ದಬ್ಬಾಳಿಕೆ ಹೊರತು ‘ಸಹಮತ’ದ ಸಂಬಂಧವಲ್ಲ: ಪತ್ರಕರ್ತೆ
ಎಂ.ಜೆ. ಅಕ್ಬರ್ ವಿರುದ್ಧ ಅತ್ಯಾಚಾರ ಆರೋಪ

ಹೊಸದಿಲ್ಲಿ, ನ. 3: ಕೇಂದ್ರದ ಮಾಜಿ ಸಚಿವ ಎಂ.ಜೆ. ಅಕ್ಬರ್ ಅವರ ಪ್ರತಿಪಾದನೆ ನಿರಾಕರಿಸಿರುವ ಅಮೆರಿಕ ಮೂಲದ ಪತ್ರಕರ್ತೆ ಪಲ್ಲವಿ ಗೊಗೊಯಿ, ದಬ್ಬಾಳಿಕೆ ಆಧರಿತ ಸಂಬಂಧ ಹಾಗೂ ಅಧಿಕಾರದ ದುರುಪಯೋಗ ‘ಸಹಮತ’ ಎಂದು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.
‘ಏಶ್ಯನ್ ಏಜ್’ನ ಮಾಜಿ ಪ್ರಧಾನ ಸಂಪಾದಕರಾಗಿದ್ದ ಎಂ.ಜೆ. ಅಕ್ಬರ್ ಕುರಿತು ತನ್ನ ಲೇಖನದಲ್ಲಿ ಮಾಡಿದ ಆರೋಪದ ಪ್ರತಿ ಪದಕ್ಕೂ ತಾನು ಬದ್ದಳಾಗಿದ್ದೇನೆ ಎಂದು ಪಲ್ಲವಿ ಗೊಗೊಯಿ ಹೇಳಿದ್ದಾರೆ. ತನ್ನ ಹಾಗೂ ಇತರ ಮಹಿಳೆಯರ ಮೇಲೆ ನಡೆಸಿದ ಲೈಂಗಿಕ ದೌರ್ಜನ್ಯ ಒಪ್ಪಿಕೊಳ್ಳುವ ಬದಲು ಎಂ.ಜೆ. ಅಕ್ಬರ್ ಅವರು ‘ಸಹಮತದ ಸಂಬಂಧ’ ಎಂದು ನುಣುಚಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಸತ್ಯದ ಬಗ್ಗೆ ಮಾತನಾಡುವುದನ್ನು ತಾನು ಮುಂದುವರಿಸುತ್ತೇನೆ. ಅಕ್ಬರ್ ಅವರಿಂದ ಲೈಂಗಿಕ ಕಿರುಕುಳಕ್ಕೆ ಒಳಗಾದ ಇತರ ಮಹಿಳೆಯರು ಕೂಡ ಸತ್ಯ ಬಹಿರಂಗಪಡಿಸಲು ಮುಂದೆ ಬರಬೇಕು ಎಂದು ಅವರು ತಿಳಿಸಿದರು.
‘ವಾಷಿಂಗ್ಟನ್ ಪೋಸ್ಟ್’ನಲ್ಲಿ ನವೆಂಬರ್ 1ರಂದು ಪ್ರಕಟಿಸಿದ ಲೇಖನದಲ್ಲಿ ಪಲ್ಲವಿ ಗೊಗೊಯಿ, 1990ರಲ್ಲಿ ಅಕ್ಬರ್ ಅವರು ತನ್ನ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಆರೋಪಿಸಿದ್ದರು. ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು 20 ಮಹಿಳೆಯರು ಆರೋಪಿಸಿದ ಹಿನ್ನೆಲೆಯಲ್ಲಿ ಕೇಂದ್ರದ ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅಕ್ಬರ್ ಅವರು ಶುಕ್ರವಾರ ಪಲ್ಲವಿ ಗೊಗೊಯಿ ಮಾಡಿದ ಆರೋಪವನ್ನು ನಿರಾಕ ರಿಸಿದ್ದರು. ಅಲ್ಲದೆ ತಮ್ಮಿಬ್ಬರದ್ದು ಸಹಮತದ ಸಂಬಂಧ ಎಂದು ಪ್ರತಿಪಾದಿಸಿದ್ದರು.







