ಮಂಡ್ಯ ಲೋಕಸಭಾ ಉಪ ಚುನಾವಣೆಗೆ ನೀರಸ ಪ್ರತಿಕ್ರಿಯೆ

ಮಂಡ್ಯ, ನ.3: ಸಚಿವ ಸಿ.ಎಸ್.ಪುಟ್ಟರಾಜು ರಾಜೀನಾಮೆಯಿಂದ ತೆರವಾಗಿದ್ದ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಶನಿವಾರ ನಡೆದ ಉಪ ಚುನಾವಣೆಗೆ ಮತದಾರರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮೈಸೂರು ಜಿಲ್ಲೆ ಕೆ.ಆರ್.ನಗರ ಸೇರಿದಂತೆ ಒಟ್ಟು 8 ವಿಧಾನಸಭಾ ಕ್ಷೇತ್ರಗಳಲ್ಲೂ ಬೆಳಗ್ಗೆ 7 ರಿಂದ ಸಂಜೆ 6ರವರೆಗೆ ಶಾಂತಿಯುತ ಚುನಾವಣೆ ನಡೆಯಿತಾದರೂ, ಪ್ರತಿಕ್ರಿಯೆ ನೀರಸವಾಗಿತ್ತು.
ಮತಕೇಂದ್ರಗಳಲ್ಲಿ ಮತದಾರರ ಸಂಖ್ಯೆ ವಿರಳವಾಗಿತ್ತು. ಅಲ್ಲೊಬ್ಬ, ಇಲ್ಲೊಬ್ಬ ಮತದಾರರು ಕಾಣಿಸಿಕೊಂಡಿದ್ದು ಬಿಟ್ಟರೆ, ಬಹುತೇಕ ಮತಗಟ್ಟೆಗಳು ಸಿಬ್ಬಂದಿ ಹೊರತುಪಡಿಸಿ ಬಿಕೋ ಎನ್ನುತ್ತಿದ್ದವು. ನಿಗದಿತ ವೇಳೆಗೆ ಮತದಾನ ಪ್ರಕ್ರಿಯೆ ಆರಂಭವಾಯಿತಾದರೂ, ಸುಮಾರು ತಾಸಿನವರೆಗೆ ಬೆರಳಣಿಕೆಯ ಮತದಾರರಷ್ಟೇ ಮತಕೇಂದ್ರಗಳ ಕಡೆಗೆ ಆಗಮಿಸಿದರು. ಇದು ಸಂಜೆವರೆಗೂ ಹೀಗೆಯೇ ಮುಂದುವರಿಯಿತು.
ಮತಗಟ್ಟೆ ಆವರಣದಲ್ಲಿ ಈ ಹಿಂದಿನ ಸಾರ್ವತ್ರಿಕ ಚುನಾವಣೆಗಳಲ್ಲಿ ಜಮಾಯಿಸುತ್ತಿದ್ದ ವಿವಿಧ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಈ ಚುನಾವಣೆಯಲ್ಲಿ ಕಾಣಿಸಿಕೊಳ್ಳಲಿಲ್ಲ. ಕಾಣಿಸಿಕೊಂಡರೂ ಜೆಡಿಎಸ್‍ನ ಕೆಲವರು ಮಾತ್ರ. ಜೆಡಿಎಸ್ ಮೈತ್ರಿಗೆ ಆರಂಭದಲ್ಲೇ ಹಲವು ಕಾಂಗ್ರೆಸ್ ಮುಖಂಡು ಮತ್ತು ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದರು. ಅಂತೆಯೇ ಯಾವ ಮುಖಂಡರೂ ಮತಕೇಂದ್ರದ ಕಡೆ ಸುಳಿಯಲೇ ಇಲ್ಲ. ಕೆಲವು ಮತಕೇಂದ್ರಗಳಲ್ಲಿ ಮಾತ್ರ ಜೆಡಿಎಸ್ ಮುಖಂಡರು ಮತಹಾಕಲು ಆಗಮಿಸಿದ ಮತದಾರರಲ್ಲಿ ಎಲ್.ಆರ್.ಶಿವರಾಮೇಗೌಡ ಅವರಿಗೆ ಮತಹಾಕುವಂತೆ ಮನವಿ ಮಾಡುತ್ತಿದ್ದುದು ಕಂಡು ಬಂದಿತು. ಮಧ್ಯಾಹ್ನ ನಂತರ ಮತದಾನ ತುಸು ಚುರುಕುಗೊಂಡಿತು.
ಕೆಲವು ಬೇಡಿಕೆಗಳ ಈಡೇರಿಕೆಗೆ ಪಟ್ಟುಹಿಡಿದು ಮದ್ದೂರು ತಾಲೂಕಿನ ಕುದುರಗುಂಡಿ ಕಾಲನಿ ಮತ್ತು ಕೆ.ಆರ್.ಪೇಟೆ ತಾಲೂಕಿನ ಬಳ್ಳೇಕೆರೆ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದರು. ನಂತರ, ಅಧಿಕಾರಿಗಳು ಭರವಸೆ ಈಡೇರಿಸುವ ಭರವಸೆ ನಂತರ ತಮ್ಮ ಹಕ್ಕು ಚಲಾಯಿಸಿದರು.
