ಅಮೃತಸರ ದುರಂತ:ಕೊನೆಗೂ ತನಿಖೆ ನಡೆಸಲು ಒಪ್ಪಿಕೊಂಡ ರೈಲ್ವೆ ಇಲಾಖೆ

ಹೊಸದಿಲ್ಲಿ,ನ.3: ಅ.18ರಂದು ಇಲ್ಲಿ ದಸರೆಯ ಸಂದರ್ಭದಲ್ಲಿ ರೈಲ್ವೆ ಹಳಿಗಳ ಮೇಲೆ ನಿಂತು ರಾವಣ ದಹನವನ್ನು ವೀಕ್ಷಿಸುತ್ತಿದ್ದ ಗುಂಪಿನ ಮೇಲೆ ರೈಲು ಹರಿದು 60 ಜನರನ್ನು ಬಲಿ ಪಡೆದಿದ್ದ ದುರಂತದ ಕುರಿತು ಮುಖ್ಯ ರೈಲ್ವೆ ಸುರಕ್ಷತಾ ಆಯುಕ್ತ ಶೈಲೇಶ ಪಾಠಕ್ ಅವರು ನ.4ರಿಂದ ತನಿಖೆಯನ್ನು ಆರಂಭಿಸಲಿದ್ದಾರೆ ಎಂದು ಭಾರತೀಯ ರೈಲ್ವೆ ಶನಿವಾರ ತಿಳಿಸಿದೆ.
ಇದು ರೈಲ್ವೆಹಳಿಗಳ ಅತಿಕ್ರಮ ಪ್ರವೇಶವಾಗಿರುವುದರಿಂದ ಅವಘಡದ ಬಗ್ಗೆ ಯಾವುದೇ ತನಿಖೆಯನ್ನು ನಡೆಸುವುದಿಲ್ಲ ಎಂದು ಇಲಾಖೆಯು ಈ ಭೀಕರ ದುರ್ಘಟನೆ ಸಂಭವಿಸಿದ ಮರುದಿನ ಸ್ಪಷ್ಟಪಡಿಸಿತ್ತು.
ಅಮೃತಸರದ ರೈಲ್ವೆ ಕಾರ್ಯಾಗಾರದ ಆವರಣದಲ್ಲಿ ನ.5ರವರೆಗೆ ವಿಚಾರಣೆ ನಡೆಯಲಿದ್ದು,ಅಪಘಾತದ ಬಗ್ಗೆ ಮಾಹಿತಿ ಹೊಂದಿರುವವರು ಆಯುಕ್ತರ ಮುಂದೆ ಹೇಳಿಕೆಗಳನ್ನು ದಾಖಲಿಸುವಂತೆ ಇಲಾಖೆಯು ಆಹ್ವಾನಿಸಿದೆ.
ಅಮೃತಸರದ ಸಂಸದ ಗುರ್ಜೀತ್ ಸಿಂಗ್ ಔಜಲಾ ಅವರು ಅ.23ರಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರನ್ನು ಖುದ್ದಾಗಿ ಭೇಟಿಯಾಗಿ ಅಪಘಾತದ ಬಗ್ಗೆ ತನಿಖೆ ನಡೆಸುವಂತೆ ಕೋರಿಕೊಂಡಿದ್ದು,ಅದನ್ನು ಸಚಿವಾಲಯವು ಒಪ್ಪಿಕೊಂಡಿದೆ ಎಂದು ಇಲಾಖೆಯು ತಿಳಿಸಿದೆ.





