ವಿದ್ಯಾರ್ಥಿಗಳಿಗೆ ಗ್ರಾಮೀಣ ಬದುಕಿನ ಪರಿಚಯ ಅಗತ್ಯ: ಸೇಂಟ್ ಮೀರಾಸ್ ಕಾಲೇಜ್ ಪ್ರಾಂಶುಪಾಲ ಡಾ.ಇರ್ಫಾನ್
ಬೆಂಗಳೂರು, ನ.2: ವಿದ್ಯಾರ್ಥಿಗಳು ನಮ್ಮ ಹಿರಿಯರು ಬೆಳೆದು ಬಂದ ಹಾದಿ ಹಾಗೂ ಗ್ರಾಮೀಣ ಬದುಕನ್ನು ತಿಳಿಯುವುದು ಅಗತ್ಯವಿದೆ ಎಂದು ಸೇಂಟ್ ಮೀರಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಇರ್ಫಾನ್ ತಿಳಿಸಿದರು.
ಶುಕ್ರವಾರ ನಗರದ ಸೇಂಟ್ ಮೀರಾಸ್ ಕಾಲೇಜಿನಲ್ಲಿ ಗ್ರಾಮೀಣ ಭಾಗದ ಬದುಕಿನ ಕುರಿತು ಆಯೋಜಿಸಿದ್ದ ‘ವಸ್ತು ಪ್ರದರ್ಶನ’ದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಗರದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕೃಷಿ, ಕೆರೆ, ಕುಂಟೆ ಹಾಗೂ ಕೃಷಿ ಸಲಕರಣೆಗಳ ಪರಿಚಯವೆ ಇಲ್ಲದಿರುವುದು ದುರಂತವೆಂದು ವಿಷಾದಿಸಿದರು.
ನಮ್ಮ ದಿನನಿತ್ಯ ಆಹಾರ ಸೇವಿಸುತ್ತೇವೆ. ಒಂದು ಹೊತ್ತಿನ ಊಟ ಇಲ್ಲದಿದ್ದರೆ ಹಸಿವಿನಿಂದ ಪರಿತಪಿಸುತ್ತೇವೆ. ಆದರೆ, ನಮ್ಮ ಊಟಕ್ಕೆ ಅಗತ್ಯವಾದ ದವಸ ಧಾನ್ಯಗಳು ಎಲ್ಲಿಂದ ಬಂದವು. ಅದನ್ನು ಬೆಳೆಯಲು ಏನೆಲ್ಲ ಕಷ್ಟನಷ್ಟಗಳನ್ನು ಅನುಭವಿಸಲಾಗುತ್ತದೆ ಎಂಬುದನ್ನು ವಿದ್ಯಾರ್ಥಿಗಳು ತಿಳಿಯುವಂತಾಗಬೇಕು ಎಂದು ಅವರು ತಿಳಿಸಿದರು.
ಕನ್ನಡ ಪ್ರಾಧ್ಯಾಪಕ ಯೇಜಸ್ ಪಾಷಾ ಮಾತನಾಡಿ, ಹಳ್ಳಿಗಳಲ್ಲಿ ನಮ್ಮ ಆಹಾರ ಪದ್ಧತಿ, ಉಡುಗೆ, ತೊಡುಗೆಗಳು ಹಾಗೂ ಆಟ ಪಾಠಗಳ ಮೂಲ ಬೇರಗಳು ಇವೆ. ಇದನ್ನು ಅರ್ಥ ಮಾಡಿಕೊಳ್ಳದ ಹೊರತು, ಬದುಕು ವ್ಯರ್ಥವೆಂದೆ ಅರ್ಥ. ಹೀಗಾಗಿ ಗ್ರಾಮೀಣ ಪ್ರದೇಶಕ್ಕೆ ಸಂಬಂಧಿಸಿದ ವಿಷಯವನ್ನು ಇಟ್ಟುಕೊಂಡು ವಸ್ತುಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. ಈ ವೇಳೆ ಕಾಲೇಜಿನ ಕಾರ್ಯದರ್ಶಿ ಯಾಸ್ಮಿನ್ ಹಮೀದ್ ಉಪಸ್ಥಿತರಿದ್ದರು.







