ಭ್ರಷ್ಟಾಚಾರ ಮುಕ್ತ ಭಾರತ ಯುವಕರ ಜವಾಬ್ದಾರಿ: ಎಂ.ವೆಂಕಟೇಶ್
ಎಂಆರ್‌ಪಿಎಲ್-ಸಹ್ಯಾದ್ರಿ ಕಾಲೇಜು ಮಟ್ಟದ ಚರ್ಚಾ ಸ್ಪರ್ಧೆ ಸಮಾರೋಪ

ಮಂಗಳೂರು, ನ. 2: ಯುವಕರು ಜೀವನದಲ್ಲಿ ಯಾವುದೇ ರೀತಿಯ ನಕಾರಾತ್ಮಕ ವಿಷಯಗಳ ಬಗ್ಗೆ ವಿಚಾರಗಳನ್ನು ಮಾಡಬಾರದು. ಭ್ರಷ್ಟಾಚಾರ ಮುಕ್ತ ಭಾರತವನ್ನಾಗಿ ರೂಪಿಸುವ ಜವಾಬ್ದಾರಿ ಯುವಕರದ್ದು ಎಂದು ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೊಕೆಮಿಕಲ್ಸ್ ಲಿ. (ಎಂಆರ್‌ಪಿಎಲ್) ವ್ಯವಸ್ಥಾಪಕ ನಿರ್ದೇಶಕ ಎಂ.ವೆಂಕಟೇಶ ತಿಳಿಸಿದ್ದಾರೆ.
ಕೇಂದ್ರ ವಿಜಿನಲ್ಸ್ ಆಯೋಗದ ‘ಜಾಗೃತ ಅರಿವು ಸಪ್ತಾಹ’ ಪ್ರಯುಕ್ತ ನಗರದ ಸಹ್ಯಾದ್ರಿ ಕ್ಯಾಂಪಸ್‌ನ ಸೆಮಿನಾರ್ ಹಾಲ್‌ನಲ್ಲಿ ಎಂಆರ್‌ಪಿಎಲ್ ಹಾಗೂ ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜುಗಳ ಆಶ್ರಯದಲ್ಲಿ ಶುಕ್ರವಾರ ಏರ್ಪಡಿಸಿದ ‘ಭ್ರಷ್ಟಾಚಾರ ನಿರ್ಮೂಲನೆ ಮಾಡಿ ಹೊಸ ಭಾರತವನ್ನು ಕಟ್ಟೋಣ’ ಎಂಬ ವಿಷಯದಲ್ಲಿ ಕಾಲೇಜು ಮಟ್ಟದ ಚರ್ಚಾ ಸ್ಪರ್ಧೆ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾಲಿಗೆ ಒಳ್ಳೆಯದಾದರೆ ನಾಡೆಲ್ಲ ಒಳ್ಳೆಯದು ಎಂಬ ಗಾದೆಮಾತಿನಂತೆ ನಮ್ಮ ವಿಚಾರಗಳು ಸಕಾರಾತ್ಮಕವಾಗಿದ್ದರೆ ಯಾವುದೇ ಯಾವುದೇ ಭ್ರಷ್ಟಾಚಾರಕ್ಕೆ ಆಸ್ಪದ ಇರುವುದಿಲ್ಲ. ಪ್ರತಿಯೊಬ್ಬರು ಭ್ರಷ್ಟಾಚಾರವನ್ನು ವಿರೋಧಿಸಿದರೆ ಮರುಕ್ಷಣವೇ ಭಾರತ ಭ್ರಷ್ಟಾಚಾರ ಮುಕ್ತಗೊಳ್ಳುತ್ತದೆ ಎಂದು ಅವರು ತಿಳಿಸಿದರು.
ಎಂಆರ್‌ಪಿಎಲ್‌ನ ಮುಖ್ಯ ವಿಜಿಲನ್ಸ್ ಅಧಿಕಾರಿ ರಾಜೀವ್ ಕುಶ್ವಾ ಮಾತನಾಡಿ, ಪೋಷಕರು ಮಕ್ಕಳಿಗಾಗಿ ಲಕ್ಷಾಂತರ ರೂ. ಖರ್ಚು ಮಾಡಿ ಶಿಕ್ಷಣ ಕೊಡಿಸಲು ಶ್ರಮಿಸುತ್ತಾರೆ. ಮಕ್ಕಳು ಶಾಲೆಯಲ್ಲಿ ಮೊದಲ ರ್ಯಾಂಕ್ ಬಂದರೆ ಪೋಷಕರ ಶ್ರಮ ಸಾರ್ಥಕವಾಗುತ್ತದೆ. ಆದರೆ ಕಾಲೇಜಿನಲ್ಲಿ ರ್ಯಾಂಕ್ ಬಾರದೇ ಉಳಿಯುವುದು ಭ್ರಷ್ಟಾಚಾರಕ್ಕೆ ಆಸ್ಪದ ನೀಡಿದಂತಾಗುತ್ತದೆ ಎಂದು ಹೇಳಿದರು.
ದೇಶದ ಬೆಳವಣಿಗೆ ಕುಂಠಿತಗೊಳ್ಳಲು ಭ್ರಷ್ಟಾಚಾರ ಕಾರಣವಾಗಿದೆ. ಭ್ರಷ್ಟಾಚಾರದ ಬಗ್ಗೆ ದೇಶದ ಜನರನ್ನು ಜಾಗೃತಗೊಳಿಸಲು ಕೇಂದ್ರ ವಿಜಿಲನ್ಸ್ ಆಯೋಗ ಪ್ರತಿ ವರ್ಷವೂ ‘ಜಾಗೃತ ಅರಿವು ಸಪ್ತಾಹ’ವನ್ನು ಆಚರಿಸುತ್ತಾ ಬರುತ್ತಿದೆ. ಭ್ರಷ್ಟಾಚಾರ ನಿರ್ಮೂಲನೆ ಮಾಡುವಲ್ಲಿ ದೇಶದ ಯುವಕರಿಗೆ ಶಿಕ್ಷಣ ಮತ್ತು ಜಾಗೃತಿ ನೀಡುವ ಸಲುವಾಗಿ ಕಾಲೇಜು ಮಟ್ಟದ ಚರ್ಚಾ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿದೆ ಎಂದರು.
