ಬೆಂಗಳೂರು: ಭದ್ರತಾ ಸಿಬ್ಬಂದಿಗೆ ಹಲ್ಲೆ ನಡೆಸಿ ಬಾಲಾಪರಾಧಿಗಳು ಪರಾರಿ

ಸಾಂದರ್ಭಿಕ ಚಿತ್ರ
ಬೆಂಗಳೂರು, ನ.2: ನಗರದ ಮಡಿವಾಳದ ಬಾಲಾಪರಾಧಿಗಳ ಮಂದಿರದಿಂದ ಐವರು ಬಾಲಾಪರಾಧಿಗಳು ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.
ಶುಕ್ರವಾರ ಬೆಳಗ್ಗೆ ಉಪಾಹಾರಕ್ಕಾಗಿ ಮಂದಿರದ ಆವರಣದೊಳಗೆ ಬಿಟ್ಟ ವೇಳೆ ಸಂಚು ರೂಪಿಸಿ ಕಾವಲಿಗಿದ್ದ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಐವರು ಬಾಲಾಪರಾಧಿಗಳು ಪರಾರಿಯಾಗಿದ್ದು, ಘಟನೆಯಲ್ಲಿ ಗಾಯಗೊಂಡಿರುವ ಸಿಬ್ಬಂದಿ ರಮೇಶ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಬೆಳಗ್ಗೆ ಸುಮಾರು 15 ಮಂದಿ ಬಾಲಾಪರಾಧಿಗಳು ಪರಾರಿಯಾಗಲು ಸಂಚು ರೂಪಿಸಿ ಕಾವಲಿಗಿದ್ದ ರಮೇಶ್ ಅವರಿಗೆ ಹಿಂದಿನಿಂದ ಗಟ್ಟಿಯಾಗಿ ಕೂಗದಂತೆ ಭದ್ರವಾಗಿಟ್ಟುಕೊಂಡು ಕಬ್ಬಿಣದ ಸಲಾಕೆಯಿಂದ ಹೊಡೆದು ಬೆದರಿಸಿ ಪರಾರಿಯಾಗುತ್ತಿದ್ದಾಗ ಅವರಲ್ಲಿ ಸುಮಾರು 9 ಮಂದಿಯನ್ನು ಸ್ಥಳೀಯರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.
ಆದರೆ, ಉಳಿದ 5 ಮಂದಿ ಬಾಲಕರು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಮಡಿವಾಳ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ಪರಾರಿಯಾಗಿರುವ ಬಾಲಾಪರಾಧಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ.





