ಮಡಿಕೇರಿ: ಜೇನು ನೊಣಗಳಿಗೆ 'ಥಾಯಿ ಶ್ಯಾಕ್ ಬ್ರೂಡ್' ಕಾಯಿಲೆ; ನಿಯಂತ್ರಣ ಕ್ರಮಗಳಿಗೆ ಸಲಹೆ

ಮಡಿಕೇರಿ ನ.2 :ಪ್ರಕೃತಿ ವಿಕೋಪದ ಪರಿಣಾಮ ಜೇನು ನೊಣಗಳಿಗೆ ನೈಸರ್ಗಿಕ ಅಹಾರದ ಕೊರತೆ ಹಾಗೂ ಹೆಚ್ಚಾದ ಚಳಿಯಿಂದ ಕೊಡಗು ಜಿಲ್ಲೆಯಲ್ಲಿ ಜೇನು ಹುಳ ಕುಟುಂಬಗಳಲ್ಲಿ ಥಾಯಿ ಶ್ಯಾಕ್ ಬ್ರೂಡ್ ಕಾಯಿಲೆ ಕಾಣಿಸಿಕೊಂಡಿದ್ದು, ಜಿಲ್ಲೆಯ ಕೃಷಿ ಸಮಸ್ಯೆಗಳಿಗೆ ಹೊಸದೊಂದು ಸಮಸ್ಯೆ ಸೇರಿಕೊಂಡಂತಾಗಿದೆ.
ಜೇನುಗಾರಿಕೆ ತೋಟಗಾರಿಕೆ ಇಲಾಖೆಯ ಮಹತ್ವದ ಕಾರ್ಯಕ್ರಮಗಳಲ್ಲಿ ಒಂದು. ಆಧುನಿಕ ಕೃಷಿ ಪದ್ಧ್ದತಿಯಲ್ಲಿ ಅಂತರಾಷ್ಟೀಯ ಮಾರುಕಟ್ಟೆಗೆ ಅನುಗುಣವಾಗಿ, ಗುಣಮಟ್ಟದ ಇಳುವರಿಯೊಂದಿಗೆ ಅತಿ ಹೆಚ್ಚು ಆದಾಯ ಪಡೆದು ಲಾಭಗಳಿಸಲು ಪರಾಗಸ್ಪರ್ಶ ಕ್ರಿಯೆ ಅತಿ ಮುಖ್ಯವಾಗಿದೆ. ಪ್ರಪಂಚದಲ್ಲಿ ನಡೆಯುವ ಪರಾಗಸ್ಪರ್ಶ ಕ್ರಿಯೆಗಳಲ್ಲಿ ಜೇನು ನೊಣಗಳ ಪಾತ್ರ ಪ್ರಮುಖವಾಗಿದ್ದು, ಇವುಗಳ ಅಭಿವೃದ್ದಿ ಹಾಗೂ ಸಂರಕ್ಷಣೆ ಆಗಬೇಕಾಗಿದೆ.
ರೋಗ ನಿಯಂತ್ರಣ ಕ್ರಮಗಳು
ಥಾಯಿ ಶ್ಯಾಕ್ ಬ್ರೂಡ್ ರೋಗ ವೈರಸ್‍ನಿಂದ ಬರುವ ರೋಗವಾಗಿರುವುದರಿಂದ ನಿಯಂತ್ರಣ ಸ್ವಲ್ಪ ಕಷ್ಟ. ಆದರೂ ಸಂಶೋಧಕರು ಹಾಗೂ ರೈತರ ಸತತ ಪ್ರಯತ್ನ ಹಾಗೂ ಸಹಕಾರದಿಂದ ಕೃಷಿ ಪದ್ಧತಿ ಅಳವಡಿಕೆಯಲ್ಲಿ ಬದಲಾವಣೆ ಮಾಡಿಕೊಂಡು ವೈಜ್ಞಾನಿಕ ಪದ್ಧ್ದತಿ ಅಳವಡಿಸುವುದರೊಂದಿಗೆ ನಿಯಂತ್ರಿಸಬಹುದು ಎಂದು ತೋಟಗಾರಿಕೆ ಇಲಾಖೆ ಮಡಿಕೇರಿಯ ಹಾರ್ಟಿ ಕ್ಲಿನಿಕ್ ಅಧಿಕಾರಿಗಳು ಹಾಗೂ ಜೇನು ಕೃಷಿ ಪ್ರದರ್ಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾಮಾನ್ಯವಾಗಿ ಯಾವುದೇ ರೀತಿಯ ರೋಗ, ಅದರಲ್ಲಿಯೂ ವೈರಸ್ ನಿಂದ ಬರುವ ರೋಗ ನಿಯಂತ್ರಿಸಲು ಶುದ್ಧತೆ ಅತೀ ಮುಖ್ಯ. ಆದ್ದರಿಂದ ಜೇನು ಗೂಡಿನ ಹಾಗೂ ಸುತ್ತಲ್ಲಿನ ವಾತವರಣದ ಶುದ್ಧತೆ ಕಾಪಾಡುವುದು, ಕಾಯಿಲೆ ಬಂದಿರುವ ಭಾಗವನ್ನು ಕತ್ತರಿಸಿ ಬೇರ್ಪಡಿಸಿ ಸುಡುವುದು, ಕಾಯಿಲೆ ಬಂದ ಎರಿ ಇರುವ ಪೆಟ್ಟಿಗೆಯಿಂದ ಜೇನು ಕುಟುಂಬವನ್ನು ಬೇರೆ ಪೆಟ್ಟಿಗೆಗೆ ವರ್ಗಾಯಿಸಿ ಅದನ್ನು ಶುದ್ಧ್ದ/ ಪ್ರಶಾಂತ ವಾತಾವರಣದಲ್ಲಿ ಇಡುವುದು, ಜೇನು ಕುಟುಂಬಕ್ಕೆ ಅಹಾರದ ಕೊರತೆ ಉಂಟಾಗದಂತೆ ನೋಡಿಕೊಳ್ಳುವುದು. ಹೂ ಕಡಿಮೆಯಾಗಿ ಮಕರಂದ ಕೊರತೆ ಇದ್ದಲ್ಲಿ ಕೃತಕ ಅಹಾರ ಕೊಡುವುದು, ಕಾಯಿಲೆ ಬಂದ ಜೇನು ಪೆಟ್ಟಿಗೆಯಲ್ಲಿನ ಕುಟುಂಬ ಹಾಗೂ ಭಾಗವನ್ನು ಬೇರೆ ಕಡೆ ಬದಲಾಯಿಸಿದ ನಂತರ ಖಾಲಿಯಾದ ಪೆಟ್ಟಗೆಯನ್ನು ಬಿಸಿ ನೀರಿನಿಂದ ತೊಳೆದು ಸಂರಕ್ಷಿಸಬೇಕು. ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆ ಮಡಿಕೇರಿಯ ಹಾರ್ಟಿ ಕ್ಲಿನಿಕ್ 9448401087 ಹಾಗೂ ಜೇನು ಕೃಷಿ ಪ್ರದರ್ಶಕರು 9449075077 ರವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.







