ರೈಲಿನಲ್ಲಿ ಅಕ್ರಮ ಹಣ ಸಾಗಾಟ ಪ್ರಕರಣ: ನಗದು ಸಹಿತ ಆರೋಪಿಗಳು ಐಟಿ ಅಧಿಕಾರಿಗಳ ವಶಕ್ಕೆ
ಉಡುಪಿ, ನ.3: ನೇತ್ರಾವತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಯಾವುದೇ ದಾಖಲೆ ಗಳಿಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದ 1.64ಕೋಟಿ ರೂ. ಹಣ ಹಾಗೂ ಮೂವರು ಆರೋಪಿಗಳನ್ನು ಉಡುಪಿ ರೈಲ್ವೆ ಪೊಲೀಸರು ನ. 2ರಂದು ತಡರಾತ್ರಿ ವೇಳೆ ಆದಾಯ ತೆರಿಗೆ ಇಲಾಖೆಯವರಿಗೆ ಹಸ್ತಾಂತರಿಸಿದ್ದು, ಈ ಹಣ ಚಿನ್ನದ ವ್ಯಾಪಾರಕ್ಕೆ ಸಂಬಂಧಿಸಿದ್ದಾಗಿದೆ ಎಂಬ ಶಂಕೆಯಲ್ಲಿ ಇಲಾಖಾಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.
ಉಡುಪಿ ರೈಲ್ವೆ ರಕ್ಷಣಾ ದಳದ ಸಂತೋಷ್ ಗಾಂವ್ಕರ್ ನೇತೃತ್ವದ ತಂಡ ಆರೋಪಿಗಳಾದ ಪ್ರಕಾಶ್, ಗಣೇಶ್ ಹಾಗೂ ಯಶವಂತ್ ಸಿಂಗ್ ಅವರನ್ನು ಮಂಗಳೂರು ಆದಾಯ ತೆರಿಗೆ ಇಲಾಖೆಯ ಜಂಟಿ ನಿರ್ದೇಶಕ ರಶೀದ್ ನೇತೃತ್ವದ ತಂಡಕ್ಕೆ ಒಪ್ಪಿಸಿದೆ. ಈ ಹಣಕ್ಕೆ ಸಂಬಂಧಿಸಿ ಆರೋಪಿಗಳಿಂದ ಪಡೆದ ಮಾಹಿತಿಯಂತೆ ಆದಾಯ ತೆರಿಗೆ ಇಲಾಖೆಯವರು ಕಣ್ಣೂರು, ಸಾಂಗ್ಲಿ, ಹುಬ್ಬಳ್ಳಿ ಸೇರಿದಂತೆ ಹಲವು ಕಡೆ ದಾಳಿ ನಡೆಸಿರುವ ಬಗ್ಗೆ ತಿಳಿದುಬಂದಿದೆ.
ಈ ಹಣದ ಬಗ್ಗೆ ಯಾವುದೇ ದಾಖಲೆಗಳು ಹಾಗೂ ನಿಖರವಾದ ಮಾಹಿತಿ ಲಭ್ಯವಾಗದ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ತಮ್ಮ ತನಿಖೆಯನ್ನು ಮುಂದು ವರೆಸಿದ್ದಾರೆ. ಈ ಹಣ ಅಕ್ರಮ ಎಂಬುದು ಸಾಬೀತಾದ ಬಳಿಕವಷ್ಟೆ ಇಲಾಖಾ ಧಿಕಾರಿಗಳು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಿದ್ದಾರೆನ್ನಲಾಗಿದೆ.
ಯಶವಂತ್ ಈ ಹಣ ತನಗೆ ಸೇರಿದ್ದು, ಉದ್ಯಮ ಹಾಗೂ ಜಾಗದ ಖರೀದಿ ಗಾಗಿ ತರಲಾಗುತ್ತಿದೆ ಎಂಬ ಹೇಳಿಕೆ ನೀಡಿದ್ದರೂ ಇದರ ಹಿಂದೆ ಚಿನ್ನದ ವ್ಯಾಪಾರ ನಂಟು ಇದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದಾಯ ತೆರಿಗೆ ಅಧಿಕಾರಿಗಳು ಇದರ ಜಾಡು ಹಿಡಿದು ತನಿಖೆಯನ್ನು ಮುಂದುವರೆಸಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.







