ಅಕ್ರಮ ವಲಸೆಯಿಂದ ಅಮೆರಿಕಕ್ಕೆ ವಾರ್ಷಿಕ 100 ಬಿಲಿಯನ್ ಡಾಲರ್ ನಷ್ಟ: ಟ್ರಂಪ್

ವಾಶಿಂಗ್ಟನ್,ನ.3: ವಲಸಿಗರು ಅಮೆರಿಕವನ್ನು ಪ್ರವೇಶಿಸಲು ಸುಲಭವಾಗಲು ತೆರೆದ ಗಡಿ ನೀತಿಯನ್ನು ರೂಪಿಸಬೇಕು ಎಂಬ ಡೆಮಾಕ್ರಾಟಿಕ್ ಪಕ್ಷದ ಆಗ್ರಹವನ್ನು ಕಟುವಾಗಿ ಖಂಡಿಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಕ್ರಮ ವಲಸೆಯಿಂದ ಅಮೆರಿಕದ ತೆರಿಗೆದಾರರ ವಾರ್ಷಿಕ ನೂರು ಬಿಲಿಯನ್ ಡಾಲರ್ ಪೋಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಎಲ್. ಸಾಲ್ವಡೊರ್, ಹೊಂಡುರಸ್ ಮತ್ತು ಗ್ವಾಟೆಮಾಲಾದ ಸುಮಾರು 5,000ದಿಂದ 7,000 ಮಂದಿ ಮೆಕ್ಸಿಕೊಗೆ ತಾಗಿಕೊಂಡಿರುವ ಅಮೆರಿಕದ ದಕ್ಷಿಣ ಗಡಿಯಲ್ಲಿ ಸೇರಿರುವ ಹಿನ್ನೆಲೆಯಲ್ಲಿ ಟ್ರಂಪ್ ಈ ಹೇಳಿಕೆಯನ್ನು ನೀಡಿದ್ದಾರೆ.
ಅಕ್ರಮ ವಲಸಿಗರನ್ನು ತಡೆಯಲು ನಿಯೋಜಿಸಲಾಗಿರುವ ಯೋಧರು ವಲಸಿಗರ ಮೇಲೆ ಗುಂಡು ಹಾರಿಸುವುದಿಲ್ಲ. ಆದರೆ ಅವರು ಕಲ್ಲೆಸೆದರೆ ಖಂಡಿತವಾಗಿಯೂ ಅವರನ್ನು ಬಂಧಿಸಲಿದ್ದಾರೆ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.
ಅಕ್ರಮ ವಲಸಿಗರಿಂದ ಅಮೆರಿಕಕ್ಕೆ ಆರ್ಥಿಕ ನಷ್ಟ ಉಂಟಾಗುತ್ತಿದೆ ಎಂದು ದೂರುವ ಜೊತೆಗೆ ಡೆಮಾಕ್ರಾಟಿಕ್ ಪಕ್ಷದ ವಲಸೆ ನೀತಿಗಳು ಅಮೆರಿಕದ ಖಜಾನೆಯನ್ನು ಖಾಲಿ ಮಾಡುವುದಷ್ಟೇ ಅಲ್ಲ ಸಮುದಾಯಗಳ ಮೇಲೂ ಅಪಾಯ ತಂದೊಡ್ಡಿದೆ ಎಂದು ಟ್ರಂಪ್ ಆರೋಪಿಸಿದ್ದಾರೆ. ಅಮೆರಿಕ ತಲುಪುವ ಶೇ.100 ಹೆರಾಯಿನ್ ದೇಶದ ದಕ್ಷಿಣದ ಗಡಿಯ ಮೂಲಕ ಪ್ರವೇಶಿಸುತ್ತದೆ. ಇನ್ನು ಶೇ.90ರಷ್ಟು ಕೊಕೇನ್, ದೇಶಾದ್ಯಂತ ಯುವಜನರ ಪ್ರಾಣ ಬಲಿಪಡೆದುಕೊಳ್ಳುತ್ತಿರುವ ಮಾರಣಾಂತಿಕ ಫೆಂಟಲೈಲ್ ಇತ್ಯಾದಿಗಳೂ ದಕ್ಷಿಣದ ಗಡಿಯ ಮೂಲಕ ಅಮೆರಿಕ ಪ್ರವೇಶಿಸುತ್ತದೆ ಎಂದು ಟ್ರಂಪ್ ತಿಳಿಸಿದ್ದಾರೆ.