ನ.10-11: ಕಿದುವಿನಲ್ಲಿ ಕೃಷಿ ಮೇಳ-ಕೃಷಿ ಪ್ರದರ್ಶನ
ಮಂಗಳೂರು, ನ.3: ಐಸಿಎಆರ್(ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ) ಕಾಸರಗೋಡು, ಸಿಪಿಸಿಆರ್‌ಐ ಸಂಶೋಧನಾ ಸಂಸ್ಥೆ ಕಿದು ಸಹಿತ ವಿವಿಧ ಸಂಸ್ಥೆಗಳ ವತಿಯಿಂದ ನ.10 ಹಾಗೂ 11ರಂದು ಕಿದುವಿನ ಸಿಪಿಸಿಆರ್‌ಐ ಸಂಶೋಧನಾ ಸಂಸ್ಥೆಯಲ್ಲಿ ಕೃಷಿ ಮೇಳ ಹಾಗೂ ಕೃಷಿ ಪ್ರದರ್ಶನ ನಡೆಯಲಿದೆ ಎಂದು ಐಸಿಎಆರ್ ನಿರ್ದೇಶಕ ಡಾ.ಪಿ. ಚೌಡಪ್ಪ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಅವರು ಇತ್ತೀಚಿನ ವರ್ಷಗಳಲ್ಲಿ ಭಾರತದ ಕೃಷಿ ಕ್ಷೇತ್ರದಲ್ಲಾಗುತ್ತಿರುವ ಬದಲಾವಣೆಗಳನ್ನು ಪರಿಗಣಿಸಿ ಮತ್ತು ಕೇಂದ್ರ ಸರಕಾರದ ಆಶಯದಂತೆ 2022ರೊಳಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶದಿಂದ ಕೃಷಿ ಸಂಬಂಧಿತ ನೂತನ ಆವಿಷ್ಕಾರಗಳ, ತಂತ್ರಜ್ಞಾನಗಳ ಮತ್ತು ಸಂಶೋಧನೆಗಳ ಬಗ್ಗೆ ಅರಿವು ಮೂಡಿಸುವ ವಿಚಾರದಲ್ಲಿ ಈ ಕೃಷಿ ಮೇಳವನ್ನು ಹಮ್ಮಿಕೊಳ್ಳಲಾಗುತ್ತಿದೆ. ಎರಡು ದಿನಗಳ ಈ ಕೃಷಿ ಮೇಳದಲ್ಲಿ ಹಲವು ವಿಷಯಗಳ ಮೇಲೆ ವಿಚಾರ ಸಂಕಿರಣ ನಡೆಯಲಿದೆ ಎಂದರು.
ನ.10ರಂದು ಜೀವ ವೈವಿಧ್ಯತೆಯ ಸಂರಕ್ಷಣೆ ಹಾಗೂ ಬೆಳೆಗಳ ವೈವಿಧ್ಯತೆಯ ಪ್ರದರ್ಶನ, ತೋಟದ ಬೆಳೆಗಳಲ್ಲಿ ವೌಲ್ಯವರ್ಧನೆ ಹಾಗೂ ಉದ್ಯಮಗಳ ಅಭಿವೃದ್ಧಿ, ನ.11ರಂದು ತೋಟದ ಬೆಳೆಗಳಲ್ಲಿ ಮಣ್ಣು ಹಾಗೂ ನೀರು ಸಂರಕ್ಷಣಾ ತಂತ್ರಜ್ಞಾನಗಳು, ತೋಟದ ಬೆಳೆಗಳ ಉತ್ಪಾದನೆ ಹಾಗೂ ಸಂರಕ್ಷಣಾ ತಂತ್ರಜ್ಞಾನಗಳು, ತೋಟದ ಬೆಳೆಗಳಲ್ಲಿ ಸುಧಾರಿತ ತಳಿಗಳು ಹಾಗೂ ಉತ್ತಮ ಸಸಿಗಳ ತಯಾರಿಕೆ ಜತೆಗೆ ಬೆಳಗ್ಗೆ 10ರಿಂದ ಸಂಜೆ 7ರ ವರೆಗೆ ಕೃಷಿ ಪ್ರದರ್ಶನಗಳು ನಡೆಯಲಿದೆ.
