ಮರಳು ಸಮಸ್ಯೆ:ಬಿ.ಸಿ.ರೋಡಿನಲ್ಲಿ ಬಿಜೆಪಿಯಿಂದ ಧರಣಿ ಸತ್ಯಾಗ್ರಹ

ಬಂಟ್ವಾಳ, ನ. 3: ಜಿಲ್ಲೆಯ ಜ್ವಲಂತ ಸಮಸ್ಯೆಗಳಾದ ಮರಳು ಸಮಸ್ಯೆ, ಅಡಕೆ ಕೊಳೆರೋಗದಿಂದ ತೊಂದರೆ ಅನುಭವಿಸುತ್ತಿರುವ ರೈತರಿಗೆ ತಕ್ಷಣ ಪರಿಹಾರ ಮತ್ತು ಭೂಪರಿವರ್ತನೆ ಕಾರ್ಯಗಳು ಸರಳಗೊಳಿಸುವಂತೆ ಒತ್ತಾಯಿಸಿ ಶನಿವಾರ ಬಿ.ಸಿ.ರೋಡಿನ ಮಿನಿ ವಿಧಾನಸೌಧ ಮುಂಭಾಗದಲ್ಲಿ ಒಂದು ದಿನದ ಧರಣಿ ಸತ್ಯಾಗ್ರಹ ನಡೆಯಿತು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಧರಣಿಯ ನೇತೃತ್ವ ವಹಿಸಿ, ಮಾತನಾಡಿ, ಬಂಟ್ವಾಳ ತಾಲೂಕಿನಾಂದ್ಯಂತ ಕಳೆದ ಹಲವಾರು ಸಮಯಗಳಿಂದ ಮರಳಿನ ಸಮಸ್ಯೆಯಿದ್ದು, ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. ಮರಳಿನ ಸಮಸ್ಯೆಯಿಂದಾಗಿ ಅನೇಕ ವಸತಿ ಯೋಜನೆಗಳ ಫಲಾನುಭವಿಗಳು ಮನೆ ಕಟ್ಟಲಾಗದ ಸ್ಥಿತಿ, ಕಟ್ಟಡ ಕಾರ್ಮಿಕರು, ಗುತ್ತಿಗೆದಾರರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಆದರೆ, ದಿನನಿತ್ಯ ಅಕ್ರಮ ಮರಳು ಸಾಗಟ ನಿರಂತರವಾಗಿ ನಡೆಯುತ್ತಿದೆ. ಈ ಜಿಲ್ಲೆಗೆ ಪ್ರತ್ಯೇಕ ಮರಳು ನೀತಿಯ ಮೂಲಕ ಜನಸಾಮಾನ್ಯರಿಗೆ ಕನಿಷ್ಠ ದರದಲ್ಲಿ ಮರಳು ಸಿಗುವ ವ್ಯವಸ್ಥೆಗೆ ಜಿಲ್ಲಾಡಳಿತ ತಕ್ಷಣ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭ ಬಂಟ್ವಾಳ ಬಿಜೆಪಿ ಕ್ಷೇತ್ರಾಧ್ಯಕ್ಷ ಬಿ.ದೇವದಾಸ ಶೆಟ್ಟಿ ಹಾಗೂ ಬಿಜೆಪಿ ಜಿಲ್ಲಾ ವಕ್ತಾರ ಕೆ.ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ಇತ್ತೀಚೆಗೆ ಅತಿವೃಷ್ಟಿಯಿಂದಾಗಿ ಅಡಿಕೆ ಬೆಳೆಗಾರರು ಅಡಿಕೆ ಕೊಳರೋಗದಿಂದಾಗಿ ತೀವ್ರ ನಷ್ಟ ಅನುಭವಿಸಿದ್ದು, ಈಗಾಗಲೇ ಸರ್ವೇ ಕಾರ್ಯ ನಡೆಸಲಾಗಿದ್ದರೂ ಸರ್ವೇ ಕಾರ್ಯ ಪರಿಪೂರ್ಣವಾಗಲ್ಲಿ ತಕ್ಷಣ ಸಮರ್ಪಕವಾಗಿ ಸರ್ವೇ ಕಾರ್ಯ ನಡೆಸುವುದು ಹಾಗೂ ಕೊಳೆರೋಗದಿಂದ ಸಂಕಷ್ಟಕ್ಕೀಡಾದ ರೈತರಿಗೆ ಸೂಕ್ತ ಪರಿಹಾರ ವಿತರಣೆ ಮಾಡಬೇಕು ಎಂದು ಒತ್ತಾಯಿಸಿದರು.
ಭೂಪರಿವರ್ತನೆಯ ಕೆಲಸ ಕಾರ್ಯಗಳು ಸ್ಥಗಿತಗೊಂಡಿದ್ದು, ಕಠಿಣ ನಿಯಮಗಳಿಂದಾಗಿ ಸಮಸ್ಯೆಗಳಾಗಿವೆ. ಭೂ ಪರಿರ್ವತನೆಯ ನಿಯಮವನ್ನು ಸರಳೀಕರಣಗೊಳಿಸಬೇಕು ಎಂದು ಮನವಿ ಮೂಲಕ ಒತ್ತಾಯಿಸಲಾಯಿತು.
ವೇದಿಕೆಯಲ್ಲಿ ಪಕ್ಷ ಪ್ರಮುಖರಾದ ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಿ. ಆನಂದ, ಮೋನಪ್ಪ ದೇವಸ್ಯ, ಸಂಜೀವ ಪೂಜಾರಿ ಪಂಜಿಕಲ್ಲು, ಸುಲೋಚನಾ ಜಿ.ಕೆ.ಭಟ್, ರಾಮದಾಸ್ ಬಂಟ್ವಾಳ, ದಿನೇಶ್ ಅಮ್ಟೂರು, ಅಶೋಕ್ ಶೆಟ್ಟಿ ಸರಪಾಡಿ, ಯಶೋಧರ ಕರ್ಬೆಟ್ಟು, ಪ್ರವೀಣ್ ತುಂಬೆ, ಎ. ಗೋವಿಂದ ಪ್ರಭು ಹಾಜರಿದ್ದರು.
ಧರಣಿ ಬಳಿಕ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಅವರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು.







