ಮಾರ್ಗೆನಲ್ ಕೋ ಆಪರೇಟಿವ್ ಸೊಸೈಟಿಯಿಂದ 300 ಕೋಟಿ ವಂಚನೆ: ಡಾ.ಸಮೀರ್ ಪಾಷಾ
ಬೆಂಗಳೂರು, ಸೆ.29: ಹೆಚ್ಚು ಲಾಭ ನೀಡುವ ಭರವಸೆ ನೀಡಿ ಮಾರ್ಗೆನಲ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್‌ನವರು ಸುಮಾರು 8 ಸಾವಿರ ಹೂಡಿಕೆದಾರರಿಗೆ 300 ಕೋಟಿ ರೂ.ಗಳನ್ನು ವಂಚಿಸಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಡಾ.ಸಮೀರ್ ಪಾಷಾ ಆರೋಪಿಸಿದರು.
ಶನಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹಕಾರ ಸಂಘಗಳ ರಿಜಿಸ್ಟ್ರಾರ್ ಹಾಗೂ ಆರ್‌ಬಿಐನಿಂದ ಅನುಮತಿ ಪಡೆದಿರುವುದಾಗಿ ನಮ್ಮನ್ನು ನಂಬಿಸಿ ದಾಖಲೆಗಳನ್ನು ತೋರಿಸಿ ಈಗ ಏಕಾಏಕಿ ಸೆ.14ರಂದು ಎಚ್‌ಬಿಆರ್ ಲೇಔಟ್‌ನಲ್ಲಿದ್ದ ಕಚೇರಿಯನ್ನು ಮುಚ್ಚಿ ಪರಾರಿಯಾಗಿದ್ದಾರೆ ಎಂದರು.
ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಮಾರ್ಗೆನಲ್ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇರ್ಫಾನ್ ಪಾಷ, ನಿರ್ದೇಶಕಿ ಮಖ್ದೂಮಾ ಫಾತಿಮಾ, ವ್ಯವಸ್ಥಾಪಕ ಅಝೀಝ್ ಖಾನ್ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ. ಇಂತಹ ನಕಲಿ ಸಂಸ್ಥೆಗಳು, ಕಂಪೆನಿಗಳ ವಿರುದ್ಧ ಸರಕಾರ ಉನ್ನತ ಮಟ್ಟದ ತನಿಖೆ ನಡೆಸುವ ಅಗತ್ಯವಿದೆ ಎಂದು ಅವರು ಆಗ್ರಹಿಸಿದರು.
ಬೆಂಗಳೂರು ನಗರ ಮತ್ತು ರಾಜ್ಯದ ಅನೇಕ ಭಾಗಗಳಲ್ಲಿ ಈ ರೀತಿಯ ಸಂಸ್ಥೆಗಳು ತಲೆ ಎತ್ತುತ್ತಿವೆ. ಶೇ.9ರಷ್ಟು ಲಾಭ ನೀಡುವುದಾಗಿ ಆಮಿಷವೊಡ್ಡಿ ಸಾರ್ವಜನಿಕರಿಂದ ಹಣ ಕಟ್ಟಿಸಿಕೊಳ್ಳುತ್ತಾರೆ. ಒಂದೆರೆಡು ತಿಂಗಳು ಸರಿಯಾಗಿ ಹಣ ನೀಡಿ, ನಂತರ ಸತಾಯಿಸುತ್ತಾರೆ ಎಂದು ಹೇಳಿದರು.
ಹೂಡಿಕೆದಾರರಿಗೆ ನಕಲಿ ಗುರುತಿನ ಚೀಟಿ, ಕರಾರು ಪತ್ರ ಮತ್ತಿತರ ದಾಖಲೆಗಳನ್ನು ತೋರಿಸಿ ಹಣವನ್ನು ಹೂಡಿಕೆ ಮಾಡಿಕೊಳ್ಳಲಾಗುತ್ತದೆ. ಅಧಿಕೃತವಾದ ಯಾವುದೇ ಪರವಾನಿಗೆ ಇಲ್ಲದೆ, ನೋಂದಣಿಯೂ ಇಲ್ಲದೆ, ಹೂಡಿಕೆದಾರರಿಗೆ ಭದ್ರತೆ ಮತ್ತು ಅಧಿಕಾರ ಪತ್ರವನ್ನು ನೀಡುವುದಾಗಿ ನಂಬಿಸಿ ವಂಚಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಸಾರ್ವಜನಿಕರು ಯಾವುದೇ ಸಂಸ್ಥೆಯಲ್ಲಿ ಹಣ ಹೂಡುವುದಕ್ಕೆ ಮುಂಚಿತವಾಗಿ ಆ ಸಂಸ್ಥೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೂಲಂಕಷವಾಗಿ ಪರಿಶೀಲಿಸಿ ಅದರ ಅಧಿಕೃತ ದಾಖಲೆಗಳನ್ನು ನೋಡಿ ನಂತರ ಹಣ ಹೂಡಿಕೆ ಮಾಡುವುದು ಉತ್ತಮ. ಒಂದು ವೇಳೆ ನಿಮಗೆ ಯಾವುದಾದರೂ ಸಂಸ್ಥೆಯ ಬಗ್ಗೆ ಅನುಮಾನವಿದ್ದಲ್ಲಿ ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು, ಇಲಾಖೆ ಅಥವಾ ಪೊಲೀಸರಿಗೆ ವಿಷಯವನ್ನು ತಿಳಿಸಿ ಎಂದು ಡಾ.ಸಮೀರ್ ಪಾಷಾ ಮನವಿ ಮಾಡಿದರು.







