ಶಾಂತಿಯುತ ಮತದಾನ, ಜನರಿಂದ ನೀರಸ ಪ್ರತಿಕ್ರಿಯೆ: ಬೈಂದೂರು ವಿಧಾನಸಭಾ ವ್ಯಾಪ್ತಿಯಲ್ಲಿ ಶೇ.59 ಮತದಾನ

ಉಡುಪಿ, ನ.3: ಶಿವಮೊಗ್ಗ ಲೋಕಸಭಾ ಉಪಚುನಾವಣೆ ಪ್ರಯುಕ್ತ ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಶನಿವಾರ ನಡೆದ ಮತದಾನ ಜನರ ನೀರಸ ಪ್ರತಿಕ್ರಿಯೆ ನಡುವೆ ಶಾಂತಿಯುತವಾಗಿ ಮುಕ್ತಾಯ ಗೊಂಡಿದ್ದು, ಶೇ.58.90ರಷ್ಟು ಮತದಾರರು ತಮ್ಮ ಮತಗಳನ್ನು ಚಲಾಯಿಸಿದ್ದಾರೆ.
ಶಿವಮೊಗ್ಗ ಲೋಕಸಭಾ ವ್ಯಾಪ್ತಿಗೆ ಸೇರಿದ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,21,972 ಮತದಾರರಿದ್ದು, ಇವರಲ್ಲಿ ಇಂದು 1,31,069 ಮಂದಿ ಮತಗಳನ್ನು ಚಲಾಯಿಸಿದ್ದಾರೆ ಎಂದು ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಯಾಗಿರುವ ಬೈಂದೂರು ತಹಶೀಲ್ದಾರ್ ಕಿರಣ್ ಗೌರಯ್ಯ ತಿಳಿಸಿದ್ದಾರೆ.
ಕ್ಷೇತ್ರದ 1,07,922 ಪುರುಷ ಮತದಾರರಲ್ಲಿ 58,502 ಮಂದಿ ಹಾಗೂ 1,14,050 ಮಹಿಳಾ ಮತದಾರರಲ್ಲಿ 72,567 ಮಂದಿ ತಮ್ಮ ಮತಗಳನ್ನು ಚಲಾಯಿಸಿದ್ದಾರೆ. ಕ್ಷೇತ್ರದ ಒಟ್ಟು 246 ಮತಗಟ್ಟೆಗಳಲ್ಲಿ ಇಂದು ಶಾಂತಿಯುತ ಮತದಾನ ನಡೆಯಿತು ಎಂದವರು ತಿಳಿಸಿದರು.
ಮತದಾನದ ವೇಳೆ ಯಾವುದೇ ಅಹಿತಕರ ಘಟನೆ ನಡೆದ ಬಗ್ಗೆ ವರದಿಗಳು ಬಂದಿಲ್ಲ. ಮತದಾನದ ಸಂದರ್ಭದಲ್ಲೂ ಯಾವುದೇ ಸಮಸ್ಯೆಗಳು ಎದುರಾ ಗಿಲ್ಲ. ಮತದಾನವು ಸಂಪೂರ್ಣ ಯಶಸ್ವಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಕೇವಲ 4-5 ತಿಂಗಳ ಅವಧಿ ಉಳಿದಿರುವ ಈ ಉಪ ಚುನಾವಣೆ ಕುರಿತಂತೆ ಸಾರ್ವಜನಿಕರಲ್ಲಿ ಹೆಚ್ಚಿನ ಉತ್ಸಾಹ ಕಂಡುಬರಲಿಲ್ಲ. ರೈತರು ತಮ್ಮ ಬೆಳೆ ಕಟಾವಿನಲ್ಲಿ ತೊಡಗಿದ್ದು, ಬಿಸಿಲು ಹೆಚ್ಚಿರುವ ಕಾರಣ ಮತಗಟ್ಟೆಗಳಲ್ಲಿ ಮತದಾರರ ಸಂಖ್ಯೆ ವಿರಳವಾಗಿತ್ತು. ಬೆಳಗ್ಗೆ 9 ಗಂಟೆಯವರೆಗೆ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ.11.47 ಮತದಾನ ನಡೆದಿದ್ದರೆ, 11 ಗಂಟೆಗೆ ಶೇ.25.10, ಒಂದು ಗಂಟೆಗೆ 37.77 ಹಾಗೂ 3:00 ಗಂಟೆಗೆ 45.35 ಮತದಾನವಾಗಿದ್ದರೆ, ನಾಲ್ಕು ಗಂಟೆಯ ಬಳಿಕ ಚುರುಕುಗೊಂಡ ಮತದಾನ ಪ್ರಕ್ರಿಯೆ 5 ಗಂಟೆ ಸುಮಾರಿಗೆ ಶೇ.55.88ರಷ್ಟು ಮತದಾನ ದಾಖಲಾಗಿತ್ತು.
