ಮೂಲಭೂತ ಸೌಕರ್ಯ ಕಲ್ಪಿಸಲು 20 ಕೋ.ರೂ. ಮಂಜೂರು: ಸಚಿವ ಕೆ.ಜೆ.ಜಾರ್ಜ್
ಬೈಕಂಪಾಡಿ ಕೈಗಾರಿಕಾ ವಲಯ

ಮಂಗಳೂರು, ನ.3: ಬೈಕಂಪಾಡಿ ಕೈಗಾರಿಕಾ ವಲಯದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು 20 ಕೋ.ರೂ. ಮಂಜೂರು ಮಾಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಕ್ಕರೆ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಕೆ.ಜೆ. ಜಾರ್ಜ್ ಹೇಳಿದರು.
ಬೈಕಂಪಾಡಿಯ ಕೆನರಾ ಸಣ್ಣ ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಅವರು ಸಂಘವು ಮೂಲಭೂತ ಅಭಿವೃದ್ಧಿಗಾಗಿ 59 ಕೋ.ರೂ.ನ ಬೇಡಿಕೆಯನ್ನು ಮುಂದಿಟ್ಟಿವೆ. ಈ ಹಿಂದಿನ ಸರಕಾರದಲ್ಲಿ ಬೃಹತ್ ಕೈಗಾರಿಕಾ ಸಚಿವರಾಗಿದ್ದ ಆರ್.ವಿ.ದೇಶಪಾಂಡೆ ಅವರು 10 ಕೋ.ರೂ. ಬಿಡುಗಡೆಗೊಳಿಸಿದ್ದಾರೆ. ಇದೀಗ ರಸ್ತೆ, ಒಳಚರಂಡಿ ಸಹಿತ ವಿವಿಧ ಅಭಿವೃದ್ಧಿಗಾಗಿ 20 ಕೋ.ರೂ. ಅನುದಾನ ಬಿಡುಗಡೆಗೊಳಿಸಲಾಗುವುದು ಎಂದರು.
ಪ್ಲಾಸ್ಟಿಕ್ ಪಾರ್ಕ್ ವಿಸ್ತೃತ ಯೋಜನಾ ವರದಿ ಸಲ್ಲಿಕೆ
ಗಂಜಿಮಠದಲ್ಲಿ 100 ಎಕರೆ ಜಮೀನಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಪ್ಲಾಸ್ಟಿಕ್ ಪಾರ್ಕ್‌ಗೆ ಸಂಬಂಧಿಸಿದಂತೆ ವಿಸ್ತೃತ ಯೋಜನಾ ವರದಿಯನ್ನು ವಾರದೊಳಗೆ ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಕೆ.ಜೆ.ಜಾರ್ಜ್ ನುಡಿದರು.
ಲಾಜಿಸ್ಟಿಕ್ ಪಾರ್ಕ್‌ಗೆ ಜಾಗ ಗುರುತು: ಲಾಜಿಸ್ಟಿಕ್ ಪಾರ್ಕ್‌ಗೆ ಎನ್‌ಎಂಪಿಟಿ 5 ಎಕರೆ ಜಾಗ ನೀಡುವುದಾಗಿ ಹೇಳಿದೆ. ಇನ್ನೂ 5 ಎಕರೆ ಜಾಗ ಬೇಕಾಗಿದ್ದು, ಜೆಸ್ಕೊ ಜಮೀನಿನಲ್ಲಿ ಸ್ಥಾಪಿಸಲು ಯಾರಾದರೂ ಮುಂದಾದರೆ ಅಲ್ಲೂ ಜಾಗ ನೀಡಲಾಗುವುದು ಎಂದು ಸಚಿವ ಜಾರ್ಜ್ ಹೇಳಿದರು.