ಹಲವು ಕಡೆ ಪಿಂಕ್ ಮತಗಟ್ಟೆಗಳನ್ನು ಸ್ಥಾಪಿಸಿದ್ದು, ವಿಶೇಷವಾಗಿ ಸಿಂಗರಿಸಲಾಗಿತ್ತು. ಅಲ್ಲಿಗೆ ಮಹಿಳಾ ಸಿಬ್ಬಂದಿಯನ್ನೇ ನೇಮಕ ಮಾಡಲಾಗಿತ್ತು. ವಿಕಲಚೇತನರಿಗೆ ಹಲವು ಮತಗಟ್ಟೆಗಳಲ್ಲಿ ವಾಹನ ಸೌಲಭ್ಯ ಒದಗಿಸಲಾಗಿತ್ತು.
ಮತ ಚಲಾಯಿಸಿದ ಗಣ್ಯರು: ಮಾಜಿ ಸಚಿವ ಅಂಬರೀಶ್, ಸಚಿವ ಡಿ.ಸಿ.ತಮ್ಮಣ್ಣ ದೊಡ್ಡರಸಿನಕೆರೆ ಮತಗಟ್ಟೆಯಲ್ಲಿ, ಸಚಿವ ಸಿ.ಎಸ್.ಪುಟ್ಟರಾಜು ಚಿನಕುರಳಿಯಲ್ಲಿ, ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ದಂಪತಿ ಇಜ್ಜಲಘಟ್ಟದಲ್ಲಿ, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ ನಾಗಮಂಗಲದಲ್ಲಿ, ಬಿಜೆಪಿ ಅಭ್ಯರ್ಥಿ ಡಾ.ಸಿದ್ದರಾಮಯ್ಯ ಯತ್ತಗದಹಳ್ಳಿ ಮತಗಟ್ಟೆಯಲ್ಲಿ ಮತ ಹಾಕಿದರು.
ಇನ್ನು ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಕೆ.ಸಿ.ನಾರಾಯಣಗೌಡ, ಕೆ.ಸುರೇಶ್‍ಗೌಡ, ಡಾ.ಕೆ.ಅನ್ನದಾನಿ, ಎಂ.ಶ್ರೀನಿವಾಸ್, ಮಾಜಿ ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ಕೆ.ಬಿ.ಚಂದ್ರಶೇಖರ್, ಎಚ್.ಡಿ.ಚೌಡಯ್ಯ, ಬಿ.ರಾಮಕೃಷ್ಣ, ಮಧು ಮಾದೇಗೌಡ, ಇತರ ಗಣ್ಯರು ಮತದಾನದಲ್ಲಿ ಪಾಲ್ಗೊಂಡಿದ್ದರು.
ರಮ್ಯಾ ಗೈರು: ಕಳೆದ ವಿಧಾನಸಭೆ, ನಗರಸಭೆ ಚುನಾವಣೆಯಲ್ಲೂ ಮತದಾನಕ್ಕೆ ಆಗಮಿಸದೆ ಅಭಿಮಾನಿಗಳ ಅಸಮಾಧಾನದಕ್ಕೆ ಗುರಿಯಾಗಿದ್ದ ಮಾಜಿ ಸಂಸದೆ ಹಾಗೂ ಎಐಸಿಸಿ ಸಾಮಾಜಿಕ ತಾಣದ ಮುಖ್ಯಸ್ಥೆ ರಮ್ಯಾ, ಈ ಉಪ ಚುನಾವಣೆಯಲ್ಲೂ ತನ್ನ ಹಕ್ಕು ಚಲಾಯಿಸಲಿಲ್ಲ.
ಮಂಡ್ಯ ಜಿಲ್ಲೆಯ ಮಂಡ್ಯ, ಮದ್ದೂರು, ಮೇಲುಕೋಟೆ, ನಾಗಮಂಗಲ, ಶ್ರೀರಂಗಪಟ್ಟಣ, ಮಳವಳ್ಳಿ, ಕೆ.ಆರ್.ಪೇಟೆ ಹಾಗೂ ಮೈಸೂರು ಜಿಲ್ಲೆಯ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರಗಳು ಮಂಡ್ಯ ಲೋಕಸಭಾ ವ್ಯಾಪ್ತಿಗೆ ಒಳಪಟ್ಟಿದ್ದು, 8,43,335 ಪುರುಷರು, 84,0971 ಮಹಿಳೆಯರು, 140 ಇತರೆ ಹಾಗೂ 676 ಸೇವಾ ಮತದಾರರು ಸೇರಿದಂತೆ ಒಟ್ಟು 16,84,446 ಮಂದಿ ಮತ ಚಲಾವಣೆಯ ಹಕ್ಕು ಹೊಂದಿದ್ದರು.
ಶೇ.52.63 ಮತದಾನ
ಇಂದಿನ ಚುನಾವಣೆಯಲ್ಲಿ ಶೇ.52.63ರಷ್ಟು ಮತದಾನವಾಗಿದೆ. ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು(ಶೇ.57.25) ಮತದಾನವಾಗಿದ್ದರೆ, ಕೆ.ಆರ್.ನಗರದಲ್ಲಿ ಅತಿ ಕಡಿಮೆ(46.87) ಮತದಾನವಾಗಿದೆ.
ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.47.11, ಮೇಲುಕೋಟೆಯಲ್ಲಿ ಶೇ.55.25, ಮಂಡ್ಯದಲ್ಲಿ ಶೇ.47.18. ಶ್ರೀರಂಗಪಟ್ಟಣದಲ್ಲಿ ಶೇ.56.05, ಕೆ.ಆರ್.ಪೇಟೆಯಲ್ಲಿ ಶೇ.55.25 ಹಾಗೂ ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಶೇ.56.30ರಷ್ಟು ಮತದಾನ ನಡೆದಿದೆ.







