ಅತ್ಯಂತ ಬಹುಮತಗಳಿಂದ ಗೆಲುವು: ಮೈತ್ರಿ ಅಭ್ಯರ್ಥಿ ಶಿವರಾಮೇಗೌಡ ವಿಶ್ವಾಸ
ಮಂಡ್ಯ ಲೋಕಸಭೆ ಉಪಚುನಾವಣೆ

ನಾಗಮಂಗಲ, ನ.3: ಉಪ ಚುನಾವಣೆಗಳು ಯಾವಾಗಲೂ ನೀರಸವಾಗಿಯೇ ನಡೆಯುತ್ತಿವೆ. ಆದರೂ ಮೈತ್ರಿ ಆಭ್ಯರ್ಥಿ ಪಕ್ಷದ ಅಭ್ಯರ್ಥಿಯಾಗಿ ಅತ್ಯಂತ ಬಹುಮತಗಳಿಂದ ಗೆಲ್ಲುತ್ತೇನೆ ಎಂದು ಮಂಡ್ಯ ಲೋಕಸಭೆ ಉಪಚುನಾವಣಾ ಜೆಡಿಎಸ್ ಅಭ್ಯರ್ಥಿ ಎಲ್.ಆರ್. ಶಿವರಾಮೇಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಮತಗಟ್ಟೆ ಸಂಖ್ಯೆ 94ರಲ್ಲಿ ಪತ್ನಿ ಸುಧಾ ಶಿವರಾಮೇಗೌಡ, ಪುತ್ರಿ ಭವ್ಯ, ಅಳಿಯ ರಾಜೀವ್ ರಾಥೋಡ್‍ರೊಂದಿಗೆ ಆಗಮಿಸಿ ಮತಚಲಾಯಿಸಿ ಮಾತನಾಡಿದ ಅವರು, ಈ ಚುನಾವಣೆ ನನ್ನ ರಾಜಕೀಯ ಜೀವನದ ಪುನರ್ಜನ್ಮಕ್ಕೆ ಮುನ್ನುಡಿಯಾಗಲಿದೆ ಎಂದರು.
ಜೆಡಿಎಸ್ ವರಿಷ್ಠ ದೇವೇಗೌಡ ಮತ್ತು ಸಿಎಂ ಕುಮಾರಸ್ವಾಮಿಯವರ ಆಶಿರ್ವಾದದಿಂದ ಹಾಗೂ ಕಾಂಗ್ರೆಸ್ ಪಕ್ಷದ ಮೈತ್ರಿ ನನ್ನ ಗೆಲುವಿಗೆ ಶ್ರೀರಕ್ಷೆಯಾಗಿದೆ. ಜಿಲ್ಲೆಯಲ್ಲಿ ಬಿಜೆಪಿ ನಗಣ್ಯವಗಿರುವುದರಿಂದ ಅತ್ಯಂತ ಹೆಚ್ಚು ಮತಗಳ ಅಂತರದಲ್ಲಿ ಗೆಲುವು ನನ್ನದಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೈತ್ರಿ ಪಕ್ಷದಲ್ಲಿ ಸಣ್ಣಪುಟ್ಟ ಅಸಮಾಧಾನ ಸಹಜ, ಅದು ಈಗ ಪರಿಗಣಿತವಾಗುವುದಿಲ್ಲ. ಮಂಡ್ಯ ಲೋಕಸಭೆ ಕ್ಷೆತ್ರದ ವ್ಯಾಪ್ತಿಯಲ್ಲಿನ ಸಚಿವರು ಹಾಗೂ ಶಾಸಕರು ಸೇರಿದಂತೆ ಕಾಂಗ್ರೆಸ್‍ನ ಚಲುವರಾಯಸ್ವಾಮಿಯ ಬೆಂಬಲವೂ ನನಗಿರುವುದರಿಂದ ಗೆಲುವು ನನ್ನದೇ ಎಂದು ಅವರು ಹೇಳಿದರು.
ಮುಂದಿನ ಸಾರ್ವತ್ರಿಕ ಚುನಾವಣೆಗೂ ಟಿಕೆಟ್ ಸಿಗಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವರಾಮೇಗೌಡ, ಸದ್ಯ ಈಗ ವರಿಷ್ಟರು ಕೊಟ್ಟ ಕೆಲಸ ಮಾಡುವುದಷ್ಟೆ ನನ್ನ ಕೆಲಸ. ಅದನ್ನು ವರಿಷ್ಟರು ಮುಂದೆ ನಿರ್ಧರಿಸಿಲಿದ್ದಾರೆ ಎಂದರು.
ಮುಖಂಡರಾದ ಟಿ,ಕೃಷ್ಣಪ್ಪ,ರಾಮೇಗೌಡ,ಡಿಟಿ ಶ್ರೀನಿವಾಸ್,ನಾಗೇಶ್ ಇತರರು ಹಾಜರಿದ್ದರು.







