾಡಿದ್ದಾರೆ ಎನ್ನುವುದು ಈಗ ನಮಗೆ ಗೊತ್ತಾಗುತ್ತಿದೆ’’ ಎಂದು ಎರ್ದೊಗಾನ್‌ರ ಓರ್ವ ಸಲಹೆಗಾರ ಯಾಸಿನ್ ಅಕ್ಟಯ್ ‘ಹುರಿಯತ್’ ಪತ್ರಿಕೆಗೆ ಶುಕ್ರವಾರ ತಿಳಿಸಿದರು.
‘‘ಕರಗಿಸಲು ಸುಲಭವಾಗುತ್ತದೆ ಎನ್ನುವ ಕಾರಣಕ್ಕಾಗಿ ಅವರು ದೇಹವನ್ನು ತುಂಡು ತುಂಡು ಮಾಡಿದರು ಎನ್ನುವ ಹೊಸ ಮಾಹಿತಿ ನಮಗೆ ಲಭಿಸಿದೆ’’ ಎಂದರು.





