ಮಂಗಳೂರು ವಿವಿಗೆ ಕ್ಯೂ ಎಸ್ ವಿಶ್ವಮಾನ್ಯತಾ ರ್ಯಾಂಕಿಂಗ್

ಮಂಗಳೂರು, ನ. 3: ಮಂಗಳೂರು ವಿಶ್ವವಿದ್ಯಾನಿಲಯವು ಕ್ಯೂ ಎಸ್ ವಿಶ್ವಮಾನ್ಯತಾ ರ್ಯಾಂಕಿಂಗ್‍ನಲ್ಲಿ ಭಾರತದಲ್ಲಿ 43ನೇ ಸ್ಥಾನವನ್ನು ಪಡೆದು ಕೊಂಡಿದೆ. ಈ ಮಾನ್ಯತಾ ಪ್ರಕ್ರಿಯೆಯಲ್ಲಿ ಭಾರತದ 78 ವಿಶ್ವವಿದ್ಯಾನಿಲಯಗಳು ಮೌಲ್ಯ ಮಾಪನಕ್ಕೊಳಪಟ್ಟಿದ್ದವು. ಇದೇ ರ್ಯಾಂಕಿಂಗ್‍ನಲ್ಲಿ ವಿಶ್ವದ 500 ವಿಶ್ವವಿದ್ಯಾನಿಲಯಗಳಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು 175ನೇ ಸ್ಥಾನವನ್ನು ಪಡೆದು ತನ್ನ ಯಶಸ್ಸಿನ ಹಿರಿಮೆಗೆ ಮತ್ತೊಂದು ಗರಿಯನ್ನು ಪಡೆದುಕೊಂಡಿದೆ. 38 ವರ್ಷದ ಯುವ ವಯಸ್ಸಿನ ವಿಶ್ವವಿದ್ಯಾನಿಲಯವಾದ ಮಂಗಳೂರು ವಿಶ್ವವಿದ್ಯಾನಿಲಯವು ಅಭಿವೃದ್ಧಿ ಹಾಗೂ ಸಾಧನೆಯ ಹಾದಿಯಲ್ಲಿ ಹೆಚ್ಚಿನ ಹಿರಿಯ ವಿಶ್ವವಿದ್ಯಾನಿಲಯಗಳಿಗಿಂತ ಮೇಲಿನ ರ್ಯಾಂಕ್ ಪಡೆದಿದೆ.
ಈ ಮೌಲ್ಯಮಾಪನವು 2009ರ ಈಚೆಗಿನ ವಿಶ್ವವಿದ್ಯಾನಿಲಯದ ಶೈಕ್ಷಣಿಕ ಮಹತ್ವ, ಉದ್ಯೋಗಿಗಳ ಗುಣಮಟ್ಟ, ವಿದ್ಯಾರ್ಥಿ- ಶಿಕ್ಷಕ ಪ್ರಮಾಣ, ಮಾರ್ಗದರ್ಶಕ- ಸಂಶೋಧಕ, ಪರಾಮರ್ಶನಕ್ಕೊಳಪಟ್ಟ ಸಂಶೋಧನಾ ಬರಹಗಳು, ಸಂಶೋಧನಾ ಪ್ರಬಂಧ ಮಂಡನೆ, ಅಂತಾರಾಷ್ಟ್ರೀಯ ಸಂಶೋಧನಾ ಸಂಬಂಧ, ಅಂತಾರಾಷ್ಟ್ರೀಯ ಪ್ರಾಧ್ಯಾಪಕರು, ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಮೊದಲಾದ ಅಂಶಗಳನ್ನು ಪರಿಗಣಿಸಿ ಈ ರ್ಯಾಂಕಿಂಗನ್ನು ನೀಡಿದೆ.
ಮುಂದಿನ 2019ರ ಪೂರ್ವಭಾವಿ ಆವೃತ್ತಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ಮುಂದಿನ ಕ್ಯೂಎಸ್ ಮೌಲ್ಯಮಾಪನದಲ್ಲಿ ಏಷ್ಯಾದಲ್ಲೇ ಮಹತ್ವದ ವಿಶ್ವವಿದ್ಯಾನಿಲಯವಾಗಿ ಹೊರಹೊಮ್ಮವ ನಿರೀಕ್ಷೆಯಿದ್ದು ಪ್ರಾಧ್ಯಾಪಕರ ಸಂಶೋಧನಾ ಸೂಚ್ಯಂಕವು ಅತ್ಯುತ್ತಮವಾಗಿದೆ ಮಾತ್ರವಲ್ಲ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಏರಿಕೆಯೂ ಮಹತ್ವದ್ದಾಗಿದೆ ಎಂದಿದೆ.
ಈಗಾಗಲೇ ಮಂಗಳೂರು ವಿಶ್ವವಿದ್ಯಾನಿಲಯವು ನ್ಯಾಕ್ ಮಾನ್ಯತೆಯನ್ನು ಎ ಪ್ಲಸ್ ರ್ಯಾಂಕಿಂಗ್‍ನ್ನು ಹೊಂದಿದ್ದು, ಕೆಮಿಕಲ್ ಸೈನ್ಸ್ ಸ್ಕೋಪಸ್‍ನಲ್ಲಿ ದೇಶದಲ್ಲೇ 2ನೇ ಸ್ಥಾನವನ್ನು ಹೊಂದಿದೆ. ಇಂಡಿಯಾ ಟುಡೆ ವಿಶ್ವವಿದ್ಯಾನಿಲಯ ರ್ಯಾಂಕಿಂಗ್‍ನಲ್ಲಿ ಭಾರತದಲ್ಲಿ 11ನೆಯ ಸ್ಥಾನ ಹಾಗೂ ಗ್ರೀನ್ ಮೆಟ್ರಿಕ್ ರ್ಯಾಂಕಿಂಗ್‍ನಲ್ಲಿ 3ನೆಯ ಸ್ಥಾನ ಪಡೆದು ಉತ್ತಮ ಗುಣಮಟ್ಟದ ಶಿಕ್ಷಣ ಕೊಡುವ ಜೊತೆಗೆ ಉನ್ನತ ಶಿಕ್ಷಣಕ್ಕೆ ಬೇಕಾದ ಪರಿಪೂರ್ಣ ವ್ಯವಸ್ಥೆ ಹಾಗೂ ಉತ್ತಮ ವಾತಾವರಣವನ್ನು ನೀಡಿ ಅಭಿವೃದ್ಧಿಯ ಪಥದಲ್ಲಿ ಹೆಜ್ಜೆ ಹಾಕುತ್ತಿದೆ.







