ಅಮೆರಿಕ: ಯೋಗಾ ಸ್ಟುಡಿಯೊ ಶೂಟಿಂಗ್‌ಗೆ ಇಬ್ಬರು ಬಲಿ

ಫ್ಲೋರಿಡ,ನ.3: ಬಂದೂಕುಧಾರಿಯೊಬ್ಬ ಗುಂಡು ಹಾರಿಸಿ ಇಬ್ಬರನ್ನು ಹತ್ಯೆಗೈದು ಹಲವರನ್ನು ಗಾಯಗೊಳಿಸಿ ಕೊನೆಗೆ ತಾನೂ ಗುಂಡಿಟ್ಟು ಸಾವಿಗೆ ಶರಣಾದ ಘಟನೆ ಫ್ಲೋರಿಡದ ರಾಜಧಾನಿ ಟಲಹಸ್ಸಿಯ ಯೋಗ ಸ್ಟುಡಿಯೊದಲ್ಲಿ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಪೊಲೀಸರು ಸ್ಥಳಕ್ಕೆ ಧಾವಿಸುವ ವೇಳೆ ದಾಳಿಕೋರನು ಸಾವಿಗೆ ಶರಣಾಗಿದ್ದ. ಸ್ಥಳದಲ್ಲಿ ಅನೇಕರು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ಸಾಗಿಸಲಾದರೂ ಇಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಸ್ಟುಡಿಯೊ ಒಳಗಿನ ದೃಶ್ಯಗಳನ್ನು ಕಂಡಾಗ ಘಟನೆ ನಡೆದ ಸಮಯದಲ್ಲಿ ಅನೇಕರು ಕೇವಲ ತಮ್ಮನ್ನು ರಕ್ಷಿಸಲು ಯತ್ನಿಸಿದ್ದು ಮಾತ್ರವಲ್ಲದೆ ಇತರರನ್ನು ರಕ್ಷಿಸಲು ಪ್ರಯತ್ನಿಸಿರುವುದು ಕಂಡುಬರುತ್ತದೆ. ಇದು ಅವರ ಧೈರ್ಯಕ್ಕೆ ಪ್ರಮಾಣವಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸದ್ಯ ಗನರ್ವರ್ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಟಲಹಸ್ಸಿ ಮೇಯರ್ ಆ್ಯಂಡ್ರೂ ಗಿಲ್ಲಮ್ ತನ್ನ ಅಭಿಯಾನವನ್ನು ಅರ್ಧದಲ್ಲೇ ನಿಲ್ಲಿಸಿ ನಗರಕ್ಕೆ ಮರಳಿದ್ದಾರೆ. ಘಟನೆಯ ಕುರಿತು ಅವರು ಮಾಡಿರುವ ಟ್ವೀಟ್‌ನಲ್ಲಿ, ಯೋಗ ಸ್ಟುಡಿಯೊದಲ್ಲಿ ನಡೆದ ಗುಂಡಿನ ದಾಳಿಯ ಸಂದರ್ಭದಲ್ಲಿ ಕಾನೂನು ಜಾರಿ ಇಲಾಖೆಯ ಕ್ಷಿಪ್ರ ಪ್ರತಿಕ್ರಿಯೆಯನ್ನು ತಾನು ಶ್ಲಾಘಿಸುತ್ತೇನೆ ಎಂದು ತಿಳಿಸಿದ್ದಾರೆ.







