ಬೆಂಗಳೂರು: ಹೆಚ್ಚುತ್ತಿರುವ ವಾಯು ಮಾಲಿನ್ಯಕ್ಕೆ ಕಾರಣವಾಗುತ್ತಿರುವ ಆಟೋಗಳು

ಬೆಂಗಳೂರು, ನ.3 : ನಗರದಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯಕ್ಕೆ ವಾಹನಗಳ ಪಾತ್ರ ಅಪಾರವಾದುದಾಗಿದೆ. ಅದರಲ್ಲಿಯೂ ಪ್ರತಿದಿನ 1200 ಟನ್ ಇಂಗಾಲ ಡೈಆಕ್ಸೆಡ್ ಹೊಸ ಹಾಕುತ್ತಿರುವ ಆಟೋಗಳದ್ದು ಅತಿಹೆಚ್ಚಿನ ಪಾಲಿದೆ.
ನಗರದಲ್ಲಿ 1.70 ಲಕ್ಷ ಆಟೋಗಳಿದ್ದು, ಅದರಲ್ಲಿ 24 ಸಾವಿರ ಆಟೋಗಳು ಟು-ಸ್ಟ್ರೋಕ್ ಆಟೋಗಳಿವೆ. ಇದರಿಂದ ಪ್ರತಿದಿನ ಸಾವಿರಕ್ಕೂ ಅಧಿಕ ಟನ್ ಅಷ್ಟು ಇಂಗಾಲ ಡೈಆಕ್ಸೆಡ್ ಹೊರ ಹಾಕುತ್ತಿರುವ ಆಟೋಗಳಿಂದ ವಾರ್ಷಿಕ 0.44 ದಶಲಕ್ಷದಷ್ಟು ಕಾರ್ಬನ್ ಉತ್ಪತ್ತಿಯಾಗುತ್ತಿದೆ. ಟು-ಸ್ಟ್ರೋಕ್ ಆಟೋಗಳಿಂದಲೇ 282 ಟನ್ ಕಾರ್ಬನ್ ಉತ್ಪತ್ತಿಯಾಗುತ್ತಿದೆ. ಅಲ್ಲದೆ, 0.1 ಟನ್ ನೈಟ್ರೋಜನ್ ಆಕ್ಸಿಡ್, 0.3 ಟನ್ ಪಿಎಂ 10(ಉಸಿರಾಡುವ ಸಂದರ್ಭದಲ್ಲಿ ದೇಹ ಸೇರುವ ದೂಳಿನ ಕಣ) ಹೊರ ಬರುತ್ತಿದೆ ಎಂದು ಅಂದಾಜಿಸಲಾಗಿದೆ.
ರಾಜ್ಯ ಸರಕಾರ ಮಾಲಿನ್ಯವನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಹಿಂದಿನ ವರ್ಷದಲ್ಲಿ ಟು-ಸ್ಟ್ರೋಕ್ ಆಟೋಗಳಿಗೆ 30 ಸಾವಿರ ಸಬ್ಸಿಡಿ ನೀಡಲಾಗುತ್ತದೆ ಎಂದು ಘೋಷಣೆ ಮಾಡಲಾಗಿತ್ತು. ಆದರೆ, ಸರಕಾರದ ಈ ಆದೇಶಕ್ಕೆ ಯಾರೊಬ್ಬರೂ ಬೆಲೆ ಕೊಡಲಿಲ್ಲ. ಅಲ್ಲದೆ, ಮುಂದಿನ ಐದು ವರ್ಷಗಳಲ್ಲಿ 1.50 ಲಕ್ಷ ಆಟೋಗಳು ಸೇರ್ಪಡೆ ಆಗಲಿವೆ ಎಂದು ಅಂದಾಜಿಸಲಾಗಿದ್ದು, ಇದರಿಂದ ಇನ್ನೂ 0.5 ದಶಲಕ್ಷ ಟನ್ ಕಾರ್ಬನ್ ಹೆಚ್ಚುವರಿಯಾಗಿ ಸೇರಲಿದೆ ಎನ್ನಲಾಗಿದೆ.
ಪರಿಹಾರಗಳು ಏನಿವೆ:
ಹಂತ-ಹಂತವಾಗಿ ಎಲ್ಲ ಆಟೋಗಳನ್ನೂ ಎಲಕ್ಟ್ರಿಕ್‌ಗೆ ಪರಿವರ್ತಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. ಇದರಿಂದ ವಾರ್ಷಿಕ 0.74 ದಶಲಕ್ಷ ಗ್ರಾಂ. ಎಲ್‌ಪಿಜಿ ಉಳಿತಾಯ ಮಾಡಬಹುದು. ಒಂದು ವೇಳೆ ಕೇವಲ ಶೇ.30ರಷ್ಟು ಎಲಕ್ಟ್ರಿಕ್‌ಗೆ ಪರಿವರ್ತನೆಯಾದರೆ, ಪ್ರತಿ ವರ್ಷ ಹೊರಸೂಸುವ ಕಾರ್ಬನ್ ಪ್ರಮಾಣ 0.20 ದಶಲಕ್ಷ ಟನ್ ಕಡಿಮೆ ಆಗಲಿದೆ. ಅದೇ ರೀತಿ, ಶೇ.60ರಷ್ಟು ಎಲಕ್ಟ್ರಿಕ್ ಆಟೋಗಳು ರಸ್ತೆಗಿಳಿದರೆ, 0.30 ದಶಲಕ್ಷ ಟನ್ ಕಾರ್ಬನ್ ಪ್ರಮಾಣ ಕಡಿಮೆಯಾಗುತ್ತದೆ. ಈಗಾಗಲೇ ಬಹುತೇಕ ಕಡೆಗಳಲ್ಲಿ ವಾಯುಮಾಲಿನ್ಯ ಪ್ರಮಾಣ ವಿಶ್ವಸಂಸ್ಥೆ ನಿಗದಿಪಡಿಸಿದ ಮಿತಿಗಿಂತ ದುಪ್ಪಟ್ಟು ಹಾಗೂ ರಾಷ್ಟ್ರೀಯಮಟ್ಟದ ಮಿತಿಯನ್ನೂ ಮೀರಿದೆ. ಆಟೋಗಳ ಹೆಚ್ಚಳಕ್ಕೆ ಕಡಿವಾಣ ಹಾಕಿದರೆ, ಅಲ್ಪಮಟ್ಟಿಗಾದರೂ ಅದು ತಗ್ಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.
