ಬೆಂಗಳೂರು: 'ಸಾವಿನ ಮನೆಯ ಕದವ ತಟ್ಟಿ' ಪುಸ್ತಕ ಲೋಕಾರ್ಪಣೆ
ಬೆಂಗಳೂರು, ನ.3: ಮಲೆಯಾಳಂ ಚಿತ್ರರಂಗದ ಹಾಸ್ಯ ನಟ, ಸಂಸದ ಇನ್ನೊಸೆಂಟ್ ಅವರು ಮಾರಣಾಂತಿಕ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದರೂ, ಪವಾಡವೆಂಬಂತೆ ಬದುಕಿದರು ಎಂದು ಮಾಜಿ ಸಚಿವೆ ಡಾ.ಲೀಲಾದೇವಿ ಆರ್.ಪ್ರಸಾದ್ ಇಂದಿಲ್ಲಿ ಹೇಳಿದರು.
ಶನಿವಾರ ನಗರದ ಕುಮಾರ ಕೃಪಾದ ಗಾಂಧಿ ಭವನದಲ್ಲಿ ಸ್ನೇಹ ಬುಕ್ ಹೌಸ್ ಏರ್ಪಡಿಸಿದ್ದ, ಮಾಯಾ ಬಿ.ನಾಯರ್ ಅವರು ಅನುವಾದಿಸಿರುವ ಸಂಸದ ಇನ್ನೊಸೆಂಟ್ ಅವರ ‘ಕ್ಯಾನ್ಸರ್ ವಾರ್ಡಿಲೆ ಚಿರಿ’ ಕೃತಿಯ ಕನ್ನಡನುವಾದ ‘ಸಾವಿನ ಮನೆಯ ಕದವ ತಟ್ಟಿ’ ಪುಸ್ತಕ ಬಿಡುಗಡೆ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು
ಸಿನಿಮಾ ರಂಗದಲ್ಲಿ ಹೆಸರು ಮಾಡಿರುವ ಇನ್ನೊಸೆಂಟ್ ಅವರು ಇದುವರೆಗೂ 600ಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ರೋಗ ಬಂದರೆ, ಯಾರು ಸಂತೋಷದಲ್ಲಿರಲು ಸಾಧ್ಯವಿಲ್ಲ. ಆದರೆ, ಇನ್ನೊಸೆಂಟ್ ಅವರು, ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದರೂ, ಸದಾ ನಗು ಮುಖದಲ್ಲಿರುತ್ತಿದ್ದರು ಎಂದು ಹೇಳಿದರು.
ದೇವರನ್ನು ಎಲ್ಲರೂ ನಂಬುತ್ತೇವೆ. ಆದರೆ, ಇನ್ನೊಸೆಂಟ್ ವೈದ್ಯರನ್ನೇ ದೇವರು ಎನ್ನುತ್ತಾರೆ. ವೈದ್ಯರಿಗೆ ಮತ್ತೊಂದು ಹೆಸರೇ ದೇವರು. ಬದುಕು ಕಾದಿರುವಾಗ ಸಾಯಲು ಹೇಗೆ ಸಾಧ್ಯ ಎಂದು ಯಮನನ್ನು ಪ್ರಶ್ನಿಸಿದ್ದಾರೆ ಇನ್ನೊಸೆಂಟ್. ಹೀಗೆ, ಹತ್ತಾರು ನೈಜ ಘಟನೆಗಳನ್ನು ಅವರು ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ ಎಂದರು.
ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಮರಾಠಿ ಪುಸ್ತಕವೊಂದನ್ನು ಕನ್ನಡ ಭಾಷೆಗೆ ಅನುವಾದ ಮಾಡಿದ್ದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಅನುವಾದ ಸುಲಭವಾದ ಕೆಲಸವಲ್ಲ. ಮಲಯಾಳಂ ಕೃತಿಯನ್ನು ನಾಯರ್ ಅವರು ಅನುವಾದಿಸಿ ಅದ್ಭುತ ಕಾರ್ಯ ಮಾಡಿದ್ದಾರೆ ಎಂದು ಪ್ರಶಂಸಿಸಿದರು.
ಸಂಸದ ಇನ್ನೊಸೆಂಟ್ ಮಾತನಾಡಿ, ದಾವಣಗೆರೆ ಸಾಬನೂರಿನಲ್ಲಿರುವ ಬೆಂಕಿಪಟ್ಟಣ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಕನ್ನಡ ಕಲಿತೆ. ಇದರಿಂದ ಸಿನೆಮಾ ರಂಗ ಪ್ರವೇಶ ಮಾಡಲು ಸುಲಭವಾಯಿತು ಎಂದು ನೆನಪು ಮಾಡಿದರು.
ವಿಜ್ಞಾನ ಲೇಖಕ ಪ್ರೊ.ಸುಧೀಂದ್ರ ಹಾಲ್ದೊಡ್ಡೇರಿ ಮಾತನಾಡಿ, ಬಡ-ಸಾಮಾನ್ಯ ವರ್ಗದ ಜನರಿಗೂ ಕ್ಯಾನ್ಸರ್ ಚಿಕಿತ್ಸೆ ದೊರೆಯುವಂತೆ ಆಗಬೇಕು. ಬಡತನದ ಕಾರಣದಿಂದ ಯಾರು ಸಾವನ್ನಪ್ಪಬಾರದೆಂದು ಇನ್ನೊಸೆಂಟ್ ತಮ್ಮ ಪುಸ್ತಕದಲ್ಲಿ ತಿಳಿಸಿರುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ಲೇಖಕ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ, ದೂರದರ್ಶನ ಸಹ ನಿರ್ದೇಶಕಿ ನಿರ್ಮಲಾ, ಕೆ.ಬಿ.ಪರಶಿವಪ್ಪ, ಅನುವಾದಕಿ ಮಾಯಾ ಬಿ.ನಾಯರ್ ಸೇರಿದಂತೆ ಮತ್ತಿತರಿದ್ದರು.







