ದೀಪಾವಳಿ ಶಬ್ದ-ನೋವುರಹಿತ ಉತ್ಸವವಾಗಿರಲಿ: ಡಾ.ಭುಜಂಗಶೆಟ್ಟಿ
ನಾರಾಯಣ ನೇತ್ರಾಲಯದಲ್ಲಿ ಗಾಯಾಳುಗಳಿಗೆ ಉಚಿತ ಚಿಕಿತ್ಸೆ
ಬೆಂಗಳೂರು, ನ. 3: ‘ಬೆಳಕಿನ ಹಬ್ಬ ದೀಪಾವಳಿಯನ್ನು ಶಬ್ದರಹಿತ ಹಾಗೂ ನೋವುರಹಿತ ಉತ್ಸವವನ್ನಾಗಿ ಆಚರಿಸೋಣ. ಪರಸರ ಮತ್ತು ಶಬ್ದಮಾಲಿನ್ಯಕ್ಕೆ ಕಾರಣವಾಗುವ ಪಟಾಕಿಗಳಿಂದ ದೂರವಿರೋಣ’ವೆಂದು ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ.ಭುಜಂಗಶೆಟ್ಟಿ ಮನವಿ ಮಾಡಿದ್ದಾರೆ.
ಪಟಾಕಿಗಳಿಂದ ಉಂಟಾಗುವ ಶಬ್ದಮಾಲಿನ್ಯವೂ ಅಷ್ಟೇ ಹಾನಿಕಾರಕ. ಮಾನವರು 60 ಡೆಸಿಬಲ್ ವರೆಗಿನ ಶಬ್ದವನ್ನು ತಡೆದುಕೊಳ್ಳಬಲ್ಲರು. ಅದನ್ನು ಮೀರಿದ ಶಬ್ದವು ತಾತ್ಕಾಲಿಕ ಶ್ರವಣ ನಷ್ಟವನ್ನುಂಟು ಮಾಡಬಲ್ಲದು. ಕೈ ಮತ್ತು ಮುಖಕ್ಕೆ ಸುಟ್ಟ ಗಾಯಗಳು ಸಾಮಾನ್ಯವಾಗಿದ್ದು ಗಂಭೀರ ಅಂಗವೈಕಲ್ಯಗಳಿಗೆ ಕಾರಣವಾಗುತ್ತವೆ ಎಂದು ಅವರು ಎಚ್ಚರಿಸಿದ್ದಾರೆ.
ಪ್ರತಿ ದೀಪಾವಳಿಯಲ್ಲೂ ಪಟಾಕಿಯಿಂದ ಗಾಯಗೊಂಡ ಜನರನ್ನು ಕಾಣುತ್ತೇವೆ. ಆ ಪೈಕಿ ಬಹುತೇಕ ಮಕ್ಕಳಿಗೆ ಹಾನಿಯುಂಟಾಗುತ್ತದೆ. ಬಹಳಷ್ಟು ಪ್ರಕರಣಗಳಲ್ಲಿ ಬಲಿಪಶುಗಳಾಗುವವರು ಹಾದಿಯಲ್ಲಿ ಸಂಚರಿಸುವ ಮುಗ್ಧರು ಅಥವಾ ಪಟಾಕಿ ಸಿಡಿಸುವುದನ್ನು ವೀಕ್ಷಿಸುತ್ತಿರುವ ಮಕ್ಕಳಾಗಿರುತ್ತಾರೆಂದು ಅವರು ಹೇಳಿದ್ದಾರೆ.