ಆಟೋ ಚಾಲಕರಿಗೆ ಸಬ್ಸಿಡಿ, ತೆರಿಗೆ ವಿನಾಯ್ತಿ, ಪರವಾನಿಗೆ ಶುಲ್ಕ ಮನ್ನಾದಂತಹ ನೇರ ಸೌಲಭ್ಯಗಳನ್ನು ಸಾರಿಗೆ ಇಲಾಖೆ ಕಲ್ಪಿಸಬೇಕು. ಅದೇ ರೀತಿ, ಪ್ರತ್ಯೇಕ ನಿಲುಗಡೆಗೆ ಜಾಗ, ಎಲಕ್ಟ್ರಿಕ್ ಝೋನ್‌ಗಳು, ಚಾರ್ಜಿಂಗ್ ಸ್ಟೇಷನ್‌ಗಳು ಸೇರಿದಂತೆ ಮೂಲಸೌಕರ್ಯ ಕಲ್ಪಿಸಬೇಕು ಎಂದು ಸರಕಾರಕ್ಕೆ ಶಿಫಾರಸು ಮಾಡಲಾಗಿದೆ ಎನ್ನಲಾಗಿದೆ.
2017ರಲ್ಲಿ ಬ್ರಿಟಿಷ್ ಮೆಡಿಕಲ್ ಜರ್ನಲ್ ಲಾನ್ಸೆಟ್ ವರದಿ ಪ್ರಕಾರ ಮಾಲಿನ್ಯಕ್ಕೆ ಸಂಬಂಧಿಸಿದ ಸಾವಿನ ಪ್ರಕರಣಗಳಲ್ಲಿ ಭಾರತ ಉನ್ನತ ಸ್ಥಾನದಲ್ಲಿದೆ. 2015ರಲ್ಲಿ ವಿಶ್ವದಲ್ಲಿ ಮಾಲಿನ್ಯದಿಂದ 9 ದಶಲಕ್ಷ ಜನ ಸಾವನ್ನಪ್ಪಿದ್ದು, ಭಾರತದಲ್ಲಿ 2.5 ದಶಲಕ್ಷ ಮಂದಿ ಮಾಲಿನ್ಯದಿಂದ ಮರಣ ಹೊಂದಿದ್ದಾರೆ ಎಂದು ಉಲ್ಲೇಖಿತಗೊಂಡಿದೆ.
ಪರಿಸರದಿಂದ ಮಾಲಿನ್ಯ ನಿಯಂತ್ರಣ: ನಗರದಲ್ಲಿ ದಿನದಿಂದ ದಿನಕ್ಕೆ ಅಧಿಕವಾಗುತ್ತಿರುವ ಮಾಲಿನ್ಯ ನಿಯಂತ್ರಣಕ್ಕಾಗಿ ಹಾಗೂ ಕಾರ್ಬನ್ ಸ್ವೀಕರಿಸಿ ಶುದ್ಧ ಆಮ್ಲಜನಕ ಬಿಡುಗಡೆ ಮಾಡುವ ಸಲುವಾಗಿ ಅಪಾರವಾದ ಅರಣ್ಯವನ್ನು ಬೆಳೆಸಬೇಕಾದ ಅಗತ್ಯವಿದೆ ಎಂದು ಸಂಶೋಧನಾ ವರದಿಗಳು ಹೇಳಿವೆ.
ಆದರೆ, ನಗರದಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಮರಗಳನ್ನು ಕಡಿಯಲಾಗುತ್ತಿದೆ. ಇದರಿಂದಾಗಿ ಹೆಚ್ಚಾಗುತ್ತಿರುವ ಇಂಗಾಲ, ನೈಟ್ರೋಜನ್, ದೂಳಿನ ಕಣಗಳ ಸಮತೋಲನವನ್ನು ಕಾಪಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಕಲುಷಿತ ಗಾಳಿಯನ್ನು ಸೇವನೆ ಮಾಡುವುದು ಅನಿವಾರ್ಯವಾಗುತ್ತಿದೆ. ಅಲ್ಲದೆ, ವಿವಿಧ ಕಾಯಿಲೆಗಳಿಗೆ ತುತ್ತಾಗಿ ಮರಣ ಶಾಸನ ಬರೆಯುತ್ತಿದೆ.







