ಮೂಡುಬಿದಿರೆ : ಅಳಿಯೂರಿನಲ್ಲಿ ರಾಜ್ಯ ಮಟ್ಟದ ಬಾಲ್‍ಬ್ಯಾಡ್ಮಿಂಟನ್ ಪಂದ್ಯಾಟಕ್ಕೆ ಚಾಲನೆ
ಮೂಡುಬಿದಿರೆ, ನ. 2: ಕ್ರೀಡೆಯಲ್ಲಿ ಸೋಲು ಗೆಲುವು ಸಹಜ, 'ನಿರ್ಧಿಷ್ಟ ಗುರಿ ಹಾಗೂ ನಿರಂತರ ಪರಿಶ್ರಮದಿಂದ ಕ್ರೀಡೆಯಲ್ಲಿ ಸಾಧನೆ ಮಾಡಲು ಸಾಧ್ಯವಿದೆ. ಒಮ್ಮೆ ಸೋತರೂ ಮತ್ತೊಮ್ಮೆ ಗೆಲ್ಲುವ ಅವಕಾಶ ಇದೆ ಆದ್ದರಿಂದ ಸೋಲಿನ ಕಡೆಗೆ ಗಮನ ಕೊಡದೆ ಗೆಲುವಿನತ್ತ ಗುರಿಯನ್ನು ಹೊಂದಿ ಎಂದು ಕರ್ನಾಟಕ ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮೂಡುಬಿದಿರೆ ಸಹಯೋಗದಲ್ಲಿ ಅಳಿಯೂರು ಸರಕಾರಿ ಪ್ರೌಢಶಾಲೆಯಲ್ಲಿ ಎರಡು ದಿನ ಕಾಲ ನಡೆಯುವ ಪ್ರೌಢಶಾಲಾ ವಿಭಾಗದ ಬಾಲಕ-ಬಾಲಕಿಯರ ರಾಜ್ಯ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿರುವ ಅಳಿಯೂರು ಪ್ರೌಢಶಾಲೆಗೆ ಒಳ್ಳೆಯ ಹೆಸರಿದೆ. ಮೂಡುಬಿದಿರೆ ತಾಲ್ಲೂಕಿನಲ್ಲೆ ಗರಿಷ್ಟ ಸಂಖ್ಯೆಯ ವಿದ್ಯಾರ್ಥಿಗಳನ್ನು ಹೊಂದಿರುವ ಹೈಸ್ಕೂಲ್ ಎಂಬ ಹೆಗ್ಗಳಿಕೆ ಇದೆ. ಇಲ್ಲಿಗೆ ಪದವಿ ಪೂರ್ವ ಕಾಲೇಜಿನ ಬೇಡಿಕೆಯಿದ್ದು ಶಾಸಕರು ಇದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಅಗತ್ಯ ಬಂದಲ್ಲಿ ನಾನು ಮತ್ತು ಶಾಸಕರು ಜತೆಯಾಗಿ ಮುಖ್ಯಮಂತ್ರಿಯನ್ನು ಭೇಟಿಯಾಗಿ ಒತ್ತಡ ಹೇರುವುದಾಗಿ ತಿಳಿಸಿದರು.
ಶಾಸಕ ಉಮಾನಾಥ ಕೋಟ್ಯಾನ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ ಎಲ್ಲರಿಗೂ ಪ್ರಥಮ ಸ್ಥಾನ ಪಡೆಯಲು ಅಸಾಧ್ಯ. ಆದರೆ ಕ್ರೀಡಾಪಟುಗಳು ಕ್ರೀಡಾಸ್ಪೂರ್ತಿಯನ್ನು ತೋರಬೇಕು. ಸೋಲಿನಿಂದ ನಿರಾಶರಾಗದೆ ಮರಳಿ ಪ್ರಯತ್ನ ಮಾಡಬೇಕು ಎಂದು ಸಲಹೆ ಇತ್ತ ಅವರು ಗ್ರಾಮೀಣ ಪ್ರದೇಶ ದಲ್ಲಿರುವ ಅಳಿಯೂರು ಸರಕಾರಿ ಹೈಸ್ಕೂಲ್‍ನಲ್ಲಿ ರಾಜ್ಯಮಟ್ಟದ ಬಾಲ್‍ಬ್ಯಾಡ್ಮಿಂಟನ್ ಪಂದ್ಯಾಟ ನಡೆಸಲು ಸಾಧ್ಯವಾದದ್ದು ಊರವರು, ಶಾಲಾಭಿವೃದ್ಧಿ ಸಮಿತಿ ಮತ್ತು ಶಿಕ್ಷಕರ ಸಹಕಾರ ಕಾರಣ' ಎಂದರು.
ಮಾಜಿ ಸಚಿವ ಅಮರನಾಥ ಶೆಟ್ಟಿ, ದ.ಕ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿಲ್ಲಾ ಪಂಚಾಯತ್ ಸದಸ್ಯೆ ಸುಜಾತ, ವಾಲ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಸಂತಿ, ತಾಲ್ಲೂಕು ಪಂಚಾಯತ್ ಸದಸ್ಯೆ ನಾಗವೇಣಿ, ಮಜಲೋಡಿಗುತ್ತು ಪ್ರಕಾಶ್ ಶೆಟ್ಟಿ, ಎಸ್‍ಡಿಎಂಸಿ ಕಾರ್ಯಾಧ್ಯಕ್ಷ ವಿಶ್ವನಾಥ ಸಾಲ್ಯಾನ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ್ ಅಳಿಯೂರು, ಮುಖ್ಯೋಪಧ್ಯಾಯಿನಿ ರೋಸಾ ವಿ.ಜೆ, ದೈಹಿಕ ಶಿಕ್ಷಣ ಶಿಕ್ಷಕ ವಸಂತ ಜೋಗಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾಗೇಶ್, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ರಾಮಕೃಷ್ಣ ಶಿರೂರು, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶಿವಾನಂದ ಕಾಯ್ಕಿನಿ ಮತ್ತಿತರರು ಉಪಸ್ಥಿತರಿದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವೈಶಿವರಾಮಯ್ಯ ಸ್ವಾಗತಿಸಿದರು. ನವೀನ್ ಅಂಬೂರಿ ಕಾರ್ಯಕ್ರಮ ನಿರೂಪಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಆಶಾ ವಂದಿಸಿದರು.