ಅದಲ್ಲದೆ ಅಡಕೆ ಮರಕ್ಕೆ ನೆಲದಿಂದಲೇ ಔಷಧ ಸಿಂಪಡಿಸುವ ಯಂತ್ರ ಹಾಗೂ ಡ್ರೋಣ್ ಬಿಡುಗಡೆ ನಡೆಯಲಿದೆ. ಕೊಚ್ಚಿಯ ತೆಂಗು ಅಭಿವೃದ್ಧಿ ಮಂಡಳಿ ಈಗಾಗಲೇ ಡ್ರೋಣ್‌ಗೆ 50 ಲಕ್ಷ ರೂ ಧನ ಸಹಾಯ ನೀಡಿದೆ. ಈ ಡ್ರೋಣ್ ಮೂಲಕ ಅಡಕೆ, ತೆಂಗಿಗೆ ಔಷಧ ಸಿಂಪಡಣೆ ಹಾಗೂ ಅಡಕೆ, ತೆಂಗು ಮೇಲ್ಬಾಗದಲ್ಲಿ ಯಾವುದಾದರೂ ರೋಗ ಬಂದರೆ ಅದರ ಚಿತ್ರವನ್ನು ಡ್ರೋಣ್ ತೆಗೆದು ಕಂಪ್ಯೂಟರ್‌ಗೆ ಕೊಡುವ ಮೂಲಕ ರೋಗದ ಪತ್ತೆಗೆ ಸಹಕಾರಿಯಾಗಲಿದೆ. ಈ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹಾಗೂ ಧರ್ಮಸ್ಥಳದ ಧರ್ಮದರ್ಶಿ ಡಾ.ಡಿ. ವೀರೇಂದ್ರ ಹೆಗ್ಗಡೆ ಭಾಗವಹಿಸಲಿದ್ದಾರೆ. ಜತೆಗೆ ಸಂಸದರು, ಶಾಸಕರು, ಜಿಪಂ ಅಧ್ಯಕ್ಷರು, ತಾಪಂ ಅಧ್ಯಕ್ಷರ ಸಹಿತ ಸಾವಿರಾರು ರೈತರು ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ವಿಶ್ವದ ಐದು ತೆಂಗಿನ ಜೀನ್ ಬ್ಯಾಂಕ್‌ಗಳಲ್ಲಿ ಕಿದುವಿನಲ್ಲಿರುವ ತೆಂಗಿನ ಜೀನ್ ಬ್ಯಾಂಕ್ ಕೂಡ ಸೇರಿದೆ. ಥಾಯ್‌ಲ್ಯಾಂಡ್‌ನಲ್ಲಿ ನಡೆದ ಜೀನ್ ಆಡಿಟ್‌ನಲ್ಲಿ ಈಗಾಗಲೇ ದೇಶದ ಜೀನ್‌ಬ್ಯಾಂಕ್‌ನಲ್ಲಿ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. ಮುಖ್ಯವಾಗಿ ಇಂತಹ ಆಡಿಟ್‌ಗಳಲ್ಲಿ ಸಂಶೋಧನೆಗೆ ಬಳಕೆಯಾದ ಹಣವನ್ನು ನಿಜವಾಗಿಯೂ ವಿನಿಯೋಗ ಮಾಡಲಾಗಿದೆ ಎನ್ನುವ ಕುರಿತು ಮಾಹಿತಿ ಕಳೆ ಹಾಕಲಾಗುತ್ತದೆ ಎಂದರು.