ಜೆಸ್ಕೋ ಜಮೀನು ಮರುಸ್ವಾಧೀನ: 30 ವರ್ಷಗಳ ಹಿಂದೆ ಜೆಸ್ಕೊ ಕಂಪೆನಿಗಾಗಿ ಜಮೀನು ಸ್ವಾಧೀನ ಮಾಡಿದ್ದರೂ ಕೂಡಾ ಕಂಪೆನಿಯು ಯಾವುದೇ ಕೈಗಾರಿಕೆ ಆರಂಭಿಸದ ಕಾರಣ ಖಾಲಿ ಉಳಿದಿರುವ 543 ಎಕರೆ ಪ್ರದೇಶವನ್ನು ಇತರ ಉದ್ದೇಶಗಳಿಗೆ ಬಳಕೆ ಮಾಡಲು ಸರ್ಕಾರ ಉದ್ದೇಶಿಸಿದೆ. ಈ ಜಾಗದ ಪ್ರಕರಣವೀಗ ಹೈಕೋರ್ಟ್‌ನಲ್ಲಿದೆ. ಇದರಲ್ಲಿ 160 ಎಕರೆ ಜಾಗ ಕೋರಿ ಕೋಸ್ಟ್ ಗಾರ್ಡ್‌ನವರು ವಿವರವಾದ ಪ್ರಸ್ತಾವನೆ ಸಲ್ಲಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯವು ಅವರ ಕೋರಿಕೆಯಷ್ಟು ಜಾಗ ಹಂಚಿಕೆ ಮಾಡಲು ಒಪ್ಪಿಗೆ ಸೂಚಿಸಿದೆ. ಉಳಿದ 383 ಎಕರೆ ಜಾಗದಲ್ಲಿ ವಿವಿಧ ಬಗೆಯ ಕೈಗಾರಿಕೆಗಳನ್ನು ಸ್ಥಾಪಿಸಲು ಕೆನರಾ ಸಣ್ಣ ಕೈಗಾರಿಕಾ ಸಂಘ ಮನವಿ ಸಲ್ಲಿಸಿದ್ದು, ಖಾಸಗಿಯವರು ಈ ಕೈಗಾರಿಕೆಗಳನ್ನು ನಡೆಸಲು ಮುಂದೆ ಬರುವುದಾದರೆ ವಿವರವಾದ ಪ್ರಸ್ತಾವನೆಯನ್ನು ಸಲ್ಲಿಸಿದರೆ ನ್ಯಾಯಾಲಯದ ಮೂಲಕ ಆ ಜಾಗವನ್ನು ಹಂಚಿಕೆ ಮಾಡಲಾಗುವುದು ಎಂದು ಕೆ.ಜೆ. ಜಾರ್ಜ್ ಹೇಳಿದರು.
ಜೆಸ್ಕೊ ಭೂಮಿಯಲ್ಲಿ ರ್ಯಾಪಿಡ್ ಆ್ಯಕ್ಷನ್ ಫೋರ್ಸ್ (ಆರ್‌ಎಎಫ್) ಕೂಡ 50 ಎಕರೆ ಜಾಗದ ಬೇಡಿಕೆ ಸಲ್ಲಿಸಿದೆ. ಅವರಿಗೆ ಮುಡಿಪುವಿನಲ್ಲಿರುವ ಕೆನರಾ ಇಂಡಸ್ಟ್ರೀಸ್ ಭೂಮಿಯನ್ನೂ ತೋರಿಸುತ್ತೇವೆ. ಅವರಿಗೆ ಯಾವುದೇ ಬೇಕಾಗುವುದೋ ಅದನ್ನು ಪಡೆದುಕೊಳ್ಳಲು ಅವಕಾಶವಿದೆ ಎಂದರು.
ಅಭಿವೃದ್ಧಿ ಪ್ರಾಧಿಕಾರಕ್ಕೆ ಕಾನೂನು ತಿದ್ದುಪಡಿ: ಬೈಕಂಪಾಡಿ ಕೈಗಾರಿಕಾ ವಲಯ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಸರಕಾರ ಬದ್ಧವಾಗಿದೆ. ಮಂಗಳೂರು ಮಹಾನಗರ ಪಾಲಿಕೆಯು ಅಭಿವೃದ್ಧಿ ಪ್ರಾಧಿಕಾರ ರಚಿಸಲು ಒಪ್ಪಿಗೆ ನೀಡಿದರೂ ಕೂಡಾ ಕಾನೂನು ಸಮಸ್ಯೆ ಇದೆ. ಹಾಗಾಗಿ ಸಚಿವ ಸಂಪುಟದ ಮುಂದಿಟ್ಟು ಕಾನೂನಿಗೆ ತಿದ್ದುಪಡಿ ತಂದು ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗುವುದು ಎಂದು ಕೆ.ಜೆ.ಜಾರ್ಜ್ ಹೇಳಿದರು.
ಕೌಶಲ್ಯಾಭಿವೃದ್ಧಿಗೆ ಆದ್ಯತೆ: ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಕೈಗಾರಿಕೆಗಳು ಸ್ಥಳೀಯರಿಗೆ ಭರವಸೆ ನೀಡಿದಷ್ಟು ಉದ್ಯೋಗ ಕೊಟ್ಟಿಲ್ಲ ಎಂಬ ಬಗ್ಗೆ ದೂರುಗಳು ಬಂದಿದೆ. ಕೈಗಾರಿಕೋದ್ಯಮಿಗಳ ಪ್ರಮುಖರಲ್ಲಿ ಕೇಳಿದರೆ ಕೈಗಾರಿಕೆಗೆ ಅಗತ್ಯವುಳ್ಳ ವಿದ್ಯಾರ್ಹತೆಯುಳ್ಳವರ ಕೊರತೆ ಇದೆ ಎನ್ನುತ್ತಾರೆ.
ಹಾಗಾಗಿ ಸ್ಥಳೀಯರಿಗೆ ಕೈಗಾರಿಕೆಗಳಲ್ಲಿ ಉದ್ಯೋಗ ದೊರೆಯುವಂತಾಗಲು ಕೈಗಾರಿಕೆಗಳ ಬೇಡಿಕೆಗೆ ಅನುಗುಣವಾಗಿ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲು ಕ್ರಮ ವಹಿಸಲಾಗುವುದು ಎಂದು ಜಾರ್ಜ್ ಭರವಸೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಹರೀಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.







