ಸರಣಿ ಸ್ಫೋಟಕ ಪಟಾಕಿ ತಯಾರಿಕೆ-ಮಾರಾಟ ನಿಷೇಧ: ರಾಜ್ಯ ಸರಕಾರದ ಸುತ್ತೋಲೆ
ರಾತ್ರಿ 8 ರಿಂದ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶ

ಸಾಂದರ್ಭಿಕ ಚಿತ್ರ
ಬೆಂಗಳೂರು, ನ.3: ವಾಯು ಮಾಲಿನ್ಯ, ಶಬ್ದಮಾಲಿನ್ಯ ಮತ್ತು ಪಟಾಕಿ ಸಿಡಿಸಿದ ನಂತರ ಘನ ತ್ಯಾಜ್ಯ ವಸ್ತುಗಳಿಂದ ಮಾಲಿನ್ಯ ಉಂಟಾಗುವುದರಿಂದ, ಸರಣಿ ಸ್ಫೋಟಕ ಪಟಾಕಿಗಳನ್ನು ತಯಾರಿಸುವುದು, ಮಾರಾಟ ಮಾಡುವುದು ಮತ್ತು ಬಳಸುವುದನ್ನು ಸುಪ್ರೀಂಕೋರ್ಟ್ ಆದೇಶದ ಅನ್ವಯ ನಿಷೇಧಿಸಿರುವ ರಾಜ್ಯ ಸರಕಾರ, ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಗೆ ಸುತ್ತೋಲೆ ಹೊರಡಿಸಿದೆ.
ಸ್ಫೋಟಕ ಪಟಾಕಿಗಳನ್ನು ಅಧಿಕೃತವಾಗಿ ಪರವಾನಿಗೆ ಪಡೆದ ಮಾರಾಟಗಾರರು ಮಾತ್ರ ಮಾರಾಟ ಮಾಡುವುದು ಮತ್ತು ಅಧಿಕೃತವಾಗಿ ಪರವಾನಿಗೆ ಪಡೆದವರು ಸ್ಫೋಟಕ ಪಟಾಕಿಗಳನ್ನು ಈ ಆದೇಶಾನುಸಾರ ಮಾತ್ರ ಮಾರಾಟ ಮಾಡಬೇಕು ಎಂದು ಸೂಚಿಸಲಾಗಿದೆ.
ವಾರ್ತಾ ಮತ್ತು ಪ್ರಚಾರ ಇಲಾಖೆ ಮತ್ತು ಜಿಲ್ಲಾಡಳಿತದ ಎಲ್ಲ ಇಲಾಖೆಗಳು ಶಾಲಾ ಕಾಲೇಜುಗಳಲ್ಲಿ, ಸಾರ್ವಜನಿಕರಲ್ಲಿ ಪಟಾಕಿ ಸಿಡಿಸುವುದರಿಂದ ಉಂಟಾಗುವ ಅಪಾಯಗಳ ಬಗ್ಗೆ ವ್ಯಾಪಕ ಪ್ರಚಾರ ಮಾಡುವಂತೆ ಸೂಚಿಸಲಾಗಿದೆ.
ದೀಪಾವಳಿ ಹಬ್ಬದ ಸಂಬಂಧ, ನವೆಂಬರ್ 5ರಂದು ಧನತೇರಸ್, ನ.6ರಂದು ನರಕ ಚತುರ್ದಶಿ, ನ.7ರಂದು ದೀಪಾವಳಿ ಅಮಾವಾಸ್ಯೆ, ನ.8ರಂದು ಬಲಿಪಾಡ್ಯಮಿ ಹಬ್ಬದ ಸಮಯದಲ್ಲಿ ಪಟಾಕಿಗಳನ್ನು ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ಸಿಡಿಸಬೇಕು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯುವರು 14 ದಿನಗಳ ಕಾಲ ಅಂದರೆ, ದೀಪಾವಳಿ ಹಬ್ಬ ಆರಂಭವಾಗುವ 7 ದಿನಗಳ ಮೊದಲು ಮತ್ತು ದೀಪಾವಳಿ ಹಬ್ಬದ ನಂತರ 7 ದಿನಗಳು ಪಟಾಕಿ ಸಿಡಿಸುವುದರ ಬಗ್ಗೆ ಮೇಲ್ವಿಚಾರಣೆ ಮಾಡಬೇಕು.
ಎಲ್ಲ ಮಹಾನಗರ ಪಾಲಿಕೆಗಳು, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯತ್, ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ಪಟಾಕಿಗಳನ್ನು ಸಾಮೂಹಿಕವಾಗಿ ಸಿಡಿಸುವ ಸಾಧ್ಯತೆ ಬಗ್ಗೆ ಪರಿಶೀಲಿಸುವಂತೆ ಸೂಚಿಸಲಾಗಿದೆ.
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು Petroleum & Explosives Safety Organisation(PESO) ಸುಪ್ರೀಂಕೋರ್ಟ್ ಅ.23 ಹಾಗೂ 31ರಂದು ನೀಡಿರುವ ಆದೇಶವನ್ನು ಪಾಲಿಸುವುದಕ್ಕೆ ಸೂಕ್ತ ಸಹಕಾರ ನೀಡುವಂತೆ ಸೂಚಿಸಲಾಗಿದೆ.
ಎಲ್ಲ ಇಲಾಖೆಗಳು ಪ್ರಮುಖವಾಗಿ ಪೊಲೀಸ್ ಇಲಾಖೆಯು ಪಟಾಕಿ ಸಿಡಿತ ಪ್ರಕ್ರಿಯೆಯು ನಿಗದಿತ ಅವಧಿಯಲ್ಲಿ ನಡೆಯುವಂತೆ ನೋಡಿಕೊಳ್ಳುವುದು. ನಿಷೇಧಿತ ಸ್ಫೋಟಕ ಪಟಾಕಿಗಳ ಮಾರಾಟವನ್ನು ತಡೆಗಟ್ಟಲು ಕ್ರಮ ಕೈಗೊಳ್ಳುವುದು, ತಪ್ಪಿದಲ್ಲಿ ಸಂಬಂಧಿಸಿದ ಠಾಣಾಧಿಕಾರಿಗಳನ್ನು, ನ್ಯಾಯಾಲಯದ ಉಲ್ಲಂಘನೆಗಾಗಿ ತಪ್ಪಿತಸ್ಥರೆಂದು ನಿರ್ಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಒಳಾಡಳಿತ ಇಲಾಖೆ(ಕಾನೂನು ಮತ್ತು ಸುವ್ಯವಸ್ಥೆ)ಯ ಸರಕಾರದ ಅಧೀನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದಾರೆ.







