ನಾಡು ನುಡಿ ಸಾಧಕರ ಗ್ರಂಥಮಾಲೆ ಅನ್ಯರಿಗೂ ಮಾದರಿಯಾಗಲಿ : ಅಮ್ಮೆಂಬಳ ಆನಂದ
ಕಾಂತಾವರ ಉತ್ಸವದಲ್ಲಿ ನಾಡಿಗೆ ನಮಸ್ಕಾರ

ಮೂಡುಬಿದಿರೆ, ನ. 2: ಮಕ್ಕಳಲ್ಲಿ ಮಾತೃಭಾಷಾ ಪ್ರೇಮ, ಓದುವ ಅಭಿರುಚಿಯನ್ನು ಬೆಳೆಸುವ ಕೆಲಸ ಹೆತ್ತವರಿಂದಾಗಬೇಕಿದೆ. ಆಂಗ್ಲ ವ್ಯಾಮೋಹದ ವಾತಾವರಣದಿಂದ ಮಾತೃಭಾಷೆಯ ಕುರಿತ ಕಾಳಜಿ, ವ್ಯಾಮೋಹವನ್ನು ಎಳೆಯರ ಮನಸ್ಸಿನಲ್ಲಿ ಅರ್ಥಪೂರ್ಣವಾಗಿ ತುಂಬುವ ಅಗತ್ಯವಿದೆ. ಕನ್ನಡ ಉಳಿಸಿ ಬೆಳೆಸುವ ಮಾದರಿ ಕಾರ್ಯ ನಡೆಸುತ್ತಿರುವ ಕಾಂತಾವರ ಕನ್ನಡ ಸಂಘದ ಮೂಲಕ ಸಾಧಕರನ್ನು ಪರಿಚಯಿಸುವ ನಾಡಿಗೆ ನಮಸ್ಕಾರ ಗ್ರಂಥ ಮಾಲೆ ಎಲ್ಲ ಜಿಲ್ಲೆಗಳವರಿಗೂ ಒಂದು ಅನುಕರಣೀಯ ಮಾದರಿ ಎಂದು ಹಿರಿಯ ಪತ್ರಕರ್ತ ಮಣಿಪಾಲದ ಅಮ್ಮೆಂಬಳ ಆನಂದ ಹೇಳಿದರು.
ಅವರು ಶುಕ್ರವಾರ ಕಾಂತಾವರ ಕನ್ನಡಸಂಘದ 42ರ ಸಂಭ್ರಮದ ಅಂಗವಾಗಿ ನಡೆದ ಕಾಂತಾವರ ಉತ್ಸವ 2018 ಸಂಭ್ರಮದಲ್ಲಿ 'ನಾಡಿಗೆ ನಮಸ್ಕಾರ' ಗ್ರಂಥಮಾಲೆಯ ನೂತನ 11ಹೊತ್ತಗೆಗಳ ಅನಾವರಣಗೊಳಿಸಿ ಮಾತನಾಡಿದರು.
ಕನ್ನಡ ಸಂಘದ 'ಸಂಸ್ಕøತಿ ಸಂಭ್ರಮ ಮಾಲೆ'ಯ ನೂತನ ಕೃತಿ ಡಾ. ಹರಿಕೃಷ್ಣ ಭರಣ್ಯ ಅವರು ಸಂಪಾದಿಸಿದ 'ಹವಿಗನ್ನಡದ ಸವಿನಾಟಕಗಳು' ಸಂಪುಟ ವನ್ನು ಮೂಡುಬಿದಿರೆ ಎಂ.ಸಿ.ಎಸ್. ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಚಂದ್ರಶೇಖರ್ ಅವರು ಅನಾವರಣಗೊಳಿಸಿದರು. ಕಾಂತಾವರ ಕನ್ನಡ ಸಂಘದ ಸಾಹಿತ್ಯ ಸೇವೆ ಮೂಡುಬಿದಿರೆಯ ಎಂಸಿಎಸ್ ಬ್ಯಾಂಕಿನಲ್ಲಿ ಸಹಕಾರಿ ಸಪ್ತಾಹದಂತಹ ಸಾಹಿತ್ಯ, ಸಾಂಸ್ಕøತಿಕ ಕಲಾಪಗಳನ್ನು ಆರಂಭಿಸುವುದಕ್ಕೆ ಸ್ಪೂರ್ತಿ ನೀಡಿದೆ ಎಂದವರು ಹೇಳಿದರು.
ಬೆಂಗಳೂರಿನ ಶ್ರೀ ಕಂಠೀರವ ಸ್ಟುಡಿಯೋ ಲಿ. ಇದರ ನಿರ್ದೇಶಕ ಕೆ. ಮೋಹನದೇವ ಆಳ್ವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರಾಮಾಣಿಕತೆಯ ಕೊರತೆ ಮತ್ತು ಸ್ವಾರ್ಥದಿಂದಾಗಿ ಸಾತ್ವಿಕತೆ ಮತ್ತು ಸಜ್ಜನಿಕೆಗೆ ಇಂದು ಬೆಲೆ ಇಲ್ಲದಂತಾಗಿದೆ. ರಾಜಧಾನಿಯಲ್ಲೇ ಕನ್ನಡದ ಪರಿಸ್ಥಿತಿ ಶೋಚನೀಯವಾಗಿದ್ದು ಸರ್ಕಾರ ಮಾತ್ರವಲ್ಲ ಜನತೆಯೂ ಕನ್ನಡಕ್ಕೆ ನೀಡುವ ಮನ್ನಣೆ ಕಡಿಮೆಯಾಗಿರುವುದು ಕಳವಳಕಾರೀ ಬೆಳವಣಿಗೆ ಎಂದರು.
'ನಾಡಿಗೆ ನಮಸ್ಕಾರ' ಗ್ರಂಥಮಾಲೆಯ ಸಂಪಾದಕ ಡಾ. ಬಿ.ಜನಾರ್ಧನ ಭಟ್ ಸಕಾಲಿಕ ಮಾತುಗಳನ್ನಾಡಿದರು. ಗ್ರಂಥ ಮಾಲೆಯಲ್ಲಿ ಲೋಕಾರ್ಪಣೆ ಗೊಂಡ ಕೃತಿಗಳ ಸಾಧಕರು, ಲೇಖಕರು ಮತ್ತು ಪ್ರಾಯೋಜಕರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಕನ್ನಡ ಸಂಘದ ಕಾರ್ಯಾಧ್ಯಕ್ಷ ನಿರಂಜನ ಎನ್.ಮೊಗಸಾಲೆ ಉಪಸ್ಥಿತರಿದ್ದರು. ಡಾ.ನಾ.ಮೊಗಸಾಲೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ಸದಾನಂದ ನಾರಾವಿ ಸ್ವಾಗತಿಸಿದರು. ಸಹ ಕಾರ್ಯದರ್ಶಿ ಸತೀಶ ಕುಮಾರ್ ಕೆಮ್ಮಣ್ಣು ವಂದಿಸಿದರು. ಉಪಾಧ್ಯಕ್ಷ ವಿಠಲ ಬೇಲಾಡಿ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಸುರತ್ಕಲ್ ವಾಸುದೇವರಾವ್ ಅವರ ನೇತೃತ್ವದಲ್ಲಿ ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಲಿ ಸುರತ್ಕಲ್ ಇವರಿಂದ ಯಕ್ಷಗಾನ ತಾಳಮದ್ದಳೆ 'ಸುದರ್ಶನ ವಿಜಯ' ಪ್ರದರ್ಶನ ನಡೆಯಿತು.







