ಹನೂರು: ರಸ್ತೆ ಅಭಿವೃದ್ದಿ ಕಾಮಗಾರಿಗೆ ಚಾಲನೆ

ಹನೂರು,ನ.2: ಗ್ರಾಮಸ್ಥರು ಸರ್ಕಾರದ ಮಹತ್ವಾಂಕಾಂಕ್ಷೆಯ ಯೋಜನೆಯಾದ ನರೇಗಾ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಸೂಳೇರಿಪಾಳ್ಯ ಪಂಚಾಯತ್ ಕಾರ್ಯದರ್ಶಿ ಪವನ್ ಹೇಳಿದರು.
ಸೂಳೇರಿಪಾಳ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆ.ಗುಂಡಾಪುರ ಗ್ರಾಮದ ಮದ್ಯದ ಓಣಿಯಿಂದ ಬಸವೇಶ್ವರ ದೇವಸ್ಥಾನದ ವರೆಗೆ ಮೆಟ್ಲಿಂಗ್ ರಸ್ತೆ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ಯೋಜನೆಯಲ್ಲಿ ಒಂದು ಕುಟುಂಬಕ್ಕೆ ನೂರು ದಿನಗಳ ಕೂಲಿ ಕೆಲಸ ಮಾಡಲು ಅವಕಾಶವಿದ್ದು, ದಿನಕ್ಕೆ 249 ರೂ. ಗಳನ್ನು ಸರ್ಕಾರ ನಿಗದಿ ಮಾಡಿದೆ. ಸರ್ಕಾರದ ಈ ಯೋಜನೆಯ ಮೂಲಕ ಗ್ರಾಮೀಣ ಭಾಗದ ಜನರ ವಲಸೆ ತಪ್ಪಿಸುವುದು ಮತ್ತು ಆರ್ಥಿಕವಾಗಿ ಸ್ವಾವಲಂಬನೆಯಾಗಲು ಸಹಾಕಾರಿಯಾಗಲಿದೆ ಎಂದು ತಿಳಿಸಿದರು.
ನಂತರ ಮಾತನಾಡಿದ ಗ್ರಾಮೀಣ ಕೂಲಿಕಾರರ ಸಂಘಟನೆಯ ಜಿಲ್ಲಾ ಸಂಯೋಜಕ ಈಶ್ವರ್, ನಮ್ಮ ಸಂಘಟನೆ ಸರ್ಕಾರದ ಮಹತ್ತರ ಯೋಜನೆಯಾದ ನರೇಗಾ ಯೋಜನೆಯ ಮಹತ್ವ ಮತ್ತು ಅನುಕೂಲಗಳ ಸಂಬಂಧಿಸಿದಂತೆ ಅರಿವು ಮೂಡಿಸುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭ ಸೂಳೇರಿಪಾಳ್ಯ ಗ್ರಾಮ ಪಂ. ಅಧ್ಯಕ್ಷೆ ಸುಧಾಮಣಿ ಶಿವಕುಮಾರ್, ಗ್ರಾಮೀಣ ಕೂಲಿಕಾರರ ಸಂಘಟನೆಯ ಜಿಲ್ಲಾ ಸಂಯೋಜಕ ಈಶ್ವರ್, ಬಿಲ್ ಕಲೆಕ್ಟರ್ ಸಿದ್ದರಾಜು, ಕಾರ್ಯಕರ್ತೆಯಮಹದೇವಮ್ಮ ಮುಂತಾದವರಿದ್ದರು.