ನಕ್ಸಲ್ ಬಾಧಿತ ತೊಂಬಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ 966 ಮತದಾರರಿದ್ದು 10:40ರ ಸುಮಾರಿಗೆ 278 ಮಂದಿ ಮತದಾನ ಮಾಡಿದ್ದರು, ಅತಿಸೂಕ್ಷ್ಮ ಮತಗಟ್ಟೆಗಳಾದ ಮಚ್ಚಟ್ಟು ಶಾಲೆಯಲ್ಲಿ 1263 ಮತದಾರರಿದ್ದು 364 ಮಂದಿ ಮತ ಚಲಾಯಿಸಿದ್ದರು. ಹಳ್ಳಿಹೊಳೆ ಗ್ರಾಮದ ಇರಿಗೆ ಶಾಲೆ ಮತಗಟ್ಟೆಯಲ್ಲಿ 521 ಮತದಾರರಿದ್ದು 262 ಮಂದಿ ತಮ್ಮ ಹಕ್ಕು ಚಲಾಯಿಸಿದ್ದರು. ನಕ್ಸಲ್ ಬಾಧಿತ ಪ್ರದೇಶಗಳ ಎಲ್ಲಾ ಮತಗಟ್ಟೆ ಗಳಿಗೆ ಮುಂಜಾಗ್ರತಾ ಕ್ರಮವಾಗಿ ಸಶಸ್ತ್ರ ಸೀಮಾ ಬಲದ 6ರಿಂದ 8 ಮ ಂದಿ ಯೋಧರನ್ನು ನಿಯೋಜಿಸಲಾಗಿತ್ತು.
ಉಳ್ಳೂರು 74 ಗ್ರಾಪಂನ ವಾರಾಹಿ ಕಳಿನಬೆಟ್ಟು ಕಿರಿಯ ಪ್ರಾಥಮಿಕ ಶಾಲೆ ಮತಗಟ್ಟೆಯಲ್ಲಿ ಒಟ್ಟು 942 ಮತದಾರರಲ್ಲಿ 289 ಮಂದಿ 11:30ರ ವೇಳೆಗೆ ಮತದಾನ ಮಾಡಿದ್ದರು, ಈ ಮತಗಟ್ಟೆಯಲ್ಲಿ 89 ವರ್ಷದ ಪುಟ್ಟ ಕುಲಾಲ್ ತಮ್ಮ ಮಗನ ನೆರವಿನಿಂದ ಬಂದು ಮತದಾನ ಮಾಡಿದರು.
ಹಳ್ಳಿಹೊಳೆಯ ಸುಳುಗೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ 933 ಮತದಾರರಿದ್ದು 12:30ರ ವೇಳೆಗೆ 380 ಮಂದಿ ಹಕ್ಕು ಚಲಾಯಿಸಿದ್ದು, ಹಳ್ಳಿಹೊಳೆ ಗ್ರಾಪಂ ವ್ಯಾಪ್ತಿಯ ಹಳ್ಳಿಹೊಳೆ ಗ್ರಾಮವನ್ನು ಬೈಂದೂರು ತಾಲೂಕಿಗೆ ಸೇರ್ಪಡೆ ಮಾಡಿರುವುದನ್ನು ವಿರೋಧಿಸಿ ಆ ಗ್ರಾಮದ ಕೆಲವರು ಮತದಾನದಲ್ಲಿ ಭಾಗವಹಿಸಿರಲಿಲ್ಲ.
ಮರವಂತೆ ಗ್ರಾಪಂ ಆವರಣದಲ್ಲಿ ತೆರೆಯಲಾಗಿದ್ದ ಪಿಂಕ್ ಮತಗಟ್ಟೆಯಲ್ಲಿ ಪೊಲೀಸ್ ಸಿಬ್ಬಂದಿ ಸೇರಿದಂತೆ ಮಹಿಳಾ ಸಿಬ್ಬಂದಿಗಳೇ ಕಾರ್ಯ ನಿರ್ವಹಿಸಿ ದರು. ಆಕರ್ಷಕವಾಗಿ ಪಿಂಕ್ ಬಣ್ಣದ ಬಟ್ಟೆ ಮತ್ತು ಬಲೂನ್‌ಗಳಿಂದ ಸಿಂಗರಿಸಿದ್ದ ಈ ಮತಗಟ್ಟೆಗೆ ಮಹಿಳಾ ಮತದಾರರು ಉತ್ಸಾಹದಿಂದ ಬಂದು ಮತ ಚಲಾಯಿಸಿದರು. ಮತದಾನ ಕೇಂದ್ರಕ್ಕೆ ಮಹಿಳೆಯರೊಂದಿಗೆ ಬರುವ ಮಕ್ಕಳಿಗೆ ಆಟವಾಡಲು ಚಿಣ್ಣರ ಅಂಗಳ ನಿರ್ಮಿಸಿ, ಅಲ್ಲಿ ಮಕ್ಕಳಿಗಾಗಿ ವಿವಿಧ ಆಟಿಕೆಗಳನ್ನು ಇಡಲಾಗಿತ್ತು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್ ಮತಗಟ್ಟೆಯ ಉಸ್ತುವಾರಿ ವಹಿಸಿ ಕೊಂಡಿದ್ದರು. ಈ ಮತಗಟ್ಟೆಯಲ್ಲಿ 940 ಮತದಾರರಲ್ಲಿ 473 ಮಂದಿ ಮಹಿಳಾ ಮತದಾರರಿದ್ದರು.
