ಲಾಭಕ್ಕಾಗಿ ಅಂಬೇಡ್ಕರ್ ಹೆಸರು ಬಳಕೆ ಸಲ್ಲ: ಬರಗೂರು ರಾಮಚಂದ್ರಪ್ಪ

ಬೆಂಗಳೂರು, ನ.2: ಯಾವುದೇ ತತ್ವ ಸಿದ್ಧಾಂತ ಇಲ್ಲದವರೂ ಅಂಬೇಡ್ಕರ್ ಅವರ ಹೆಸರನ್ನು ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಆದರೆ, ನೈತಿಕವಾಗಿ ಅವರನ್ನು ಗೌರವಿಸಬೇಕಾದರೆ, ಸಾಮಾಜಿಕ ಪ್ರಜಾಪ್ರಭುತ್ವದ ಲಕ್ಷಣಗಳಾದ ಸ್ವಾತಂತ್ರ, ಸಹಿಷ್ಣುತೆ ಹಾಗೂ ಸಹೋದರತ್ವವನ್ನು ರೂಢಿಸಿಕೊಳ್ಳಬೇಕೆಂದು ಹಿರಿಯ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.
ಶುಕ್ರವಾರ ಕನ್ನಡ ಸಾಹಿತ್ಯ ಪರಿಷತ್‌ನ ಅಕ್ಕಮಹಾದೇವಿ ಸಭಾಂಗಣದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವಗಳು ಹಾಗೂ ಇತರ ಮಹಾಪುರುಷರ ತತ್ವಗಳ ತೌಲನಿಕ ಅಧ್ಯಯನ ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಂಬೇಡ್ಕರ್ ಅವರು ಜಾತಿ ವ್ಯವಸ್ಥೆ, ಅನಿಷ್ಟ ಪದ್ಧತಿಗಳು, ಮೂಢನಂಬಿಕೆಗಳನ್ನು ಹೋಗಲಾಡಿಸುವುದಕ್ಕಾಗಿ ಸಂವಿಧಾನವನ್ನು ರಚಿಸಿದರು. ಆದರೆ, ಇಂದು ತತ್ವ, ಸಿದ್ಧಾಂತಗಳು ಇಲ್ಲದವರೂ ಅಂಬೇಡ್ಕರ್ ಅವರ ಹೆಸರನ್ನು ಹೇಳಿಕೊಂಡು ಲಾಭ ಮಾಡಿಕೊಳ್ಳುತ್ತಿದ್ದು, ಜನರು ಇಂಥವರಿಗೆ ಮಣೆ ಹಾಕದೆ, ಸಾಮಾಜಿಕ ಪ್ರಜಾಪ್ರಭುತ್ವದ ಕಡೆಗೆ ಗಮನ ಹರಿಸಬೇಕೆಂದು ಹೇಳಿದರು.
ಅಂಬೇಡ್ಕರ್ ಅವರು ಯಾವುದೇ ನಿರ್ದಿಷ್ಟ ಸಮುದಾಯ ಅಥವಾ ವರ್ಗಕ್ಕೆ ಸೇರದ ಪ್ರತಿಭಾನ್ವಿತ ದೇಶಪ್ರೇಮಿ. ಸಾರ್ವಜನಿಕ ಆಸ್ತಿ, ಅಸ್ಪಶ್ಯತೆಯ ನೋವು ಅನುಭವಿಸಿ ಅದನ್ನೇ ತಮ್ಮ ಶಕ್ತಿಯನ್ನಾಗಿ ಮಾಡಿಕೊಂಡ ಅಂಬೇಡ್ಕರ್ ಅವರನ್ನು, ಒಬ್ಬ ಸುಶಿಕ್ಷಿತ, ಹೋರಾಟಗಾರ, ಪತ್ರಕರ್ತ, ವಿಮೋಚನಾವಾದಿ, ಸಂವಿಧಾನ ರಚನೆಕಾರ ಈ ಎಲ್ಲ ನೆಲೆಯಲ್ಲಿ ಅರ್ಥಮಾಡಿಕೊಳ್ಳಬೇಕಾಗಿದೆ ಎಂದು ನುಡಿದರು.
