ಜನರ-ಪಾಲಿಕೆ ಸಹಯೋಗದಿಂದ ಸುಸ್ಥಿರ ನಗರ ನಿರ್ಮಾಣ ಸಾಧ್ಯ: ಮೇಯರ್ ಗಂಗಾಂಬಿಕೆ

ಬೆಂಗಳೂರು, ನ.3 : ನಗರ ವಾಸಿಗಳು ಬಿಬಿಎಂಪಿಯೊಂದಿಗೆ ಜೊತೆಗೂಡಿ ಕೆಲಸ ಮಾಡಿದಾಗಲೇ ಸುಸ್ಥಿರ ಬೆಂಗಳೂರು ನಗರ ನಿರ್ಮಾಣ ಸಾಧ್ಯ ಎಂದು ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಹೇಳಿದ್ದಾರೆ.
ಶನಿವಾರ ನಗರದ ಅಂಬೇಡ್ಕರ್ ಭವನದಲ್ಲಿ ಬೆಂಗಳೂರು ಅಪಾರ್ಟ್‌ಮೆಂಟ್ಸ್ ಫೆಡರೇಷನ್ ವತಿಯಿಂದ ಆಯೋಜಿಸಿದ್ದ ‘ಸುಸ್ಥಿರ ಬೆಂಗಳೂರು’ ಯೋಜನೆಗಳು ವಿಷಯ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೆಂಗಳೂರು ನಗರವನ್ನು ಅತ್ಯುತ್ತಮ, ಸ್ವಚ್ಛ, ಸುಂದರ ಹಾಗೂ ಅಭಿವೃದ್ಧಿಶೀಲ ನಗರವನ್ನಾಗಿ ಮಾಡುವಲ್ಲಿ ವಿಶೇಷವಾದ ಪಾತ್ರವನ್ನು ಅಪಾರ್ಟ್‌ಮೆಂಟ್‌ಗಳು ವಹಿಸುತ್ತವೆ ಎಂದರು.
ಹಿಂದಿನ ದಿನಗಳಲ್ಲಿ ಹಲವು ಪ್ರಮುಖ ಬಡಾವಣೆಗಳಲ್ಲಿನ ಅಪಾರ್ಟ್‌ಮೆಂಟ್‌ಗಳ ಜನರು ನಮಗೆ ಎಲ್ಲ ಸೌಲಭ್ಯಗಳು ಸಿಕ್ಕಿವೆ ಎಂದು ಯಾರೂ ಹೊರಗಡೆ ಬರುತ್ತಿರಲಿಲ್ಲ. ಆದರೆ, ಪರಿಸ್ಥಿತಿ ಬದಲಾದಂತೆ ಇದೀಗ ಎಲ್ಲರೂ ಸಂಘಟಿತರಾಗುತ್ತಿರುವುದು ಉತ್ತಮ ಬೆಳವಣಿಗೆ. ಅಪಾರ್ಟ್‌ಮೆಂಟ್‌ಗಳ ನಿವಾಸಿಗಳು ಹಾಗೂ ಪಾಲಿಕೆ ಜೊತೆ ಜೊತೆಗೆ ಕೆಲಸ ಮಾಡಿದರೆ ಕಸ ಸಂಸ್ಕರಣೆ ಸೇರಿದಂತೆ ಹಲವು ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ ಎಂದು ಹೇಳಿದರು.
ನಗರದಲ್ಲಿ 29 ಲಕ್ಷ ಮನೆಗಳಿದ್ದು, 1.30 ಕೋಟಿ ಜನಸಂಖ್ಯೆಯಿದೆ. ಹೀಗಾಗಿ, ದಿನದಿಂದ ದಿನಕ್ಕೆ ಎಲ್ಲ ರೀತಿಯ ಸಮಸ್ಯೆಗಳು ಅಧಿಕವಾಗುತ್ತಿವೆ. ಜನರ ಹೊಂದಾಣಿಕೆ ಕೊರತೆಯಿಂದಲೂ ಸಮಸ್ಯೆಗಳು ಜಟಿಲವಾಗುತ್ತಿವೆ. ಹೀಗಾಗಿ, ನಗರ ವಾಸಿಗಳು ಪಾಲಿಕೆಯಲ್ಲಿನ ಏನೇ ಸಮಸ್ಯೆಯಿದ್ದರೂ ನೇರವಾಗಿ ನನ್ನನ್ನು ಸಂಪರ್ಕ ಮಾಡಬಹುದು. ಪರಸ್ಪರ ಹೊಂದಾಣಿಕೆ ಮೂಲಕ ನಗರ ನಿರ್ಮಾಣ ಮಾಡಲು ಮುಂದಾಗೋಣ ಎಂದು ತಿಳಿಸಿದರು.
ಫೆಡರೇಷನ್‌ನ ರವಿಚಂದನ್ ಮಾತನಾಡಿ, ನಗರದಲ್ಲಿ ತ್ಯಾಜ್ಯ ಸಂಸ್ಕರಣೆಗಾಗಿ ಸರಕಾರ ಹಲವು ವಿಭಿನ್ನವಾದ ಪ್ರೋತ್ಸಾಹದಾಯಕ ಕಾರ್ಯಕ್ರಮಗಳನ್ನು ರೂಪಿಸಬೇಕು. ತ್ಯಾಜ್ಯ ವಿಲೇವಾರಿಗಾಗಿ ಸುಲಭ ಮಾರ್ಗಗಳನ್ನು ಆಯ್ದುಕೊಂಡು, ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವಂತಾಗಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಫೆಡರೇಷನ್ ಸದಸ್ಯ ಶ್ರೀಕಾಂತ್ ಉಪಸ್ಥಿತರಿದ್ದರು.