ಚರ್ಚಾ ಸ್ಪರ್ಧೆಯ ಮೂಲಕ ವಿದ್ಯಾರ್ಥಿ ಸಮೂಹದಿಂದ ಭ್ರಷ್ಟಾಚಾರ ತೊಲಗಿಸುವ ಹೊಸ ವಿಚಾರಗಳನ್ನು ಆಯ್ದುಕೊಂಡು ಕೇಂದ್ರ ವಿಜಿಲನ್ಸ್ ಆಯೋಗದ ಜರ್ನಲ್‌ಗಳಲ್ಲಿ ಪ್ರಕಟಿಸಲಾಗುವುದು. ಪ್ರತಿ ಚರ್ಚಾ ಸ್ಪರ್ಧೆಯಿಂದಲೂ 15-20 ವಿಚಾರಗಳನ್ನು ಯೋಗ ಸ್ವೀಕರಿಸಲಿದೆ ಎಂದು ಹೇಳಿದರು.
ಕಳೆದ ಹಲವು ವರ್ಷಗಳ ಹಿಂದೆ ಯೂರಿಯಾ ಗೊಬ್ಬರದ ಕೊರತೆ ಕಂಡುಬರುತ್ತಿತ್ತು. ಆಗ ಇಂಡಸ್ಟ್ರೀಸ್‌ಗಳು ಯೂರಿಯಾವನ್ನು ಬಳಸುತ್ತಿದ್ದವು. ಹಾಗಾಗಿ ಯೂರಿಯಾ ಗೊಬ್ಬರದಲ್ಲಿ ಇತ್ತೀಚೆಗೆ ಬೇವಿನಮರದ ಎಲೆಗಳನ್ನು ಬಳಸಲಾಗುತ್ತಿದೆ. ಬೇವು ಮಿಶ್ರಿತ ಯೂರಿಯಾವನ್ನು ಇಂಡಸ್ಟ್ರೀಸ್‌ಗಳು ಬಳಕೆ ಮಾಡಲಸಾಧ್ಯ. ಹಾಗಾಗಿಯೇ ಕೆಂದ್ರ ಸರಕಾರವು ಇಂತಹ ವಿಚಾರವನ್ನು ಸರಕಾರ ಅಳವಡಿಸಿಕೊಂಡಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜಿನ ಪ್ರಾಂಶುಪಾಲ ಡಾ.ಆರ್.ಶ್ರೀನಿವಾಸ್ ರಾವ್ ಕುಂಟೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಡಾ.ಮೊಲಿ ಚೌಧರಿ ಸ್ವಾಗತಿಸಿದರು. ಕಾಲಿಡಾ ರೋಯ್ಸಾ ಡಿಸೋಜ ಕಾರ್ಯಕ್ರಮ ನಿರರೂಪಿಸಿದರು. ಎಂಆರ್‌ಪಿಎಲ್ ಮ್ಯಾನೇಜರ್ (ವಿಜಿಲನ್ಸ್) ಎಚ್.ವಿ. ಮಂಜುನಾಥ ವಂದಿಸಿದರು.
ಪ್ರಮಾಣಪತ್ರ ವಿತರಣೆ
ಚರ್ಚಾಸ್ಪರ್ಧೆಯಲ್ಲಿ ಮಂಗಳೂರು ಮತ್ತು ಉಡುಪಿಯಿಂದ ಇಂಜಿನಿಯರಿಂಗ್, ಔಷಧ, ದಂತ, ಔಷಧ ಮತ್ತು ನಿರ್ವಹಣಾ ವಿಭಾಗಗಳಲ್ಲಿನ 40 ವೃತ್ತಿಪರ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸುರತ್ಕಲ್‌ನ ಎನ್‌ಐಟಿಕೆ (ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಕರ್ನಾಟಕ) ಕಾಲೇಜಿನ ವಿದ್ಯಾರ್ಥಿಗಳಾದ ಶುಭಾಂಗ್ ಮತ್ತು ಫಾತಿಮಾ (ಪ್ರಥಮ), ಯೆನೆಪೊಯ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಾದ ತಬಿಂದನಾಸಿಮ್ ಮತ್ತು ಅಕ್ಕಿನೇನಿ (ದ್ವಿತೀಯ), ಸಂತ ಜೋಸೆಫ ಇಂಜಿನಿಯರಿಂಗ್ ಕಾಲೇಜಿನ ಆಸ್ಲಿನ್ ಪೊಲೊ ಮತ್ತು ಆಕಾಶ್ ಲೋಬೊ (ತೃತೀಯ) ಅವರಿಗೆ ಪ್ರಶಸ್ತಿಯ ಪ್ರಮಾಣಪತ್ರ ವಿತರಿಸಲಾಯಿತು. ಅತ್ಯುತ್ತಮ ಚರ್ಚಾಪಟು ಪ್ರಶಸ್ತಿಗೆ ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜಿನ ವಿದ್ಯಾರ್ಥಿನಿ ದಿವ್ಯಾ ಭಾಜನರಾದರು.