ಅಂಬೇಡ್ಕರ್ ಅವರಿಗೆ ಮಾರ್ಕ್ಸ್ ಅಥವಾ ಕಮ್ಯುನಿಸ್ಟ್‌ರ ನಡವಳಿಕೆ ಬಗ್ಗೆ ವಿರೋಧ ಇತ್ತೇ ಹೊರತು ಅವರ ಆರ್ಥಿಕ ನೀತಿಗಳ ಬಗ್ಗೆ ಇರಲಿಲ್ಲ. ಅದೇ ರೀತಿ, ಗಾಂಧಿಯವರ ಬಗ್ಗೆಯೂ ವೈಯಕ್ತಿಕ ದ್ವೇಷ ಅಂಬೇಡ್ಕರ್ ಅವರಿಗೆ ಇರಲಿಲ್ಲ. ಯಾರೇ ಇರಲಿ ಸೃಜನಶೀಲ ಸಿದ್ಧಾಂತ ಬಿಡಬಾರದು ಎಂದು ತಿಳಿಸಿದರು. ಮಹಾತ್ಮಗಾಂಧೀಜಿಯವರು ಹಿಂದೂ ಧರ್ಮದ ಒಳಗಿನಿಂದಲೇ ತಮ್ಮ ಚಿಂತನೆಯನ್ನು ಪ್ರತಿಪಾದಿಸಿದ್ದರು. ಅಂಬೇಡ್ಕರ್ ಅವರು ಹಿಂದೂ ಧರ್ಮದ ಹೊರಗಿನಿಂದ ತಮ್ಮ ಚಿಂತನೆಯನ್ನು ಪ್ರತಿಪಾದಿಸಿದರು. ಅಂಬೇಡ್ಕರ್ ಅವರದು ಸಾಮಾಜಿಕ ಪರಿಭಾಷೆ, ಗಾಂಧೀಜಿಯವರದು ಆಧ್ಯಾತ್ಮಿಕ ಪರಿಭಾಷೆ ಎಂದು ಪ್ರತಿಪಾದಿಸಿದರು.
ರಾಜ್ಯ ಎನ್‌ಎಸ್‌ಎಸ್ ಅಧಿಕಾರಿ ಪ್ರೊ.ಗುಣನಾಥ ಶೆಟ್ಟಿ ಎಕ್ಕಾರು ಮಾತನಾಡಿ, ಭಾರತ ಕಂಡ ಅಪರೂಪದ ವ್ಯಕ್ತಿಯಾಗಿದ್ದ ಡಾ.ಅಂಬೇಡ್ಕರ್ ಆಗಿನ ಸಂದರ್ಭದಲ್ಲೂ ಸಾಕಷ್ಟು ಅಧ್ಯಯನ ಮಾಡಿ ಮೇಲ್ಮಟ್ಟಕ್ಕೆ ಬಂದವರಾಗಿದ್ದಾರೆ. ಅವರ ವ್ಯಕ್ತಿತ್ವ, ಬದುಕು, ಬೆಳವಣಿಗೆ ಯುವ ಪೀಳಿಗೆಗೆ ಯಾವತ್ತೂ ದಾರಿ ದೀಪ ಎಂದು ನುಡಿದರು. ಕಾರ್ಯಕ್ರಮದಲ್ಲಿ ಸಂಸ್ಕೃತ ವಿವಿ ಕುಲಪತಿ ಪದ್ಮಾಶೇಖರ್, ಡಾ.ನಂಜುಂಡಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್ ಛಲವಾದಿ, ಕಾರ್ಯಕ್ರಮದ ಸಂಯೋಜನಾಧಿಕಾರಿ ಡಾ.ಸಂತೋಷ್ ಹಾನಗಲ್ ಉಪಸ್ಥಿತರಿದ್ದರು.
‘ರಾಜಕಾರಣದಲ್ಲಿ ಬೌದ್ಧಿಕ ಕೊರತೆ ಮಾತ್ರವಲ್ಲದೆ, ಭಾಷಾ ಭ್ರಷ್ಟಾಚಾರತೆಯೂ ಹೆಚ್ಚಾಗುತ್ತಿದೆ. ಟೀಕೆಗಳಿಗೆ ರಾಜಕಾರಣ ಸೀಮಿತವಾದರೆ, ಮುಂದಿನ ದಿನಗಳಲ್ಲಿ ಅವರಿಂದ ಈ ಸಮಾಜ ಏನನ್ನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ.’
-ಡಾ.ಬರಗೂರು ರಾಮಚಂದ್ರಪ್ಪ, ಬಂಡಾಯ ಸಾಹಿತಿ