ಅಡಕೆ ಆರೋಗ್ಯಕ್ಕೆ ಹಾನಿಕಾರಕವಲ್ಲ: ಅಡಕೆಯಿಂದ ಆರೋಗ್ಯದ ಮೇಲೆ ನೆಗೆಟಿವ್ ಪರಿಣಾಮ ಬೀಳುತ್ತದೆ ಎನ್ನುವ ಮಾತುಗಳು ಸರಿಯಲ್ಲ. ಜತೆಗೆ ಅಡಕೆಯ ಬಗ್ಗೆ ಅಪಪ್ರಚಾರವನ್ನು ಜಾಸ್ತಿ ಮಾಡಲಾಗುತ್ತಿದೆ. ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿರುವುದರಿಂದ ಈ ಕುರಿತು ಹೆಚ್ಚಿನ ವಿವರಣೆ ನೀಡುವುದಿಲ್ಲ. ಬದಲಾಗಿ ಈಗಾಗಲೇ ಸಿಪಿಸಿಆರ್‌ಐನಿಂದ ವೈಜ್ಞಾನಿಕ, ಕ್ಲಿನಿಕಲ್ ರಿಸರ್ಚ್‌ಗಳನ್ನು ಮಾಡಲಾಗುತ್ತಿದ್ದು, ಅಡಕೆ ಆರೋಗ್ಯಕ್ಕೆ ಒಳ್ಳೆಯದು ಎನ್ನುವ ವರದಿ ಸಿಕ್ಕಿದೆ. ಅಡಕೆಯ ಕುರಿತು ಸಂಶೋಧನೆಗಳು ನಡೆಯುತ್ತಲೇ ಇದೆ. ಮುಖ್ಯವಾಗಿ ಸೋಪ್, ಟೂತ್‌ಪೇಸ್ಟ್, ನೇಲ್ ಪಾಲಿಶ್‌ಗಳ ಜತೆಗೆ ಇನ್ನು ಹೆಚ್ಚಿನ ಅಡಕೆಯಿಂದ ಹೊಸ ಉತ್ಪನ್ನಗಳನ್ನು ಸಂಶೋಧನೆ ಮಾಡಲು ಇಬ್ಬರು ಹೊಸ ಯುವ ಸಂಶೋಧಕರನ್ನು ನೇಮಕ ಮಾಡಲಾಗಿದೆ ಎಂದರು.
ಅಡಕೆ ಮರವೇರುವ ತರಬೇತಿ: ಡಿ.5ರಂದು 5 ದಿನಗಳ ಕಾಲ ಸಿಪಿಸಿಆರ್‌ಐ, ಕ್ಯಾಂಪ್ಕೊ ಹಾಗೂ ಕೃಷಿ ವಿವಿ ಶಿವಮೊಗ್ಗದ ಜಂಟಿ ಆಶ್ರಯದಲ್ಲಿ ಯುವಕರಿಗೆ ಅಡಕೆ ಮರವೇರುವ ತರಬೇತಿ ನೀಡುವ ಕಾರ್ಯಾಗಾರ ನಡೆಯಲಿದೆ. ಈಗಾಗಲೇ ಅಡಕೆ ಮರವೇರುವ ಕಾರ್ಮಿಕರ ಕೊರತೆಯಿದೆ. ಈ ಕಾರಣದಿಂದ ಅಡಕೆ ಕೃಷಿಯಲ್ಲಿ ಮರವೇರುವ ಯುವಕರಿಗೆ ಆಸಕ್ತಿ ಮೂಡಿಸುವ ಕೆಲಸಕ್ಕೆ ಮುಂದಾಗುತ್ತಿದ್ದೇವೆ. ಆ ಮೂಲಕ ಯುವಕರಿಗೆ ಅಡಕೆ ಮರಕ್ಕೆ ಬರುವ ಕೀಟ, ರೋಗ ಮತ್ತು ಅದಕ್ಕೆ ಪರಿಹಾರ ಕಂಡುಕೊಳ್ಳುವ ವಿಧಾನದ ಕುರಿತು ಕೂಡ ಮಾಹಿತಿ, ಜಾಗೃತಿ ನೀಡುವ ಕೆಲಸವಾಗುತ್ತದೆ. ಗ್ರಾಮೀಣ ಭಾಗದಲ್ಲಿರುವ ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸುವ ಕೆಲಸಕ್ಕೆ ಈ ತರಬೇತಿ ಸಹಕಾರಿಯಾಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಾಜ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಕೆ. ಮುರಳೀಧರನ್ ಹಾಗೂ ಐಸಿಎಆರ್‌ನ ಅಧಿಕಾರಿ ಶ್ಯಾಂ ಪ್ರಸಾದ್ ಉಪಸ್ಥಿತರಿದ್ದರು.