ತಲ್ಲೂರು ಗ್ರಾಪಂ ವ್ಯಾಪ್ತಿಯ ಉಪ್ಪಿನಕುದ್ರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾಗಿದ್ದ ವಿಧಾನಸಭಾ ಕ್ಷೇತ್ರದ ಏಕೈಕ ವಿಕಲ ಚೇತನ ಮತಗಟ್ಟೆಯಲ್ಲಿ, ವಿಕಲಚೇತನ ಸ್ನೇಹಿ ಟಾಯ್ಲೆಟ್, ರ್ಯಾಂಪ್, ವೀಲ್ ಚೇರ್, ವಾಕರ್, ವಾಕಿಂಗ್‌ಸ್ಟಿಕ್ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೇ ಇಲ್ಲಿನ ಅಶಕ್ತ ಹಿರಿಯ ಹಾಗೂ ವಿಕಲಚೇತನ ಮತದಾರರನ್ನು ಮತಗಟ್ಟೆಗೆ ಕರೆತಂದು ಮರಳಿ ಕರೆದೊಯ್ಯಲು ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿತ್ತು.
ಇಲ್ಲಿನ ಎರಡು ಮತಗಟ್ಟೆಗಳಲ್ಲಿ 33 ಮಂದಿ ವಿಕಲಚೇತನ ಮತದಾರರಲ್ಲಿ ಅಪರಾಹ್ನ 3:30 ವೇಳೆಗೆ 25 ಮಂದಿ ಮತ ಚಲಾಯಿದ್ದರು. ಜಿಲ್ಲಾ ವಿಕಲ ಚೇತನ ಸಬಲೀಕರಣ ಅಧಿಕಾರಿ ನಿರಂಜನ ಭಟ್ ಮತಗಟ್ಟೆಯ ಉಸ್ತುವಾರಿ ವಹಿಸಿಕೊಂಡಿದ್ದರು.
ಕೆರಾಡಿಯಲ್ಲಿ ಬುಡಕಟ್ಟು ಮತಕೇಂದ್ರ
ಬೈಂದೂರು ವಿಧಾನಸಭಾ ಕ್ಷೇತ್ರದ ಏಕೈಕ ಬುಡಕಟ್ಟು ಮತಕೇಂದ್ರವನ್ನು ಕೆರಾಡಿಯಲ್ಲಿ ತೆರೆಯಲಾಗಿತ್ತು. ಪರಿಶಿಷ್ಟ ಪಂಗಡಕ್ಕೆ ಸೇರಿದ ಕೊರಗರು ಹಾಗೂ ಮರಾಠಿ ನಾಯ್ಕ ಮತದಾರರೇ ಇಲ್ಲಿ ಅತ್ಯಧಿಕ ಸಂಖ್ಯೆಯಲ್ಲಿದ್ದು, ಅವರ ಕುಲಕಸುಬು ಸೇರಿದಂತೆ ಅವರ ಜೀವನಕ್ರಮವನ್ನು ಈ ಮತಕೇಂದ್ರದಲ್ಲಿ ಪ್ರದರ್ಶಿಸಲಾಗಿತ್ತು.
ಕೊರಗರು ಬಳಸುವ ಡೋಲು, ಮದ್ದಲೆ, ಕೊಳಲು ಹಾಗೂ ಇತರ ವಾದ್ಯಗಳೊಂದಿಗೆ ಅವರು ತಯಾರಿಸುವ ಬುಟ್ಟಿ, ಹೆಡಗೆ, ಕುಕ್ಕೆ ಹಾಗೂ ಇತರ ನಿತ್ಯ ಬಳಸುವ ವಸ್ತುಗಳು ಇಲ್ಲಿ ಪ್ರದರ್ಶಿಸಲ್ಪಟ್ಟಿತ್ತು. ಒಟ್ಟಿನಲ್ಲಿ ಈ ಮತಕೇಂದ್ರ ದಲ್ಲಿ ಅವರು ವಾದ್ಯ ನುಡಿಸುವುದರೊಂದಿಗೆ ಹಬ್ಬದ ವಾತಾವರಣವನ್ನು ನಿರ್ಮಿಸಿದರು. ಕೆರಾಡಿಯ ಈ ಮತಗಟ್ಟೆಯಲ್ಲಿ ಒಟ್ಟು 950 ಮಂದಿ ಬುಡಕಟ್ಟು ಮತದಾರರಿದ್ದಾರೆ.







