ಮೈತ್ರಿ ಸರಕಾರದ ಖಜಾನೆ ಖಾಲಿಯಾಗಿದೆ: ಶಾಸಕ ಸಿ.ಟಿ ರವಿ

ಚಿಕ್ಕಮಗಳೂರು, ನ.2: ಇತ್ತೀಚೆಗೆ ಸುರಿದ ಭಾರೀ ಮಳೆಗೆ ಜಿಲ್ಲಾದ್ಯಂತ ಅಂದಾಜು 25.13 ಲಕ್ಷ ಅತಿವೃಷ್ಟಿ ಹಾನಿ ಸಂಭವಿಸಿರುವ ಬಗ್ಗೆ ಪ್ರಾಥಮಿಕ ವರದಿ ತಯಾರಿಸಿ ಹಣ ಬಿಡುಗಡೆ ಮಾಡುವಂತೆ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರೂ ಸರಕಾರ ಈವರೆಗೂ ಯಾವುದೇ ಹಣ ಬಿಡುಗಡೆ ಮಾಡಿಲ್ಲ. ಇದು ಸರಕಾರದ ಖಜಾನೆ ಖಾಲಿಯಾಗಿರುವ ಬಗ್ಗೆ ಶಂಕೆ ಮೂಡಿಸುತ್ತಿದೆ ಎಂದು ಶಾಸಕ ಸಿ.ಟಿ.ರವಿ ಟೀಕಿಸಿದ್ದಾರೆ.
ಕರಗಡ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪ್ರದೇಶದಲ್ಲಿ ಪ್ರಗತಿ ಪರಿಶೀಲನೆ ನಡೆಸಿದ ನಂತರ ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತಿವೃಷ್ಟಿಯಂತಹ ತುರ್ತು ಪರಿಸ್ಥಿತಿಯಲ್ಲೂ ಹಣ ಬಿಡುಗಡೆ ಮಾಡಲು ಸರಕಾರ ದಿವ್ಯ ನಿರ್ಲಕ್ಷ್ಯ ವಹಿಸಿದೆ. ಚಿಕ್ಕಮಗಳೂರು ಮಾತ್ರವಲ್ಲದೇ ರಾಜ್ಯ ಯಾವ ಜಿಲ್ಲೆಗಳಿಗೆ ಅತೀವೃಷ್ಟಿ, ಅನಾವೃಷ್ಟಿ ಪರಿಹಾರಕ್ಕೆ ಅನುದಾನ ಬಿಡುಗಡೆಯಾಗಿಲ್ಲ. ಸರಕಾರದ ಈ ನಿರ್ಲಕ್ಷ್ಯಧೋರಣೆಯಿಂದ ಸರಕಾರದ ಖಜಾನೆಯೇ ಖಾಲಿಯಾಗಿದೆ ಎಂಬ ಅನುಮಾನ ಕಾಡುತ್ತಿದೆ ಎಂದು ಹೇಳಿದರು.
ಒಂದು ಬಾರಿ ಅತಿವೃಷ್ಟಿ ಪರಿಹಾರವಾಗಿ 26 ಕೋಟಿ ಹಣ ಬಿಡುಗಡೆ ಮಾಡಲಾಗಿದೆ ಎಂಬ ಪ್ರಕಟನೆಯನ್ನು ಹಿಂದೆ ಹೊರಡಿಸಲಾಗಿತ್ತು, ನಂತರ ಆ ಹಣವನ್ನು ಹಿಂಪಡೆದು ಇಲಾಖಾವಾರು ಹಣ ಬಿಡುಗಡೆ ಮಾಡುವುದಾಗಿ ಸರಕಾರ ಹೇಳಿಕೆ ನೀಡಿದ್ದರೂ ಈವರೆಗೂ ಯಾವುದೇ ಹಣ ಬಿಡುಗಡೆಯಾಗಿಲ್ಲ. ಅಧಿಕಾರಿಗಳು ಇಲಾಖಾವಾರು ಬೆಳೆ ಹಾನಿ, ಆಸ್ತಿಪಾಸ್ತಿ ಹಾನಿ ವರದಿಯನ್ನು ಸರಕಾರಕ್ಕೆ ಸಲ್ಲಿಸಿದ್ದರೂ ಅನುದಾನ ಮಾತ್ರ ನಯಾಪೈಸೆಯೂ ಬಂದಿಲ್ಲ. ಸರಕಾರದ ಖಜಾನೆ ಖಾಲಿಯಾಗಿರುವುದರಿಂದ ಹೀಗೆ ಸುಳ್ಳು ಹೇಳುತ್ತಾ ಜನರ ದಿಕ್ಕು ತಪ್ಪಿಸುತ್ತಿದೆ ಎಂದು ರವಿ ಆರೋಪಿಸಿದರು.
ಈಗಾಗಲೇ ಪ್ರಗತಿಯಲ್ಲಿರುವ ಯುಜಿಡಿ ಕಾಮಗಾರಿಯ ವೆಚ್ಚ 57ಕೋಟಿ ರೂ. ಅಂದಾಜಿಸಲಾಗಿತ್ತು. ಅದು 82 ಕೋಟಿಗೆ ಹೆಚ್ಚುವರಿಯಾಗಿದ್ದರೂ ಈವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ ಸರಕಾರ ಮಾರ್ಚ್ ತಿಂಗಳ ಅಂತ್ಯದ ವೇಳೆಗೆ ಕಾಮಗಾರಿ ಪೂರ್ಣಗೊಳಿಸುವ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ ಅವರು, ಪ್ರಗತಿಯಲ್ಲಿರುವ ವಸತಿ ಯೋಜನೆಗಳಿಗೆ ಸರಕಾರದಿಂದ ಹಣ ಬಿಡುಗಡೆಯಾಗಿಲ್ಲ, ಹೊಸ ಮನೆಗಳಿಗೂ ಸಹ ಆನ್‍ಲೈನ್ ಮೂಲಕ ಪ್ರಸ್ತಾವನೆಗಳ ಅಪ್‍ಲೋಡ್ ಆಗುತ್ತಿಲ್ಲ. ಕೇಳಿದರೆ ಸರ್ವರ್ ಸಮಸ್ಯೆ ಎನ್ನುತ್ತಿದ್ದಾರೆ. ಸರಕರದ ಈ ವರ್ತನೆಗೆ ಖಜಾನೆ ಖಾಲಿಯಾಗಿರುವುದೇ ಕಾರಣ ಎಂದರು.