ಪಟಾಕಿಯಿಂದ ಗಾಯಗೊಂಡರೆ ಗಾಯ ಸಣ್ಣದಾಗಿದ್ದರೂ ಕೂಡಲೇ ನಿಮ್ಮ ಕಣ್ಣುಗಳನ್ನು ನೀರಿನಲ್ಲಿ ತೊಳೆಯಿರಿ ಮತ್ತು ಕೂಡಲೇ ಆಸ್ಪತ್ರೆಗೆ ಧಾವಿಸಿ, ಚಿಕಿತ್ಸೆ ಅಗತ್ಯವಾಗಿದ್ದು ರಾಸಾಯನಿಕಗಳು ನಿಮ್ಮ ಕಣ್ಣುಗಳ ಪದರಗಳ ಒಳಗಡೆ ಸೇರಿಕೊಂಡು ಪರಿಸ್ಥಿತಿ ಗಂಭೀರಗೊಳಿಸುವುದನ್ನು ತಪ್ಪಿಸಬಹುದು ಎಂದು ಅವರು ಸೂಚಿಸಿದ್ದಾರೆ.
ಹಿರಿಯರ ಮೇಲ್ವಿಚಾರಣೆಯಲ್ಲಿ ಮಾತ್ರ ಪಟಾಕಿ ಹಚ್ಚುವಂತೆ ನೋಡಿಕೊಳ್ಳಬೇಕು. ಕಿರಿದಾದ ಸ್ಥಳಗಳಲ್ಲಿ ಪೋಷಕರ ಮೇಲ್ವಿಚಾರಣೆಯಿಲ್ಲದೆ ಪಟಾಕಿ ಹಚ್ಚುವುದು ಮತ್ತು ರಸ್ತೆಗಳ ಮೇಲೆ ಪಟಾಕಿ ಹಚ್ಚುವಾಗ ಮೇಲ್ವಿಚಾರಣೆ ವಹಿಸದೆ ಇರುವುದು ಗಾಯಗಳ ಪ್ರಮಾಣ ಹೆಚ್ಚಾಗಲು ಕಾರಣವಾಗುತ್ತದೆ. ಪಟಾಕಿಗಳನ್ನು ಮಕ್ಕಳಿಗೆ ದೊರೆಯದಂತೆ ಸಂಗ್ರಹಿಸಿ ಮತ್ತು ಅವುಗಳನ್ನು ಪೂಜೆ ಅಥವಾ ಅಡುಗೆ ಮನೆಯಲ್ಲಿ ಸಂಗ್ರಹಿಸಿಡಬೇಡಿ ಎಂದು ಅವರು ಸಲಹೆ ಮಾಡಿದ್ದಾರೆ.
ಪಟಾಕಿ ಸುಡುವ ವೇಳೆ ಬೆಂಕಿಯ ಮೇಲೆ ಬಾಗದಿರಿ, ಬೆಂಕಿ ಹಚ್ಚಿದ ಪಟಾಕಿಗಳನ್ನು ಪರಸ್ಪರ ಎಸೆದಾಡಬೇಡಿ, ಕೈಗಳಲ್ಲಿ ಪಟಾಕಿ ಹಚ್ಚಿಕೊಂಡು ಅವುಗಳನ್ನು ಎಸೆಯಬೇಡಿ, ಏಕೆಂದರೆ ಅವು ಪಟಾಕಿ ಹೊತ್ತಿಸುವವರಿಗೆ ಮಾತ್ರವಲ್ಲದೆ ಸುತ್ತಮುತ್ತಲಿನ ಜನರಿಗೂ ತೊಂದರೆ ಉಂಟು ಮಾಡುತ್ತವೆ ಎಂದು ಅವರು ಸೂಚಿಸಿದ್ದಾರೆ.
ಯಾವುದೇ ಪಟಾಕಿಯ ಗಾಯಗಳಿಗೆ ಕೂಡಲೇ ಈ ಕೆಳಕಂಡ ಸಹಾಯವಾಣಿ ಸಂಖ್ಯೆಗಳಿಗೆ-99025 46046 ಮತ್ತು 99028 21128ಕ್ಕೆ ಕರೆ ಮಾಡಬಹುದು. ರಾಜಾಜಿನಗರ, ಎಲೆಕ್ಟ್ರಾನಿಕ್ ಸಿಟಿ, ಬನ್ನೇರುಘಟ್ಟ ರಸ್ತೆ ಸೇರಿದಂತೆ ನಾರಾಯಣ ನೇತ್ರಾಲಯದಲ್ಲಿ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







